ಸಾವಿನ ಆಚೆಗೂ ಸಾವಿರ ನೋವಿದೆ,
ಬದುಕಲು ಇಲ್ಲಿ ಕಾರಣ ಏನಿದೆ…
ಸಾಗುವ ದಾರಿಯಲ್ಲೂ ಸಾವಿರ ನೋವಿದೆ,
ಸಾಧನೆಯ ಹಾದಿಯಲ್ಲೂ ಸಾವಿರ ನೋವಿದೆ…
ಅನುಭವಿಸಿ ಅನುಭವಿಸಿ ಸಾಕಾಗಿ ಹೋಗಿದೆ…
ಹತ್ತಾರು ವರ್ಷದ ಕನಸು ಮಣ್ಣಾಗಿ ಹೋಗಿದೆ,
ಮುಂದಿನ ಬದುಕಿನ ಹಾದಿ ಕಾಣದಾಗಿದೆ,
ಸುತ್ತ-ಮುತ್ತ ಎಲ್ಲವೂ ಕತ್ತಲಾಗಿ ಹೋಗಿದೆ…
ಸಾಗುವ ದಾರಿಯ ತುಂಬಾ ನೋವುಗಳೇ ತುಂಬಿವೆ…
ಕಷ್ಟಗಳು-ನಷ್ಟಗಳು ಸುತ್ತ, ಮುತ್ತ ಮುತ್ತಿವೆ…
ಎತ್ತ ನೋಡಿದರತ್ತ ಅಂಧಕಾರವೇ ತುಂಬಿದೆ…
ಸಾವಿನ ಆಚೆಗೂ ಸಾವಿರ ನೋವಿದೆ,
ಬದುಕಲು ಇಲ್ಲಿ ಕಾರಣ ಏನಿದೆ…
ಕಣ್ಣಾಮುಚ್ಚೆ ಆಟದಲ್ಲಿ ಬದುಕು ಶೂನ್ಯವಾಗಿದೆ…
ಶೂನ್ಯದಿಂದ ಕಲಿತ ಬುದ್ಧಿ ಇಂದು ಮರೆತುಹೋಗಿದೆ…
ಆಗಸವು ಮಳೆಯ ರೂಪದಿ ಕಣ್ಣೀರ ಸುರಿಸುವುದಂತೆ…
ನಮ್ಮ ಕಣ್ಣೀರ ಒರೆಸಲು ಇಲ್ಲಿ ಯಾರೂ ಇಲ್ಲವಂತೆ,
ಇದ್ದರೂ ಇಲ್ಲದಂತೆ ಬದುಕುವರಂತೆ…
ಈ ಜಗದ ಕೆಲವು ಜನರು ಕೊಂಕು ಮಾತು ಆಡುವರಂತೆ…
ಪ್ರತಿಯೊಂದು ಮಾತಿನಲ್ಲೂ ಮನದೊಳಗೆ ಚುಚ್ಚುವರಂತೆ,
ಮತ್ತೆ ಏನೂ ಅರಿಯದಂತೆ ಸಮಾಧಾನ ಮಾಡುವರಂತೆ…
ಅಂತೆ-ಕಂತೆಗಳ ಸಂತೆಯಲ್ಲಿ ನಾವು ಒಂಟಿಯಾದೆವಂತೆ…
ಎಲ್ಲಾ ತಿಳಿದರೂ ತಿಳಿಯದಂತೆ ಇದ್ದು ಬಿಡಬೇಕಂತೆ…
ಸಾವಿನ ಆಚೆಗೂ ಸಾವಿರ ನೋವಿದೆ,
ಬದುಕಲು ಇಲ್ಲಿ ಕಾರಣ ಏನಿದೆ…
ಹುಟ್ಟು-ಸಾವು ಬದುಕಿನಲ್ಲಿ ಕಷ್ಟಗಳೇ ತುಂಬಿದೆ…
ನಾನು ಎಂಬ ಭ್ರಮೆಯು ಇಲ್ಲಿ ಜಗದ ತುಂಬಾ ಹಬ್ಬಿದೆ…
ಕಷ್ಟ-ನಷ್ಟಗಳ ಬದುಕಿನಲ್ಲಿ ಸಾಗುವುದೊಂದೆ ಉಳಿದಿದೆ,
ಸಾಗದೇ ಬೇರೆ ವಿಧಿಯು ಇಲ್ಲಿ ಕಾಣದಾಗಿದೆ…
✍ಉಲ್ಲಾಸ್ ಕಜ್ಜೋಡಿ