ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಛೇರಿ ಸಭಾಂಗಣದಲ್ಲಿ ನ.25 ರ ಗುರುವಾರದಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಅವರ ಅಧ್ಯಕ್ಷತೆಯಲ್ಲಿ ಚಂಪಾಷಷ್ಠಿ ಹಾಗೂ ಲಕ್ಷ ದೀಪೋತ್ಸವದ ಪೂರ್ವಭಾವಿ ಸಭೆ ನಡೆಯಿತು.
ಲಕ್ಷ ದೀಪೋತ್ಸವವನ್ನು ಸಂಘ-ಸಂಸ್ಥೆಗಳ ಸಹಕಾರದಲ್ಲಿ ನಡೆಸಲಾಗುವುದು. ಲಕ್ಷ ದೀಪ ಹಚ್ಚುವ ಹಾಗೂ ಭಜನಾ ಕಾರ್ಯಕ್ರಮ ನಡೆಯಲಿದ್ದು, ದೇವಳದ ವತಿಯಿಂದ ಹಣತೆ, ಎಣ್ಣೆ ಹಾಗೂ ಬತ್ತಿಯ ವ್ಯವಸ್ಥೆ ಮಾಡಲಾಗುತ್ತದೆ.
ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ನಡೆಯುವ ಬೀದಿ ಉರುಳು ಸೇವೆಗೆ ಸಹಕಾರಿಯಾಗಲು ಶೀಘ್ರ ಉರುಳು ಸೇವೆ ನಡೆಯುವ ಪಥ ಶುಚಿತ್ವ ಕಾರ್ಯ ನಡೆದು, ನೀರು ಹಾಕಿ ಸ್ವಚ್ಛಗೊಳಿಸಲಾಗುತ್ತದೆ. ಉರುಳು ಸೇವೆ ನಡೆಯುವ ಪಥದಲ್ಲಿ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಇನ್ನೊಂದು ಪಥದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಬೆಳಿಗ್ಗೆ ಬೇಗನೆ ಬೀದಿ ಉರುಳು ಸೇವೆಯನ್ನು ಆರಂಭಿಸಲು ವಿನಂತಿಸಲಾಗಿದೆ. ಬ್ರಹ್ಮ ರಥ ಸೇವೆ ನಡೆಸುವ ಸೇವಾರ್ಥಿಗಳಿಗೆ ಎರಡು ಮಂದಿಗೆ ಹಾಗೂ ಸಂಘ-ಸಂಸ್ಥೆಯ ಪ್ರಮುಖರಿಗೆ ಬ್ರಹ್ಮ ರಥದಲ್ಲಿ ಭಾಗವಹಿಸಲು ಅವಕಾಶ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಬ್ರಹ್ಮ ರಥ ಎಳೆಯುವ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ ಹಾಗೂ ರಕ್ಷಣಾ ವ್ಯವಸ್ಥೆ ಕೈಗೊಳ್ಳಲು ಪೋಲಿಸ್ ವೃತ್ತ ನಿರೀಕ್ಷಕರಲ್ಲಿ ಮಾಹಿತಿ ನೀಡಲಾಗಿದೆ ಎಂದು ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯರು, ದೇವಳದ ಅಧಿಕಾರಿಗಳು, ಸಿಬ್ಬಂದಿಗಳು, ಸಂಘ-ಸಂಸ್ಥೆಗಳ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ :- ಉಲ್ಲಾಸ್ ಕಜ್ಜೋಡಿ