ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆಡಳಿತ ಮಂಡಳಿಯ ಅಧ್ಯಯನ ಪ್ರವಾಸವು ನ. 24ರಿಂದ ನ. 26ರವರೆಗೆ ನಡೆಯಿತು.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ. ಸಂಸ್ಥೆಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದು ಸಹಕಾರ ಕ್ಷೇತ್ರದ ಬೆಳವಣಿಗೆ ಕುರಿತಂತೆ ಮಾಹಿತಿಯನ್ನು ಪಡೆದೆವು. ಈ ಸಂಸ್ಥೆಯು 1921 ರಲ್ಲಿ ಸ್ಥಾಪನೆಗೊಂಡಿದ್ದು ಪ್ರಸ್ತುತ ರೂ. 630 ಕೋಟಿ ವ್ಯವಹಾರವನ್ನು ನಡೆಸುತ್ತಿದೆ. 346 ಕೋಟಿ ರೂ ದುಡಿಯುವ ಬಂಡವಾಳವನ್ನು ಹೊಂದಿದೆ. ಕಳೆದ ಸಾಲಿನಲ್ಲಿ ರೂ. 2 ಕೋಟಿ ಲಾಭ ಗಳಿಸಿದ್ದು, ಇಲ್ಲಿ 4000 ಜನರು ಖಾಯಂ ಉದ್ಯೋಗಿಗಳು ದುಡಿಯುತ್ತಿದ್ದಾರೆ. ಪ್ರಸ್ತುತ ಶಾಂತರಾಮ ವೆಂ. ಹೆಗಡೆ ಅಧ್ಯಕ್ಷರಾಗಿದ್ದು ಸಹಕಾರ ಕ್ಷೇತ್ರದ ಬೆಳವಣಿಗೆಯ ಹಿಂದಿನ ಶ್ರಮದ ಕುರಿತು ಮಾಹಿತಿಯನ್ನು ನೀಡಿರುತ್ತಾರೆ. ಅತ್ಯಾಧುನಿಕ ಕೃಷಿ ಸಲಕರಣೆ ಮಳಿಗೆ, ಕಿರಣಿ ವಿಭಾಗ, ಸುಸಜ್ಜಿತ ಅಡಿಕೆ ಸಂಸ್ಕರಣಾ ಘಟಕ, ಅಡಿಕೆ ಗೋದಾಮು, ಕಾಳುಮೆಣಸು ಗೋದಾಮು, ಜವುಳಿ ವಿಭಾಗ, ಚಿನ್ನದ ಮಳಿಗೆ, ಸೂಪರ್ ಮಾರ್ಕೆಟ್ ಹೀಗೆ ಪ್ರತಿನಿತ್ಯ ಬಳಸುವ ವಸ್ತುಗಳನ್ನೊಳಗೊಂಡ ಬೃಹತ್ ವ್ಯಾಪಾರ ಮಳಿಗೆಯನ್ನು ಈ ಸಂಸ್ಥೆ ಹೊಂದಿರುತ್ತದೆ. ಸೇವೆಗೆ ಹೆಚ್ಚಿನ ಮಹತ್ವವನ್ನು ನೀಡುತ್ತಿದ್ದು ಎಲ್ಲರಿಗೂ ಮಾದರಿ ಸಂಸ್ಥೆಯಾಗಿದೆ. ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಸಂಸ್ಥೆಯು ಸುಮಾರು 40 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ರೈತರು ಬೆಳೆದ ಎಲ್ಲಾ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ರೈತರಿಗೆ ಎಲ್ಲಾ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹಿಸುತ್ತಿದೆ. ಸುಸಜ್ಜಿತ ತೆಂಗಿನಕಾಯಿ ಗೋದಾಮು ಹಾಗೂ ಸಂಸ್ಕರಣಾ ಘಟಕವನ್ನು ಹೊಂದಿದೆ. ರೈತರು ನೀಡಿದ ಕಚ್ಚಾ ವಸ್ತುಗಳನ್ನು ಸಂಸ್ಕರಿಸಿ ಮಾರಾಟ ಮಾಡುತ್ತಿದೆ. ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ನಿ. ಶಿರಸಿ, ತಾಲೂಕು ವ್ಯವಸಾಯ ಹುಟ್ಟುವಳಿಗಳ ಸಹಕಾರಿ ಮಾರಾಟ ಸಂಘ ನಿ. ಶಿರಸಿ, ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಉಮಚಗಿ ಮುಂತಾದ ಸಹಕಾರಿ ಸಂಸ್ಥೆಗೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು. ಪ್ರಸ್ತುತ ಕ್ಯಾಂಪ್ಕೋ ನಿರ್ದೇಶಕರಾದ ಶಂಭುಲಿಂಗ ಹೆಗ್ಡೆಯವರು ಕ್ಯಾಂಪ್ಕೋ ಗೋದಾಮಿನ ಬಗ್ಗೆ ಮಾಹಿತಿ ನೀಡಿದರು.
ರೈತರ ಅಭಿವೃದ್ಧಿಗೆ ದಲ್ಲಾಳಿ ಹಾವಳಿ ನಿಲ್ಲಬೇಕು, ಇದಕ್ಕಾಗಿ ನಾವು ಟೆಂಡರ್ ವ್ಯವಸ್ಥೆ ಕಲ್ಪಿಸಿದ್ದೇವೆ. ಇದು ರೈತರಿಗೆ ಉತ್ತಮ ಮಾರುಕಟ್ಟೆ ನೀಡುತ್ತಿದೆ. ಇದರಿಂದ ಎಲ್ಲರೂ ಇಲ್ಲೇ ವ್ಯವಹರಿಸುತ್ತಾರೆ ಎಂದರು. ಇವರ ಸಾಧನೆಯ ಮಾಹಿತಿಯು ಬಹಳ ಸ್ಪೂರ್ತಿದಾಯಕವಾಗಿದೆ. ಎಲ್ಲಾ ಸಂಸ್ಥೆಯವರು ಉತ್ತಮ ಅತಿಥ್ಯ ನೀಡಿರುತ್ತಾರೆ.
ಕದಂಬ ಹುಟ್ಟುವಳಿ ಮಾರಾಟಗಾರರ ಸಹಕಾರಿ ಸಂಘ ನಿ., ತ್ಯಾಗಲಿ ಸೇವಾ ಸಹಕಾರಿ ಸಂಘ ನಿ. ಸಿದ್ದಾಪುರ ತಾಲೂಕು, ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಉಮಚಗಿ, ಹುಳಗೋಳ ವ್ಯವಸಾಯ ಸೇವಾ ಸಹಕಾರ ಸಂಘ ನಿ. ಹುಳಗೋಳ, ಭೈರುಂಬೆ ವ್ಯವಸಾಯ ಸೇವಾ ಸಹಕಾರ ಸಂಘ ನಿಯಮಿತ ಭೈರುಂಬೆ, ತೋಟಕಾರ್ಸ್ ಸೇವಾ ಸಹಕಾರ ಸಂಘ ನಿಯಮಿತ(ಟಿ.ಎಸ್.ಎಸ್.), ತಾಲೂಕು ಕೃಷಿ ಉತ್ಪನ್ನ ಮಾರಾಟಗಾರರ ಸೇವಾ ಸಹಕಾರ ಸಂಘ(ಟಿ.ಎ.ಪಿ.ಸಿ.ಎಂ.ಎಸ್.) ಹಾಗೂ ಕ್ಯಾಂಪ್ಕೋ ನಿ. ಇದರ ಶಿರಸಿ ಪ್ರಾದೇಶಿಕ ಕಛೇರಿಗೂ ಭೇಟಿ ನಿಡಿದೆವು. ಈ ಸಂದರ್ಭ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹಕಾರ ಸಂಘಗಳ ಯಶಸ್ವಿಗೆ ಕಾರಣವಾದ ಅಂಶಗಳ ಬಗ್ಗೆ ತಿಳಿದುಕೊಂಡೆವು.
ಪ್ಯಾಕ್ಸಗಳು ಜನರಿಗೆ ನೀಡುತ್ತಿರುವ ಸೇವೆಗಳನ್ನು ಹಾಗೂ ಅಲ್ಲಿನ ರೈತ ಸದಸ್ಯರು ಸಹಕಾರ ತತ್ವದ ಬಗ್ಗೆ ಇಟ್ಟಿರುವ ನಂಬಿಕೆಯೇ ಆ ಜಿಲ್ಲೆಯಲ್ಲಿ ಸಹಕಾರ ಸಂಘಗಳು ಹೆಮ್ಮರವಾಗಿ ಬೆಳೆದು ನಿಲ್ಲಲು ಕಾರಣವಾಗಿದೆ. ತಾಲೂಕು ಮಟ್ಟದ ಸಂಸ್ಥೆಗಳಾದ ಕದಂಬ, ಟಿ.ಎಸ್.ಎಸ್., ಟಿ.ಎಂ.ಸಿ. ಇವುಗಳ ಯಶಸ್ಸಿನಲ್ಲಿ ರೈತರ ಪಾತ್ರ ಬಹುಮುಖ್ಯವಾಗಿದೆ. ಅಧ್ಯಯನ ಪ್ರವಾಸ ಕೈಗೊಂಡ ಪ್ರತಿಯೊಂದು ಸಹಕಾರ ಸಂಘದಲ್ಲಿ ಸದಸ್ಯರಿಗೆ ಬೇಕಾಗುವ ಎಲ್ಲಾ ಸಾಮಾಗ್ರಿಗಳು ಲಭ್ಯವಿದ್ದು ಸದಸ್ಯರು ಇನ್ನಿತರ ಯಾವುದೇ ಅಂಗಡಿ ಅಥವಾ ಮಾಲ್ ಗಳನ್ನು ಹುಡುಕಾಡುವ ಅಗತ್ಯವಿರುವುದಿಲ್ಲ.
ಅಧ್ಯಯನ ಪ್ರವಾಸದಲ್ಲಿ ಸಂಘದ ಅಧ್ಯಕ್ಷ ಎಂ ಕೂಸಪ್ಪ ಗೌಡ, ನಿರ್ದೇಶಕರಾದ ಎನ್. ವಿಶ್ವನಾಥ ರೈ, ಎನ್ ಕರುಣಾಕರ ಶೆಟ್ಟಿ, ಎ. ಭಾರತೀಶಂಕರ, ಬಿ. ಸುಭಾಶ್ಚಂದ್ರ ರೈ, ಟಿ. ಮೇದಪ್ಪ ಗೌಡ, ಸುಬ್ರಹ್ಮಣ್ಯ ಕೆ.ಎಲ್., ಶುಭಕುಮಾರ ಬಿ., ವಿಶ್ವನಾಥ ಪರವ, ಶ್ರೀಮತಿ ಪಂಕಜಾಕ್ಷಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ರಮೇಶ ನಾಯಕ್, ಸಿಬ್ಬಂದಿ ಶ್ರೀಮತಿ ಗೀತಾಶ್ರೀ ಇದ್ದರು. ಕದಂಬ ಹುಟ್ಟುವಳಿ ಮಾರಾಟಗಾರರ ಸಹಕಾರಿ ಸಂಘ ನಿ., ಇದರ ಅಧ್ಯಕ್ಷರಾದ ಶ್ರೀ ಶಂಭುಲಿಂಗ ಹೆಗಡೆ ಇವರ ನಿರ್ದೇಶನದಂತೆ ಸಂತೋಷ ಹೆಗಡೆ ಶಿರಸಿ ಇವರು ಅಧ್ಯಯನ ಪ್ರವಾಸಕ್ಕೆ ಮಾರ್ಗದರ್ಶನವನ್ನು ನೀಡಿದ್ದರು. ಅಧ್ಯಯನ ಪ್ರವಾಸವು ನಮ್ಮೆಲ್ಲಾ ನಿರ್ದೇಶಕರಿಗೆ ಹೊಸ ಸ್ಪೂರ್ತಿಯನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ನಮ್ಮ ಸಂಘದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.