ಸುಳ್ಯ: ಮುಖ್ಯ ಕೃಷಿಯ ನಡುವೆ ಉಪಬೆಳೆಯಾಗಿ ಅತೀ ಕಡಿಮೆ ಖರ್ಚಿನಲ್ಲಿ ಬೆಳೆಯಬಹುದಾದ ಅಗರ್ ವುಡ್ ನಿಂದ ಹೆಚ್ಚು ಆದಾಯ ಗಳಿಸಲು ಸಾಧ್ಯ. ಆದರೆ ಕೃಷಿಕರು ಈ ಬಗ್ಗೆ ಒಂದಷ್ಟು ತಾಂತ್ರಿಕ ಮಾಹಿತಿಯನ್ನು ಪಡೆದುಕೊಳ್ಳಬೇಕು ಎಂದು ಶೃಂಗೇರಿಯ ವನದುರ್ಗಿ ಇಂಡಿಯಾ ಸಂಸ್ಥೆಯ ಅಧ್ಯಕ್ಷ ಧರ್ಮೇಂದ್ರ ಕುಮಾರ್ ಹೆಗಡೆ ಹೇಳಿದರು.
ಅವರು ಭಾನುವಾರ ಸುಳ್ಯ ತಾಲೂಕಿನ ಮೇನಾಲದಲ್ಲಿ ಕಿರಣ್ ರೈಯವರ ಕೃಷಿ ತೋಟದಲ್ಲಿ ನಡೆದ ಅಗರ್ ವುಡ್ ಕೃಷಿ ವಿಚಾರ ಸಂಕಿರಣದಲ್ಲಿ ಮಾಹಿತಿ ನೀಡುತ್ತಾ ಮಾತನಾಡಿದರು. ಅಗರ್ ವುಡ್ ಗೆ ಹೆಚ್ಚು ನೀರು ಗೊಬ್ಬರ ಬೇಕಾಗಿಲ್ಲ. 10-12 ವರ್ಷದಲ್ಲಿ ಕಟಾವಿಗೆ ಬರುತ್ತದೆ. ಆ ಸಂದರ್ಭದಲ್ಲಿ ಅಗರ್ ಉತ್ಪಾದನೆಯಾಗಲು ಔಷಧಿಯನ್ನು ಇಂಜಕ್ಟ್ ಮಾಡಿಸಬೇಕು. ಇದರಿಂದ ಮರವೊಂದಕ್ಕೆ ರೂ. 10,000ದಿಂದ 1ಲಕ್ಷದವರೆಗೆ ಆದಾಯ ಬರುತ್ತದೆ ಎಂದು ಮಾಹಿತಿ ನೀಡಿದ ಅವರು ಸುಳ್ಯದಲ್ಲಿ ಸುಮಾರು 650 ಮಂದಿ ಅಗರ್ ವುಡ್ ಬೆಳೆಸಿದ್ದು, ಅದು ಕಟಾವಿಗೆ ಸಿದ್ಧವಾಗಿದೆ. ಕೃಷಿಕರು ಮರಕ್ಕೆ ಔಷಧಿ ಹಾಕಿಸಿಕೊಂಡರೆ ವನದುರ್ಗಿ ಸಂಸ್ಥೆ ಮಾರಾಟದ ವ್ಯವಸ್ಥೆ ಮಾಡುತ್ತದೆ ಎಂದವರು ತಿಳಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಕೃಷಿಕರು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು.
ಸುಳ್ಯದಲ್ಲಿ ಸಂಪರ್ಕ ಕೇಂದ್ರವನ್ನು ತೆರೆಯುವುದಾಗಿ ಧರ್ಮೇಂದ್ರ ಭರವಸೆ ನೀಡಿದರು.
ಹಿರಿಯ ಕೃಷಿಕ ಮೇನಾಲ ವಿಠಲ ಆಳ್ವ ಸಭಾಧ್ಯಕ್ಷತೆ ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಿರಸಿಯ ಜಿ. ಮಂಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಭಟ್ ತಮ್ಮ ಕೃಷಿ ಅನುಭವಗಳನ್ನು ಹಂಚಿಕೊಂಡರು. ಸುಳ್ಯದ ಜೇನು ಕೃಷಿಕರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರು, ಸುಳ್ಯ ಎ. ಪ. ಎಂ.ಸಿ. ಮಾಜಿ ಅಧ್ಯಕ್ಷ ಅಡ್ಡಂತಡ್ಕ ದೇರಣ್ಣ ಗೌಡ ಅತಿಥಿಗಳಾಗಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಕೃಷಿಕ ಜಯರಾಮ ಕಲ್ಲಾಜೆ ಸ್ವಾಗತಿಸಿ, ಸಂಸ್ಥೆಯ ಮಾರುಕಟ್ಟೆ ವ್ಯವಸ್ಥಾಪಕ ಸುಹಾಸ್ ವಂದಿಸಿದರು. ವ್ಯವಸ್ಥಾಪಕ ಸಚಿನ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಪ್ರವರ್ತಕ ಪ್ರವೀಣ್ ಚಂದ್ರ ಸಹಕರಿಸಿದರು.
- Thursday
- November 21st, 2024