ಮಾಡಾವು ಸಬ್ ಸ್ಟೇಷನ್ ನಿಂದ ಬೆಳ್ಳಾರೆ, ನಿಂತಿಕಲ್ಲು, ಪಂಜದ ಮೂಲಕ ಗುತ್ತಿಗಾರಿಗೆ ಹಾದುಹೋಗಿರುವ ಎಚ್.ಟಿ ವಿದ್ಯುತ್ ಲೈನ್ ಕಂಬಗಳಲ್ಲಿ ಅಳವಡಿಸಲಾಗಿದ್ದ ‘ಅಪಾಯ'(DANGER) ಸೂಚನಾ ಬೋರ್ಡ್ ಗಳು ಬರಿದಾಗಿದ್ದು, ಖಾಲಿ ಖಾಲಿ ಬೋರ್ಡ್ ಗಳು ಕಾಣಸಿಗುತ್ತಿವೆ. ಜನರಿಗೆ ಅಪಾಯ ಎಂಬುದನ್ನು ಮನವರಿಕೆ ಮಾಡುವ ಮೂಲಕ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಹಾಕಲಾಗಿರುವ ಈ ಸೂಚನಾ ಫಲಕಗಳು ಅಗತ್ಯವಿದ್ದು, ಅಕ್ಷರಗಳು ಮಾಯವಾಗಿ ಬರಿದಾಗಿದೆ.
ಇತ್ತೀಚೆಗಷ್ಟೇ ಈ ಬೋರ್ಡ್ ಗಳನ್ನು ಅಳವಡಿಸಲಾಗಿದ್ದರೂ ಖಾಲಿ ಬೋರ್ಡ್ ಗಳು ನೇತಾಡುತ್ತಿರುವುದು ವಿದ್ಯುತ್ ಇಲಾಖೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಂತಿದೆ. ಈ ಹಿಂದೆ ಅಳವಡಿಸಲಾಗಿದ್ದ ಬೋರ್ಡ್ ಗಳಲ್ಲಿ ಈಗಲೂ ಅಕ್ಷರಗಳು ಸ್ಪಷ್ಟವಾಗಿ ಕಾಣುತ್ತಿದ್ದು, ಇತ್ತೀಚೆಗೆ ಹಾಕಲಾದ ಬೋರ್ಡ್ ಗಳು ಬರಿದಾಗಿರುವುದು ಕಳಪೆ ಗುಣಮಟ್ಟದ ಬೋರ್ಡ್ ಗಳ ಬಳಕೆಯಿಂದ ಎಂಬುದು ತಿಳಿಯುತ್ತದೆ. ಇದರಿಂದ ಇವುಗಳು ಲೆಕ್ಕಕಷ್ಟೇ ಎಂಬಂತೆ ಭಾಸವಾಗುತ್ತದೆ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ.