ಕಡಬ ತಾಲೂಕಿನ ಕಡ್ಯ ಕೊಣಾಜೆ ವ್ಯಾಪ್ತಿಯಲ್ಲಿ ಹಾಡುಹಗಲೇ ಕಾಡಾನೆಗಳು ಮನೆ ಅಂಗಳಕ್ಕೆ ಹಾಗೂ ತೋಟಕ್ಕೆ ಲಗ್ಗೆ ಇಟ್ಟು ಜನರನ್ನು ಭಯಭೀತಗೊಳಿಸುತ್ತಿರುವ ಘಟನೆ ನಡೆದಿದ್ದು, ಸುಬ್ರಹ್ಮಣ್ಯ ವಲಯ ಅರಣ್ಯ ವ್ಯಾಪ್ತಿಯ ಕಡ್ಯ ಕೊಣಾಜೆ ಗ್ರಾಮಪಂಚಾಯತ್ ವ್ಯಾಪ್ತಿಯ ಕಡ್ಯ ಪ್ರದೇಶದಲ್ಲಿ ಕಾಡಾನೆ ರಾತ್ರಿ ಹಾಗೂ ಹಗಲಲ್ಲೂ ತೋಟಗಳಿಗೆ ನುಗ್ಗಿ ಕೃಷಿ ನಾಶಪಡಿಸುತ್ತಿರುವ ದೂರುಗಳು ಕೇಳಿಬಂದಿವೆ.
ಮಧುಸೂದನ್ ಭಟ್ ಕಡ್ಯ, ನರಸಿಂಹ ಭಟ್ ಪೆರಡೆ, ರವಿಪ್ರಸಾದ್ ಭಟ್ ಗುಜ್ಜಲ, ರವೀಂದ್ರ ಬತ್ತಿಲ್, ನಾಗರಾಜ್ ಭಟ್ ಕಡ್ಯ ಹಾಗೂ ಇತರರ ತೋಟಗಳಿಗೆ ಲಗ್ಗೆ ಇಟ್ಟಿರುವ ಕಾಡಾನೆ ನೂರಾರು ಅಡಿಕೆ, ಬಾಳೆ ಸೇರಿದಂತೆ ಇತರೆ ಕೃಷಿಗಳನ್ನು ನಾಶಪಡಿಸಿದೆ ಎಂದು ತಿಳಿದುಬಂದಿದೆ.
ಕಾಡಾನೆಗಳ ಉಪಟಳದಿಂದ ಜನರು ಭಯಭೀತರಾಗಿದ್ದು, ಹಗಲಿನಲ್ಲೂ ಮನೆಯಿಂದ ಹೊರಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ