ಸುಳ್ಯ ತಾಲೂಕಿನ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನಲ್ಲಿ “ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ” ಯೋಜನೆಯ ಅಡಿಯಲ್ಲಿ “ಗ್ರಾಮೀಣ ಉದ್ಯಾನವನ” ಎಂಬ ಪರಿಕಲ್ಪನೆಯಲ್ಲಿ ಗ್ರಾಮಪಂಚಾಯತ್ ವಠಾರದಲ್ಲಿ ಉದ್ಯಾನವನ ನಿರ್ಮಾಣಗೊಂಡಿದೆ.
ಇಲ್ಲಿ ಹಚ್ಚ ಹಸಿರಿನ ಹುಲ್ಲು, ವಿವಿಧ ಜಾತಿಯ ಹೂವಿನ ಗಿಡಗಳನ್ನು ನೆಡಲಾಗಿದ್ದು, ಕೆಲವು ಗಿಡಗಳಿಗೆ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಉದ್ಯಾನವನಕ್ಕೆ ನೀರು ಹಾಯಿಸಲು ನೀರಿನ ವ್ಯವಸ್ಥೆ ಇದೆ. ನಡೆದಾಡಲು ದಾರಿಯನ್ನು ನಿರ್ಮಿಸಲಾಗಿದೆ. ಹಾಗೂ ಸ್ವಚ್ಛತೆಗೆ ಹೆಚ್ಚಿನ ಗಮನ ಕೊಡಲಾಗುತ್ತದೆ. ಒಟ್ಟಿನಲ್ಲಿ ಈ ಹಸಿರು ಉದ್ಯಾನವನವು ಗ್ರಾಮಪಂಚಾಯತ್ ನ ಸೌಂದರ್ಯವನ್ನು ಹೆಚ್ಚಿಸಿದೆ.
ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ವಠಾರದಲ್ಲಿ ನಿರ್ಮಾಣಗೊಂಡ ಈ ಉದ್ಯಾನವನ 2021-22ನೇ ಸಾಲಿನಲ್ಲಿ ನಿರ್ಮಾಣ ಮಾಡಲಾಗಿದ್ದು, ಅಂದಾಜು ಸುಮಾರು 2.5 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಡೆದಿದೆ. ಹಾಗೂ ಈ ಉದ್ಯಾನವನದ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ನಿರ್ವಹಿಸಲಿದೆ. ಹಾಗೂ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿದೆ. ಈಗಾಗಲೇ ಸಾರ್ವಜನಿಕರು ಉದ್ಯಾನವನ ವೀಕ್ಷಣೆಗೆ ಬರಲು ಆರಂಭಿಸಿದ್ದಾರೆ. ಉದ್ಯಾನವನಕ್ಕೆ ಅಂತಿಮ ಸ್ಪರ್ಶ ನೀಡಲು ಬಾಕಿ ಇದೆ. ಹಾಗೂ ಈ ಉದ್ಯಾನವನವನ್ನು ವೀಕ್ಷಿಸಲು ಆಗಮಿಸುವ ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಹಾಗೂ ಪ್ರಾಣಿ ಪಕ್ಷಿಗಳಿಂದ ಉದ್ಯಾನವನವನ್ನು ರಕ್ಷಿಸಲು ಫೈಬರ್ ಕೇಬಲ್, ಬೇಲಿ ವ್ಯವಸ್ಥೆ ಹಾಗೂ ಇತರ ಕೆಲಸಗಳು ಬಾಕಿ ಇದ್ದು ಇನ್ನು ಆಗಬೇಕಿವೆ ಎಂದು ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಮಣಿಯಾನ ಅವರು ಹೇಳಿದ್ದಾರೆ.
ವರದಿ :- ಉಲ್ಲಾಸ್ ಕಜ್ಜೋಡಿ