
ಜಾತ್ರಾ ಮಹೋತ್ಸವವನ್ನು ಸುಸೂತ್ರವಾಗಿ ನಡೆಸಲು ಸರ್ವ ಭಕ್ತರ ಸಹಕಾರ ಅತ್ಯಗತ್ಯ. ಸೂಕ್ತ ಯೋಜಿತ ಚಿಂತನೆ ಮೂಲಕ ಶ್ರೀ ದೇವತಾ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಲು ಎಲ್ಲಾ ಭಕ್ತರು ಮತ್ತು ಇಲಾಖಾಧಿಕಾರಿಗಳು ಸಂಪೂರ್ಣ ಸಹಕಾರ ನೀಡಬೇಕು. ಜಾತ್ರಾ ಸಮಯದಲ್ಲಿ ಆಗಬೇಕಾದ ಕಾರ್ಯಗಳ ಬಗ್ಗೆ ವಿಶೇಷ ಮುತುವರ್ಜಿ ವಹಿಸಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು.ಈ ಹಿಂದಿನಂತೆ ಯಾವುದೇ ಗೊಂದಲವಿಲ್ಲದೆ ಜಾತ್ರೆ ನೆರವೇರಲು ಸರ್ವರೂ ಸಹಕರಿಸಬೇಕು.ಕೋವಿಡ್ ನಿಯಮಗಳನ್ನು ಹಾಗೂ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಜಾತ್ರೋತ್ಸವವು ಸಾಂಗವಾಗಿ ನೆರವೇರಲು ಬೇಕಾದ ಸಕಲ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ನುಡಿದರು.
ಪುಣ್ಯ ಕ್ಷೇತ್ರ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಯುವ ಶ್ರೀ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಾತ್ರಾ ಸಂದರ್ಭದಲ್ಲಿ ಆಗಮಿಸುವ ಅಧಿಕ ಭಕ್ತ ವೃಂದಕ್ಕೆ ಯಾವುದೇ ರೀತಿಯ ಸಮಸ್ಯೆಗಳು ಸೃಷ್ಠಿಯಾಗದಂತೆ ಕ್ರಮವಹಿಸುವುದು ಅತ್ಯಗತ್ಯ.ಆದುದರಿಂದ ಜಾತ್ರೋತ್ಸವದ ಯಶಸ್ವಿಯಾಗಿ ನಡೆಯಲು ವಿನೂತನ ಯೋಜನೆಗಳ ಮೂಲಕ ಕಾರ್ಯಪ್ರವೃತ್ತರಾಗೋಣ ಎಂದರು.
ಸ್ವಯಂಸೇವಕರ ದುಡಿಮೆ ಪ್ರಧಾನ: ಮೋಹನರಾಂ ಸುಳ್ಳಿ
ಸಂಪ್ರದಾಯಕ್ಕೆ ಅನುಗುಣವಾಗಿ ಮತ್ತು ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಿಕೊಂಡು ಜಾತ್ರೋತ್ಸವವು ನಡೆಯಲಿದೆ.ಈ ಹಿಂದಿನಂತೆ ಭಕ್ತರಿಗೆ ಬೇಕಾದ ಸುಸಜ್ಜಿತ ಅನುಕೂಲತೆಗಳನ್ನು ಮಾಡಿಕೊಂಡು ಜಾತ್ರೋತ್ಸವ ನೆರವೇರಲಿದೆ.ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಜಾತ್ರೋತ್ಸವದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡು ಚಂಪಾಷಷ್ಠಿ ಮಹೋತ್ಸವ ಸಾಂಗವಾಗಿ ನೆರವೇರಲು ಸಹಕರಿಸಬೇಕು ಎಂದು ಸಭೆಯಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಹೇಳಿದರು.
ಮಾದರಿ ಜಾತ್ರೋತ್ಸವವಾಗಲಿ: ಕಶೆಕೋಡಿ
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರೋತ್ಸವವು ಅತ್ಯಂತ ಪ್ರಸಿದ್ಧವಾಗಿದೆ.ಸರ್ವ ಭಕ್ತರು ಕಲೆತು ಪರಸ್ಪರ ಸೌಹಾರ್ಧಯುತ ಸೇವೆಯ ಮೂಲಕ ಈ ಬಾರಿ ಮಾದರಿ ಜಾತ್ರಾ ಮಹೋತ್ಸವ ಸಂಪನ್ನವಾಗಲಿ.ಸರ್ವ ಭಕ್ತರಿಗೆ ಸ್ವಯಂಸೇವೆ ನೆರವೇರಿಸಲು ಅವಕಾಶ ನೀಡುವುದು ಅತ್ಯಗತ್ಯ. ಈ ಮೂಲಕ ಸರ್ವ ಸ್ವಯಂಸೇವಕರು ಮತ್ತು ಸಂಘ ಸಂಸ್ಥೆಗಳು ಜಾತ್ರೆಯ ಸಂಪನ್ನತೆಗೆ ವಿಶೇಷ ಮುತುವರ್ಜಿ ವಹಿಸಬೇಕು. ಸರ್ವ ಭಕ್ತರು ಜಾತ್ರೋತ್ಸವದ ಸುಸಂಪನ್ನತೆಗೆ ದೇವಳದ ಆಡಳಿತದೊಂದಿಗೆ ಕರಜೋಡಿಸಬೇಕು ಎಂದು ಸಭೆಯಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್ ನುಡಿದರು.
ಪಾರ್ಕಿಂಗ್ ವ್ಯವಸ್ಥೆ:
ಜಾತ್ರಾ ಸಮಯದಲ್ಲಿ ವಾಹನ ಪಾರ್ಕಿಂಗ್‌ಗಾಗಿ ಸವಾರಿ ಮಂಟಪದ ಬಳಿ, ಆಂಜನೇಯ ಗುಡಿಯ ಬಳಿಯ ಪಾರ್ಕಿಂಗ್,ಬಿಲದ್ವಾರ,ಕುಮಾರಧಾರದ ಹೆಲಿಪ್ಯಾಡ್, ಕುಮಾರಸ್ವಾಮಿ ವಿದ್ಯಾಲಯದ ಮೈದಾನಗಳನ್ನು ಪಾರ್ಕಿಂಗ್ ವ್ಯವಸ್ಥೆಗಳಿಗೆ ಬಳಸಲಾಗುತ್ತದೆ.ಈ ಪಾರ್ಕಿಂಗ್ ಸ್ಥಳದಲ್ಲಿ ಸಿಸಿ ಟಿವಿ ಹಾಗೂ ಹೆಚ್ಚುವರಿ ವಿದ್ಯುತ್ ವ್ಯವಸ್ಥೆ ಅಳವಡಿಸಲು ನಿರ್ಧಾರ ಕೈಗೊಳ್ಳಲಾಯಿತು.ಚೌತಿ,ಪಂಚಮಿ,ಷಷ್ಠಿ ಹಾಗೂ ಅವಭೃತ ದಿನಗಳಂದು ಭಕ್ತಾಧಿಗಳ ಭೋಜನ ಪ್ರಸಾದವನ್ನು ಷಣ್ಮುಖಪ್ರಸಾದ ಬೋಜನ ಶಾಲೆ ಮತ್ತು ಆದಿಸುಬ್ರಹ್ಮಣ್ಯದ ಬೋಜನಶಾಲೆಯಲ್ಲಿ ನೀಡುವುದೆಂದು ತೀರ್ಮಾನಿಸಲಾಯಿತು. ಆದಿ ಸುಬ್ರಹ್ಮಣ್ಯದಲ್ಲಿ ಹೆಚ್ಚುವರಿ ಸೇವಾಕೌಂಟರ್ ಹಾಗು ಸರದಿ ಸಾಲಿನ ವ್ಯವಸ್ಥೆಯನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಯಿತು.
ಸ್ವಯಂ ಸೇವಕರ ನಿಯೋಜನೆ:
ಜಾತ್ರಾ ಸಮಯದಲ್ಲಿ ಬರುವ ಭಕ್ತಾಧಿಗಳ ಒತ್ತಡ ನಿಯಂತ್ರಣದ ಬಗ್ಗೆ ಪ್ರವೇಶ ಗೋಪುರ, ಹೊರಾಂಗಣ ಆದಿ ಸುಬ್ರಹ್ಮಣ್ಯ, ಭೋಜನ ಶಾಲೆ ಇತ್ಯಾದಿ ಕಡೆಗಳಲ್ಲಿ ಸರದಿ ಸಾಲಿನ ವ್ಯವಸ್ಥೆ ಹಾಗೂ ಮೂಡುಬಾಗಿಲು, ಪಡುಬಾಗಿಲು, ಲಗೇಜು ಕೊಠಡಿ, ಮಾಹಿತಿ ಕೇಂದ್ರಗಳಲ್ಲಿ ಸ್ವಯಂ ಸೇವಕರ ನಿಯೋಜನೆಯೊಂದಿಗೆ ಸೂಕ್ತ ವ್ಯವಸ್ಥೆ ಮಾಡುವುದು.ದೇವಳದ ಹೊರಾಂಗಣ, ಒಳಾಂಗಣ, ಸ್ನಾನಘಟ್ಟ, ಭೋಜನ ಶಾಲೆ, ಆದಿ ಸುಬ್ರಹ್ಮಣ್ಯ, ರಥಬೀದಿ ಇತ್ಯಾದಿ ಎಲ್ಲಾ ಕಡೆ ಕ್ಷೇತ್ರದ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದೆ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಬಗ್ಗೆ ನಿರ್ಣಯಿಸಲಾಯಿತು.
ಇತರ ವ್ಯವಸ್ಥೆಗಳು:
ಸಭೆಯಲ್ಲಿ ನೈರ್ಮಲ್ಯ, ಆರೋಗ್ಯ, ವಿದ್ಯುತ್, ಕುಡಿಯುವ ನೀರು, ಭದ್ರತೆ, ಬೋಜನ ಪ್ರಸಾದ, ಕಾನೂನು ಮತ್ತು ಶಿಸ್ತು ಪಾಲನೆ, ವಸತಿ ವ್ಯವಸ್ಥೆ, ಬಲಿವಾಡು ವ್ಯವಸ್ಥೆ, ಕೃಷಿ ಮೇಳ, ಲಕ್ಷ ದೀಪ, ಶೌಚಾಲಯ, ಬೀದಿ ದೀಪ ವ್ಯವಸ್ಥೆ, ತುರ್ತು ಚಿಕಿತ್ಸಾ ಘಟಕ, ಭಕ್ತಾದಿಗಳ ಬೀದಿ ಉರುಳು ಸೇವೆಗೆ ಅನುಕೂಲತೆ ಮಾಡಿಕೊಡುವ ಬಗ್ಗೆ, ಬೆಳಕಿನ ವ್ಯವಸ್ಥೆ, ಸಂತೆ ವ್ಯಾಪಾರದ ಬಗ್ಗೆ, ಬ್ರಹ್ಮರಥ ಎಳೆಯುವಾಗ ಒತ್ತಡ ನಿಯಂತ್ರಣದ ಬಗ್ಗೆ, ಬ್ರಹ್ಮರಥ ಎಳೆಯಲು ಊರವರಿಗೆ ಹೆಚ್ಚಿನ ಆಧ್ಯತೆ ನೀಡುವುದು,ಈ ಸಂದರ್ಭ ಊರ ಸ್ವಯಂಸೇವಕರು ರಥ ಎಳೆಯುವ ಸಂದರ್ಭ ಸೇವೆ ನೆರವೇರಿಸುವುದು, ಹೊರೆಕಾಣಿಕೆ ಸ್ವೀಕಾರ, ಅಖಂಡ ಭಜನೋತ್ಸವ, ಕೆ.ಎಸ್.ಆರ್.ಟಿ.ಸಿ ವಿಶೇಷ ಬಸ್ ಒದಗಿಸುವ ಬಗ್ಗೆ ಹಾಗೂ ಪ್ರಚಾರದ ಬಗ್ಗೆ ಚರ್ಚಿತವಾಯಿತು.ಅಲ್ಲದೆ ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಯಿತು.ಕೋವಿಡ್ ೧೯ ಮಾರ್ಗಸೂಚಿಗೆ ಅನುಗುಣವಾಗಿ ಜಾತ್ರೋತ್ಸವ ನೆರವೇರಿಸಲು ನಿರ್ಣಯಿಸಲಾಯಿತು.
ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಡಾ.ಯತೀಶ್ ಉಳ್ಳಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಶೆಕೋಡಿ ಸೂರ್ಯನಾರಾಯಣ ಭಟ್, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ಎಇಓ ಪುಷ್ಪಲತಾ ರಾವ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವನಜಾ.ವಿ.ಭಟ್, ಪ್ರಸನ್ನ ದರ್ಬೆ, ಪಿಜಿಎಸ್‌ಎನ್ ಪ್ರಸಾದ್, ಶ್ರೀವತ್ಸ, ಶೋಭಾ ಗಿರಿಧರ್, ಲೋಕೇಶ್ ಮುಂಡುಕಜೆ, ಕಡಬ ತಹಶೀಲ್ದಾರ್ ಅನಂತ ಶಂಕರ, ಸುಳ್ಯ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಪೊಳಲಿ ಗಿರಿಪ್ರಕಾಶ್ ತಂತ್ರಿ, ರಘುನಾಥ ರೈ ಎಣ್ಮೂರು, ಸಂಜೀವ ಸೂಟರ್‌ಪೇಟೆ, ಗೋಪಾಲ್ ಕುತ್ತಾರ್, ಶಶಿಕಲಾ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಚಂದ್ರಶೇಖರ ನಲ್ಲೂರಾಯ, ಚಂದ್ರಶೇಖರ ಮರ್ದಾಳ, ಕಿಶೋರ್ ಕುಮಾರ್ ಕೂಜುಗೋಡು, ಮನೋಜ್ ಸುಬ್ರಹ್ಮಣ್ಯ, ಸುಬ್ರಹ್ಮಣ್ಯ ಪ್ರಾಥಮಿಕ ಕೇಂದ್ರದ ವೈದ್ಯಾಧಿಕಾರಿ ಡಾ.ತ್ರಿಮೂರ್ತಿ, ಮೆಸ್ಕಾಂ ಎಇಇ ಚಿದಾನಂದ ಕನ್ನಡ್ಕ, ಲೋಕೋಪಯೋಗಿ ಅಭಿಯಂತರ ಜಯಪ್ರಕಾಶ್,ಕೆ.ಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಅರುಣ್‌ಕುಮಾರ್,ಜಯಕರ ಶೆಟ್ಟಿ, ಪಿಡಿಒ ಯು.ಡಿ.ಶೇಖರ್, ಸುಬ್ರಹ್ಮಣ್ಯ ಠಾಣಾಧಿಕಾರಿ ಜಂಬೂರಾಜ್ ಮಹಾಜನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಗ್ರಾ.ಪಂ. ಸದಸ್ಯರು, ಪೋಲೀಸ್, ಮೆಸ್ಕಾಂ, ಆರೋಗ್ಯ, ಗ್ರಾ.ಪಂ., ಕಂದಾಯ, ಲೋಕೋಪಯೋಗಿ, ಕೆ.ಎಸ್.ಆರ್.ಟಿ.ಸಿ, ಅರಣ್ಯ ಮೊದಲಾದ ಇಲಾಖಾಧಿಕಾರಿಗಳು, ದೇವಳದ ಆಡಳಿತಕ್ಕೊಳಪಟ್ಟ ಕಾಲೇಜುಗಳ ಪ್ರಾಂಶುಪಾಲರು, ದೇವಳದ ಸಿಬ್ಬಂಧಿಗಳು, ಸಂಘ-ಸAಸ್ಥೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ಉಪನ್ಯಾಸಕ ವಿಶ್ವನಾಥ ನಡುತೋಟ ಸ್ವಾಗತಿಸಿದರು. ಕಛೇರಿ ಅಧೀಕ್ಷಕ ಬಾಲಸುಬ್ರಹ್ಮಣ್ಯ ಭಟ್ ವಿಷಯಗಳನ್ನು ಪ್ರಸ್ತಾಪಿಸಿದರು. ಉಪನ್ಯಾಸಕ ರತ್ನಾಕರ ಎಸ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ದೇವಳದ ಅಭಿಯಂತರ ಉದಯಕುಮಾರ್, ಶ್ರೀ ದೇವಳದ ಪದ್ಮನಾಭ ಶೆಟ್ಟಿಗಾರ್, ಸುಧಾಕರ ಎಸ್.ಕೆ, ನಿರ್ಣಯಗಳನ್ನು ನಮೂದಿಸಿದರು. ಯೋಗೀಶ್.ಎಂ.ವಿಟ್ಲ, ಸಹಕರಿಸಿದರು.