
ದ.ಕ.ಜಿ.ಪಂ.ಕಿರಿಯ ಪ್ರಾಥಮಿಕ ಶಾಲೆ ತಂಟೆಪ್ಪಾಡಿಯಲ್ಲಿ ಈ ಹಿಂದೆ ಅತಿಥಿ ಶಿಕ್ಷಕಿಯಾಗಿದ್ದ ನಿರ್ಮಲಾರನ್ನು ಮರುನೇಮಕ ಮಾಡದಂತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಹಾಗೂ ಪೋಷಕರು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದ್ದರು. ಅದರಂತೆ ಗ್ರಾಮ ಪಂಚಾಯತಿನಿಂದ ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಮಾಡಲಾಗಿತ್ತು. ಅಲ್ಲದೇ ಎಲ್ಲಾ ಪೋಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ಸ್ವತಃ ಶಿಕ್ಷಣಾಧಿಕಾರಿಗಳನ್ನು ಭೇಟಿಮಾಡಿ ತಮ್ಮ ವಿಚಾರವನ್ನು ತಿಳಿಸಿದ್ದರು. ಅದರಂತೆ ನ.16ರಂದು ಶಾಲಾಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಗ್ರಾಮ ಪಂಚಾಯತ್ ಪ್ರತಿನಿಧಿ ಬಾಲಕೃಷ್ಣ ಬೇರಿಕೆಯವರ ಉಪಸ್ಥಿತಿಯಲ್ಲಿ
ಸಭೆ ನಡೆಯಿತು. ಎಲ್ಲಾ ಸದಸ್ಯರ ಬೇಡಿಕೆ ಅತಿಥಿ ಶಿಕ್ಷಕಿಯನ್ನು ಬದಲಾಯಿಸುವುದು ಆಗಿತ್ತು. ಆದರೆ ಸಭೆಯಲ್ಲಿದ್ದ ಶಿಕ್ಷಣ ಇಲಾಖೆಯ ಪ್ರತಿನಿಧಿಗಳು ಅತಿಥಿ ಶಿಕ್ಷಕಿ ನಿರ್ಮಲಾರ ಪರವಾಗಿ ನಿಂತಿದ್ದು ಸಭೆಯಲ್ಲಿದ್ದ ಸದಸ್ಯರಿಗೆ ಬೆದರಿಕೆಯ ರೀತಿಯಲ್ಲಿ ಅವರನ್ನು ಮುಂದುವರಿಸಲು ಇಚ್ಚಿಸಿದ್ದು ಕಂಡುಬಂದಿದೆ. ಅತಿಥಿ ಶಿಕ್ಷಕಿಯ ಹುದ್ದೆಗೆ ಅರ್ಜಿ ಸಲ್ಲಿಕೆ ಕೂಡ ಸಮರ್ಪಕವಾಗಿಲ್ಲ ಹಾಗೂ ಮಾಹಿತಿಯನ್ನು ಕೂಡ ಯಾರಿಗೂ ಕೊಟ್ಟಿಲ್ಲ. ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುತ್ತಿರುವ ಶಾಲೆ ಇದಾಗಿದ್ದು, ಗ್ರಾಮ ಪಂಚಾಯತ್ ಗಮನಕ್ಕೆ ಕೂಡ ಯಾವುದೇ ವಿಚಾರ ಬಂದಿಲ್ಲ. ಹೀಗಿರುವಾಗ ಶಿಕ್ಷಣ ಇಲಾಖೆಯ ಉದ್ದಟತನದ ಈ ಕಾರ್ಯವನ್ನು ಪಂಚಾಯತ್ ಆಡಳಿತ ಮಂಡಳಿ ಖಂಡಿಸಿದ್ದು, ಹೊಸ ಅತಿಥಿ ಶಿಕ್ಷಕರನ್ನು ನೇಮಕ ಮಾಡುವ ಮೂಲಕ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರಿಗೆ ನ್ಯಾಯ ಒದಗಿಸುವಂತೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಹಾಗೂ ಪಂಚಾಯತ್ ಪ್ರತಿನಿಧಿ ಬಾಲಕೃಷ್ಣ ಬೇರಿಕೆ ಒತ್ತಾಯಿಸಿದ್ದಾರೆ.