
ಕಡಬ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳ ರೆಂಜಿಲಾಡಿ ಘಟಕದ ವತಿಯಿಂದ ಎಳುವಾಳೆಯಲ್ಲಿ ನ.14ರ ಆದಿತ್ಯವಾರದಂದು ಗೋ ಪೂಜೆ ಮತ್ತು ಧಾರ್ಮಿಕ ಸಭೆ ನಡೆಯಿತು.
ಆರಂಭದಲ್ಲಿ ಗೋ ಪೂಜೆ ಕಾರ್ಯಕ್ರಮ ನಡೆಯಿತು. ಗೋವುಗಳಿಗೆ ಪೂಜೆ ನೆರವೇರಿಸಿ ಪ್ರಸಾದ ನೀಡಲಾಯಿತು. ಅರ್ಚಕ ಕೃಷ್ಣ ಹೆಬ್ಬಾರ್ ವೈಧಿಕ ವಿಧಿ ವಿಧಾನ ನೆರವೇರಿಸಿದರು.
ಪ್ರಮುಖ ಭಾಷಣ ನೆರವೇರಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗ್ರಾಮವಿಕಾಸ ಸಂಯೋಜಕ ಶ್ರೀನಿವಾಸ ಉಬರಡ್ಕ ಮಾತನಾಡಿ, ನಾವು ಗೋವನ್ನು ಪೂಜಿಸುತ್ತೇವೆ, ಕಲ್ಲನ್ನು, ಮರವನ್ನು, ಮನುಷ್ಯರನ್ನು ಪೂಜಿಸುತ್ತೇವೆ. ಒಟ್ಟಿನಲ್ಲಿ ನಾವು ಪ್ರಕೃತಿಯನ್ನು ಪೂಜಿಸುತ್ತೇವೆ. ಭಾರತೀಯರಿಗೆ ಪ್ರತೀ ದಿನವು ವಿಶೇಷ. ಆದ್ದರಿಂದ ಪರಿಸರ ಸಂರಕ್ಷಣೆ ಮಾಡುವ ದ್ಯೇಯ ನಮ್ಮದಾಗಿರಲಿ, ಇಂದು ಪ್ರವಾಸಿ ತಾಣಗಳು ಮಾನವನ ದುರಾಸೆಯಿಂದ, ಆತನ ನಿರ್ಲಕ್ಷದಿಂದ ಮಲಿನ ತಾಣಗಳಾಗುತ್ತಿವೆ. ಗೋವನ್ನು ಪೂಜಿಸುವ ರಾಷ್ಟ್ರದಲ್ಲಿ ಗೋವುಗಳ ರಕ್ಷಣೆ ಸಂಕಲ್ಪ ಮಾಡಬೇಕಿದೆ. ನಮ್ಮ ಧರ್ಮವನ್ನು, ಧರ್ಮದವರನ್ನು ಉಳಿಸುವ ಕಾರ್ಯ ನಮ್ಮಿಂದಲೇ ನಡೆಯಬೇಕು ಎಂದ ಅವರು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಗಳಿಗೆ ಕಡಿವಾಣ ಬೀಳಬೇಕಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಭಜರಂಗ ದಳ ರೆಂಜಿಲಾಡಿ ಘಟಕದ ರಾಮಚಂದ್ರ ಗೌಡ ಎಳುವಾಳೆ ಅವರು ಅಧ್ಯಕ್ಷತೆ ವಹಿಸಿದ್ದರು. ಘಟಕದ ಗೌರವಾಧ್ಯಕ್ಷ ಮೃತ್ಯುಂಜಯ ಬೀಡೆ ಕೆರೆತೋಟ, ಕಡಬ ಪ್ರಖಂಡ ಮಾತೃಶ್ರೀ ಪ್ರಮುಖ್ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮನಾಭ ಗೌಡ ಕೇಪುಂಜ ಸ್ವಾಗತಿಸಿ ವರದಿ ವಾಚಿಸಿದರು. ವಿಶ್ವನಾಥ ಹೇರ ವಂದಿಸಿದರು. ಉಮೇಶ್ ಶೆಟ್ಟಿ ಸಾಯಿರಾಮ್ ಕಾರ್ಯಕ್ರಮ ನಿರೂಪಿಸಿದರು.
ವರದಿ :- ಉಲ್ಲಾಸ್ ಕಜ್ಜೋಡಿ