ಬಾಲ್ಯದಲ್ಲಿ ಮಕ್ಕಳ ದಿನವೆಂದರೆ ಹಬ್ಬದ ದಿನವಾಗಿರುವುದು ಅಕ್ಷರಶಃ ಸತ್ಯ .
ಬೆನ್ನಿಗೆ ಹತ್ತು ಕೆಜಿಗೆ ಸಮಾನವಾದ ಬ್ಯಾಗ್ ಹಾಕಿ ಶಾಲೆಗೆ ನಡೆದಾಗ ಒಂದೊಮ್ಮೆ ರಜೆ ಸಿಗಲಿ ಎನ್ನುತ್ತಿದ್ದೆವು. ಮಕ್ಕಳಿಗಿಂತ ಬ್ಯಾಗ್ ಗಳ ತೂಕವೇ ಅಧಿಕವಾದರೆ ಅಂತಹ ಬ್ಯಾಗ್ ಇಲ್ಲದೆ ಶಾಲೆಗೆ ತೆರಳುವ ದಿನಗಳಲ್ಲಿ ಮಕ್ಕಳ ದಿನಾಚರಣೆಯು ಒಂದಾಗಿತ್ತು. ಸಮವಸ್ತ್ರ ಧರಿಸಿ ಕೈ ಬೀಸಿ ಬರುವಾಗ ಯಾರಾದರೂ ಬ್ಯಾಗ್ ಎಲ್ಲಿ ಎಂದರೆ ಸಾಕು ತೊದಲು ನುಡಿಯಲ್ಲಿ ನಮ್ಮ ದಿನಾಚರಣೆ ಎಂದು ಹೇಳುವ ಪುಟ್ಟ ಮಕ್ಕಳ ನೋಡುವುದೆ ಚೆಂದ. ಅಂತಹ ಸನ್ನಿವೇಶಗಳ ನೋಡಿದಾಗ ನಮ್ಮ ಬಾಲ್ಯದ ಮಕ್ಕಳ ದಿನಾಚರಣೆಯ ಸಡಗರ ನೆನಪಾಗುವುದು. ತುಂಡು ಕೂದಲಿಗೆ ಅರ್ಧ ರಿಬ್ಬನ್ ಹಾಕಿ, ಸಣ್ಣ ಲಂಗ ತೊಟ್ಟು, ಸೊಂಟಕ್ಕೆ ಬೆಲ್ಟ್ ಹಾಕಿ, ಕುತ್ತಿಗೆಗೆ ಟೈ ತೊಟ್ಟು ಹತ್ತಾರು ಮಕ್ಕಳ ಜೊತೆಯಲ್ಲಿ ಸೇರಿ ಮೈಲುಗಳ ನಡೆದು ಬರುವುದೆಂದರೆ ಒಂದು ರೀತಿಯ ಪ್ರವಾಸ ಹೋದಾಗೆ ಅನಿಸುವುದು. ಪ್ರತಿ ದಿನ ಶಾಲೆಗೆ ಬಾರದ ಸ್ನೇಹಿತರು ಮಕ್ಕಳ ದಿನಾಚರಣೆಯ ದಿನವಂತೂ ಮೊದಲೇ ಹಾಜರು ಇರುತ್ತಿದ್ದರು. ಯಾಕೆಂದರೆ ಅವರ ಒಲವಿಗೆ ಕಾರಣ ಗುರುಗಳು ಏರ್ಪಡಿಸುವ ಸ್ಪರ್ಧೆಗಳ ಜೊತೆಯಲ್ಲಿ ಸಿಹಿ ತಿಂಡಿಗಳು. ಎಲ್ಲಾ ದಿನಗಳು ಪುಸ್ತಕ ಹಿಡಿದು ತರಗತಿಯಲ್ಲಿ ಕುಳಿತರೆ ಈ ದಿನವಂತೂ ಶಾಲೆಯ ಎಲ್ಲಾ ಮಕ್ಕಳೊಂದಿಗೆ ಕುಳಿತು ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆವು. ಸಣ್ಣ ಶಾಲೆಯಾದರು ಏನಾಯಿತು ಈ ದಿನದ ವಿಷಯವಾಗಿ ಹಲವಾರು ಸ್ಪರ್ಧೆಗಳ ಪಟ್ಟಿಯೇ ಇರುತ್ತಿತ್ತು. ಎಲ್ಲವೂ ನಮ್ಮನ್ನ ಪ್ರೋತ್ಸಾಹಿಸಿ ಎಬ್ಬಿಸುವಂತಹ ಸ್ಪರ್ಧೆಗಳೇ ಆಗಿದ್ದವು. ಗೆದ್ದ ವಿದ್ಯಾರ್ಥಿಗಳಿಗೆ ಸಣ್ಣ ತಟ್ಟೆ ಇಲ್ಲವೇ ಲೋಟಾ ಕೊಟ್ಟು ಖುಷಿ ಪಡಿಸುತ್ತಾ ಇದ್ದರು. ಈಗಿನ ವಾಟ್ಸಪ್ ಸ್ಟೇಟಸ್ ನಲ್ಲಿ ಗೆದ್ದ ಫೋಟೋ ಹಾಕಿದಂತೆ ದಾರಿ ಉದ್ದಕ್ಕೆ ಸಿಗುವ ಊರವರಿಗೆ “ಮಾವ ನಂಗೆ ಮಕ್ಕಳ ದಿನಾಚರಣೆಯಲ್ಲಿ ಸಿಕ್ಕಿದ್ದು ” ಎಂತೆಲ್ಲ ಎಲ್ಲಿರಿಗೂ ಬಾಯಿ ಮಾತಲ್ಲಿ ಹಬ್ಬಿಸಿ ಆನಂದಿಸುತ್ತಿದ್ದ ದಿನವಾಗಿತ್ತು. ಆ ಪದ್ಧತಿಗಳು ಮರೆಯಾಗಿ ಆನ್ಲೈನ್ನಲ್ಲಿ ಕಾರ್ಯಕ್ರಮಗಳ ಮಾಡಿ ಕೊಂಚ ಸ್ಪರ್ಧೆಗಳ ಮಾಡಿಸಿ ಪ್ರಮಾಣ ಪತ್ರವನ್ನು ಪೋಸ್ಟ್ ಮಾಡುವ ಘಳಿಗೆಗೆ ಬಂದು ನಿಲ್ಲಿಸಿದೆ ಕೊರೋನಾ ವೈರಸ್. ಏನಾದರೂ ಪ್ರಪಂಚದ ಬಗ್ಗೆ ಚಿಂತೆ ಇಲ್ಲದೆ ಶಾಲೆಯ ಮೊರೆ ಹೋಗಿ ಭಾಗವಹಿಸುವ ನಮ್ಮ ಬಾಲ್ಯದ ಮಕ್ಕಳ ದಿನಾಚರಣೆಯೆ ಚೆಂದ.
ಚರಿಷ್ಮಾ ದೇರುಮಜಲು.