

ಬಾಳಿಲ ವಿದ್ಯಾಬೋಧಿನೀ ಪ್ರೌಢಶಾಲೆ ಇದರ ಸುವಿಚಾರ ಸಾಹಿತ್ಯ ಸಂಘದ ವಾರ್ಷಿಕ ಚಟುವಟಿಕೆಗಳಿಗೆ ಚಾಲನೆಯನ್ನು ಸಾಹಿತ್ಯ ಸಂವಾದವನ್ನು ನಡೆಸುವುದರ ಮೂಲಕ ನೀಡಲಾಯಿತು. ಸರಕಾರಿ ಪದವಿ ಪೂರ್ವ ಕಾಲೇಜು ಐವರ್ನಾಡು ಇದರ ಪ್ರೌಢಶಾಲಾ ವಿಭಾಗದ ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯಕುಮಾರ್ ಇವರು ವಿದ್ಯಾರ್ಥಿಗಳು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಳ್ಳಬೇಕಾದರೆ ಮೊದಲು ಉತ್ತಮ ಸಾಹಿತ್ಯಗಳನ್ನು ಆಲಿಸುವ, ವಿಚಾರಗಳ ಬಗ್ಗೆ ಮಾತನಾಡುವ, ಸದ್ವಿಚಾರಗಳನ್ನು ಓದುವ ಹವ್ಯಾಸಗಳನ್ನು ಮೂಡಿಸಿಕೊಳ್ಳಬೇಕು. ಹೆಚ್ಚು ಹೆಚ್ಚು ಓದುವುದರಿಂದ ನಮ್ಮ ಜ್ಞಾನ ಹಾಗೂ ಬುದ್ಧಿಯ ವಿಕಾಸವಾಗುತ್ತದೆ ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಯಶೋಧರ.ಎನ್ ಇವರು ಮಾತನಾಡುತ್ತಾ ಶ್ರೇಷ್ಠ ಕವಿಗಳ ರಚನೆಗಳು ಸಹೃದಯರ ಮನಸ್ಸಿನಲ್ಲಿ ಹೇಗೆ ಉಳಿಯುವ ರೀತಿಯಲ್ಲಿ ಮೂಡಿಬಂದಿದೆ ಎಂಬುದನ್ನು ವಿವರಿಸಿ, ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿಯನ್ನು ಬೆಳೆಸುವಂತಾಗಲಿ ಎಂದು ಆಶಿಸಿದರು. ಹಿಂದಿ ಶಿಕ್ಷಕ ಲೋಕೇಶ್.ಬಿ ಕೃತಜ್ಞತೆ ಇತ್ತರು. ಸಂಸ್ಕೃತ ಶಿಕ್ಷಕ ವೆಂಕಟೇಶ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿ ಕಾರ್ಯಕ್ರಮವನ್ನು ನಿರೂಪಿಸಿದರು.