ಹಳೆ ವಿದ್ಯಾರ್ಥಿಗಳ ಸಹಕಾರ ದಿಂದ ಸಂಗ್ರಹಿಸಿದ ಕೊಡುಗೆಗಳನ್ನು ನ.14 ರಂದು ಕಲ್ಲುಗುಂಡಿ ಸರಕಾರಿ ಶಾಲೆಗೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ ಎಂದು ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪತ್ರಕರ್ತ ಹೇಮಂತ್ ಸಂಪಾಜೆ ಅವರು ಹೇಳಿದರು.
ಅವರು ಸುಳ್ಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳು ಲೀನವಾಗುವ ಹಂತಕ್ಕೆ ಬಂದಿದೆ. ಕಲ್ಲುಗುಂಡಿಯ ಸರಕಾರಿ ಕನ್ನಡ ಶಾಲೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಉತ್ತಮ ಕೆಲಸವನ್ನು ಹಳೆ ವಿದ್ಯಾರ್ಥಿಗಳು ಮಾಡಲಿದ್ದೇವೆ. ಕರೋನಾ ಅಲೆಯ ಸಂಕಷ್ಟದಲ್ಲೂ ನಮ್ಮ ಕೆಲಸವನ್ನು ನಿಲ್ಲಿಸದೆ ವಾಟ್ಸ್ಆಪ್ ಗ್ರೂಪ್ ಮಾಡಿ ಇದಕ್ಕೆ ‘ನಮ್ಮೂರ ಶಾಲೆ ಉಳಿಸೋಣ’ ಎಂಬ ಹೆಸರನ್ನಿಟ್ಟು ಧನ ಸಂಗ್ರಹ ಮಾಡಿದ್ದೇವು. ಶಾಲೆಯ ಹಳೆಯ ವಸ್ತುಗಳ ಸರಿಪಡಿಸಲು ಜೊತೆಗೆ ಮಕ್ಕಳಿಗೆ ಅವಶ್ಯಕ ಇರುವ ವಸ್ತುಗಳ ಖರೀದಿಸಲು ಸಾಮಾಜಿಕ ಜಾಲತಾಣದ ಮುಖಾಂತರ ಧನ ಸಂಗ್ರಹಿಸಿದ್ದೇವೆ. ಎರಡು ಲಕ್ಷಕ್ಕೂ ಮಿಕ್ಕಿ ಹಣ ಸಂಗ್ರಹಿಸಿ ಅದರಲ್ಲಿ ಶಾಲೆಗೆ ನಾಲ್ಕು ಸಿಸಿಟಿವಿ ಕ್ಯಾಮರಾ, ಒಂದು ಇನ್ವರ್ಟರ್ ಚಾರ್ಜರ್ ವಿತ್ ಬ್ಯಾಟರಿ , ಇಪ್ಪತ್ತಾರು ಬೆಂಚ್ – ಡೆಸ್ಕ್, ಎಂಟು ಫ್ಯಾನ್ ನೀಡಿದ್ದೇವೆ. ಜತೆಗೆ ಕೆಟ್ಟು ಹೋಗಿದ್ದ ಸ್ವಿಚ್ ಬೋರ್ಡ್ ಸರಿಪಡಿಸಿದ್ದೇವೆ ಎಂದರು. ಶಾಲೆಗೆ ನೀಡಲಿರುವ ವಸ್ತುಗಳನ್ನು ಶಾಲೆಗೆ ಹಸ್ತಾಂತರಿಸುವ ಕಾರ್ಯಕ್ರಮ ನ. 14 ರಂದು ಬೆಳಗ್ಗೆ 10 ಗಂಟೆಗೆ ಕಲ್ಲುಗುಂಡಿ ಶಾಲೆಯಲ್ಲಿ ನೆರವೇರಲಿದೆ ಎಂದರು.
ಕಾರ್ಯಕ್ರಮದಲ್ಲಿ ತಂಡದ ಮಾರ್ಗದರ್ಶಕರಾಗಿರುವ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ, ನಿವೃತ್ತ ನಬಾರ್ಡ್ ಅಧಿಕಾರಿಯಾಗಿರುವ ಎಂಸಿ ನಾಣಯ್ಯ, ತಾಲೂಕು ಶಿಕ್ಷಣಾಧಿಕಾರಿಗಳಾದ ಶ್ರೀ ಮಹಾದೇವ್ , ಹಳೆ ವಿದ್ಯಾರ್ಥಿ ಗಳ ತಂಡದ ನೇತೃತ್ವ ವಹಿಸಿದ ಪತ್ರಕರ್ತ ಹೇಮಂತ್ ಸಂಪಾಜೆ, ವಿನಯ್ ಸುವರ್ಣ, ಶರತ್ ಕೈಪಡ್ಕ ಹಾಗೂ ಶಾಲೆಯ ಅಧ್ಯಾಪಕ ವೃಂದ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಹಳೆ ವಿದ್ಯಾರ್ಥಿ ತಂಡದ ಮಾರ್ಗದರ್ಶರಾಗಿರುವ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಡಾ. ಚಂದ್ರಶೇಖರ ದಾಮ್ಲೆ ಅವರು ಯಾವುದೇ ಶಾಲೆಗೆ ಹಳೆ ವಿದ್ಯಾರ್ಥಿಗಳೇ ಆಧಾರ ಅವರು ನೀಡುವ ದಾನ ಸರಕಾರಿ ಶಾಲೆಗಳ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಆದ್ದರಿಂದ ಎಲ್ಲರ ವಿಶ್ವಾಸ ಗಳಿಸುವುದು ಮುಖ್ಯವಾಗಿದ್ದು ಅದರ ಮೂಲಕ ಶಾಲೆಯ ಸಬಲೀಕರಣ ಸಾಧ್ಯ. ಸರ್ಕಾರದ ವ್ಯವಸ್ಥೆಗಳಿಗೆ ಕಾಯದೆ ಶಿಕ್ಷಣ ವ್ಯವಸ್ಥೆಗೆ ನಾವೇ ಕೈ ಜೋಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕಲ್ಲುಗುಂಡಿಯ ಪ್ರಭಾರ ಮುಖ್ಯಶಿಕ್ಷಕಿ ಚಂದ್ರಾವತಿ ಉಪಸ್ಥಿತರಿದ್ದರು.