
ದೀಪಗಳ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಲ್ಲೂ ಸಡಗರ ಸಂಭ್ರಮ. ಹಿರಿಯರಿಂದ ಹಿಡಿದು ಚಿಕ್ಕ ಚಿಕ್ಕ ಮಕ್ಕಳವರೆಗೂ ಎಲ್ಲರೂ ಒಟ್ಟಾಗಿ ಆಚರಿಸುವ ಹಬ್ಬ.
ಮನೆ-ಮನೆಗಳಲ್ಲಿ ವಿಧವಿಧವಾದ ಖಾದ್ಯಗಳು, ಸಿಹಿ ಖಾರ ತಿನಿಸುಗಳು ಬಗೆಬಗೆಯ ಮಾಂಸದೂಟಗಳು ಒಂದು ಕಡೆಯಾದರೆ ಪಟಾಕಿಯ ಅಬ್ಬರಗಳು ಇನ್ನೊಂದೆಡೆ. ಹಿರಿಯ- ಕಿರಿಯ ಎಲ್ಲರಲ್ಲಿಯೂ ನವ ಚೈತನ್ಯ ತುಂಬುವ ಹಬ್ಬವಿದು. ರೈತರು ತಮ್ಮ ಗದ್ದೆ ಕೆಲಸಗಳನ್ನು ತ್ವರಿತವಾಗಿ ಮಾಡಿರೆಂದು ಸಾರುತ್ತ ಆಕಾಶದಲ್ಲಿ ತೇಲುತ್ತ ದೀಪಾವಳಿಯ ಸಂದೇಶ ಹೊತ್ತುತಂದು ಮಧುರ ಸಂಗೀತ ನುಡಿಸುವ ದುಂಬಿಗಳು. ಪ್ರಕೃತಿಯು ಕೂಡ ದೀಪಾವಳಿಗೆ ಸಿದ್ದವಾಗಿರುವುದನ್ನು ಸಾರುತ್ತವೆ. ಕುಟುಂಬದ ದೈವ ದೇವರುಗಳಿಗೆ ನಡೆಯುವ ವರ್ಷಾವಧಿ ಕೋಲ ತಂಬಿಲಗಳು ಕುಟುಂಬಸ್ಥರನ್ನು ಪರಿಚಯಿಸುತ್ತವೆ. ದೀಪಾವಳಿಯ ಹೆಸರಿನಲ್ಲಿ ನಡೆಯುವ ಕ್ರೀಡಾಕೂಟಗಳು ಜನರನ್ನು ಒಂದೆಡೆ ಒಗ್ಗೂಡಿಸಿ ಸಂಭ್ರಮಿಸುವಂತೆ ಮಾಡುತ್ತವೆ. ತುಳುನಾಡಿನ ಪ್ರಾಚೀನ ಸಂಸ್ಕೃತಿಯ ಪ್ರತೀಕವಾಗಿರುವ ಹಿರಿಯರ ಆಟವಾದ ಕೋಳಿ ಅಂಕಗಳು ಸದ್ದುಗದ್ದಲವಿಲ್ಲದೆ ಗಲ್ಲಿಗಲ್ಲಿಯಲ್ಲಿ ನಡೆದು ಹಿರಿಯರಿಗೆ ಹಬ್ಬದ ಖುಷಿ ನೀಡುತ್ತವೆ. ವರ್ಷಕ್ಕೊಮ್ಮೆ ಊರಿಗೆ ಬರುವ ಪೇಟೆ ಮಕ್ಕಳಿಗೆ ತಮ್ಮ ಅಜ್ಜ-ಅಜ್ಜಿಯರನ್ನು ಪರಿಚಯಿಸಿ ಅವರೊಂದಿಗೆ ಸಂತೋಷದಿಂದ ಕಾಲ ಕಳೆಯುವಂತೆ ಮಾಡುತ್ತದೆ ದೀಪಾವಳಿ. ಗೋಪೂಜೆಯಂತಹ ಪೂಜಾಕಾರ್ಯಗಳು ದೇವರ ಮೇಲಿನ ಭಕ್ತಿಯನ್ನು ಹೆಚ್ಚಿಸುತ್ತವೆ. ಪೇಟೆ ಪಟ್ಟಣಗಳಿಂದ ಬಂದ ಅಣ್ಣ- ಮಾವಂದಿರ ಸುತ್ತ ಅಕ್ಕರೆಯಿಂದ ತಿರುಗುತ್ತಾ ಅವರು ತಂದ ಪಟಾಕಿಗಾಗಿ ಹಂಬಲಿಸುವ ಪುಟಾಣಿ ಮಕ್ಕಳ ಹಿಂಡು. ನೀವು ತಿಂಡಿ ತಿನಿಸುಗಳು ಏನೇ ಕೊಟ್ಟರು ಕೂಡ ಪಟಾಕಿಯಷ್ಟು ಖುಷಿ ಕೊಡಲಾರದು ಆ ಮಕ್ಕಳಿಗೆ. ದೀಪಾವಳಿಯ ಸಡಗರ ಕಳೆಗಟ್ಟುವುದು ಈ ಪಟಾಕಿಯ ಸದ್ದಿನಿಂದಲೇ. ದೀಪಾವಳಿಗೆ ಮುಂಚಿತವಾಗಿಯೇ ಅಲ್ಲೊಂದು ಇಲ್ಲೊಂದು ಕೇಳುವ ಪಟಾಕಿ ಸದ್ದು. ಹಬ್ಬದ ದಿನಗಳಲ್ಲಿ ಪಟಾಕಿಗಳ ಅಬ್ಬರವೂ ಜೋರಾಗುತ್ತದೆ. ರಾತ್ರಿಯಾಗುತ್ತಿದ್ದಂತೆ ದೊಡ್ಡ ದೊಡ್ಡ ಶಬ್ದಗಳೊಂದಿಗೆ ಸಿಡಿಯುವ ಪಟಾಕಿಗಳು ಆಕಾಶಕ್ಕೆ ಹೊಸ ಮೆರಗು ತಂದು ಆಗಸದಲ್ಲಿ ರಂಗು-ರಂಗಿನ ಚಿತ್ತಾರ ಬಿಡಿಸಿ ಮನಸ್ಸಿಗೆ ಮುದ ನೀಡುತ್ತವೆ. ಹಲವು ಪಟಾಕಿ ವ್ಯಾಪಾರಿಗಳಿಗೆ ಜೀವನೋಪಾಯದ ದಾರಿಗಳಾಗಿ ಅವರ ಮುಖದಲ್ಲೂ ಹಬ್ಬದ ಮಂದಹಾಸ ಮೂಡಿಸುವುದು ದೀಪಾವಳಿಯ ವಿಶೇಷ. ಹಾಗಂತ ಪಟಾಕಿ ಸಿಡಿಸುವಾಗ ಮೈಮರೆತು ಅಪಘಾತಗಳಿಗೆ ಅವಕಾಶ ನೀಡದಿರಿ. ಎಚ್ಚರಿಕೆಯಿಂದ ಇದ್ದು ದೀಪಾವಳಿಯನ್ನು ಆನಂದಿಸೋಣ. ದೀಪಾವಳಿಯು ಒಗ್ಗಟ್ಟಿನ ಸಂದೇಶ ಸಾರುವ ಭಾವೈಕ್ಯತೆಯ ಪ್ರತೀಕ. ನಮ್ಮಲ್ಲಿನ ದುಶ್ಚಟಗಳನ್ನು ಪಟಾಕಿಯಂತೆ ಹೊಡೆದೋಡಿಸಿ ನಮ್ಮ ಜೀವನದಲ್ಲಿ ಹೊಸ ಬೆಳಕನ್ನು ಮೂಡಿಸುವ ದೀಪಗಳ ಹಬ್ಬ. ದೀಪಾವಳಿಯು ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ.
ನಾಡಿನ ಜನತೆಗೆ ದೀಪಾವಳಿಯ ಹಾರ್ದಿಕ ಶುಭಾಶಯಗಳು.