ಬಂದೇ ಬಿಟ್ಟಿತು ದೀಪಾವಳಿ.ಯಾವುದೋ ಮೂಲೆಯಲ್ಲಿ ಗಂಟುಸೇರಿದ್ದ ಹಣತೆಗಳು ಹೊರಬರಲಾರಂಭಿಸಿವೆ. ದೇಶದಲ್ಲೆಡೆ ದೀಪಾವಳಿ ಸಂಭ್ರಮ ಕಳೆ ಹೆಚ್ಚಿದೆ.ಅಂತರಂಗದಲ್ಲಿರುವ ಕತ್ತಲೆಯನ್ನು ಓಡಿಸಿ , ಬೆಳಕಿನ ದೀಪವ ಬೆಳಗಿಸುವ ಮೂಲಕ ಮನೆ ಮನ ಬೆಳಗುವ ದಿವ್ಯ ಜ್ಯೋತಿಯ ಹಬ್ಬವೇ ದೀಪಾವಳಿ. ದುಷ್ಟತನದ ಮೇಲೆ ಒಳ್ಳೆಯತನದ ವಿಜಯವನ್ನು , ಕತ್ತಲಿನ ಮೇಲೆ ಬೆಳಕಿನ ವಿಜಯವನ್ನು ಮತ್ತು ಅಜ್ಞಾನದ ಮೇಲೆ ಜ್ಞಾನದ ವಿಜಯವನ್ನು ಸಾಧಿಸುವುದೇ ದೀಪಾವಳಿ.
ದೀಪಾವಳಿ ಎಂಬ ಶಬ್ದವು ದೀಪ + ಆವಳಿ ಹೀಗೆ ರೂಪುಗೊಂಡಿದೆ. ಆವಳಿ ಎಂದರೆ ಸಾಲು, ಶ್ರೇಣಿ. ಹೆಸರೇ ಹೇಳುವಂತೆ ದೀಪಗಳ ಸಮೂಹ, ದೀಪಗಳ ಸಾಲು ಎಂಬರ್ಥವನ್ನು ನೀಡುತ್ತದೆ.
ನಮಗೆ ದೀಪಾವಳಿ ಎಂದಾಕ್ಷಣ ತಟ್ಟನೆ ನೆನಪಾಗುವುದೆಂದರೆ ಮನೆ ಮುಂದೆ ಉರಿಯುವ ಸಾಲು ಸಾಲು ಹಣತೆ ಹಾಗೂ ಕಿವಿಗೆ ಅಪ್ಪಳಿಸುವ ಪಟಾಕಿ ಸದ್ದು.ಇದಿಷ್ಟು ಮೇಲ್ನೋಟಕ್ಕೆ ಕಂಡರೂ ಈ ಹಬ್ಬದ ಆಚರಣೆಯ ಹಿಂದೆ ಹಲವು ಪುರಾಣ ಕಾಲದ ಸಂಸ್ಕೃತಿ , ಸಂಪ್ರದಾಯ, ಇತಿಹಾಸವಿರುವುದು ಕಂಡು ಬರುತ್ತದೆ.
*ದೀಪಾವಳಿಯ ಮೊದಲನೆಯ ದಿನದ ವಿಶೇಷತೆ:*
*ಎಣ್ಣೆ ಸ್ನಾನ :*
ದೀಪಾವಳಿ ಹಬ್ಬದ ಮೊದಲನೆಯ ದಿನ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.
*ನರಕ ಚತುರ್ದಶಿ:*
ಹಬ್ಬದ ಮೊದಲನೆಯ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಇನ್ನಷ್ಟು ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡಲು ಹೊರಟಾಗ ಇಂದ್ರನು ಭಗವಾನ್ ಶ್ರೀಕೃಷ್ಣನ ಮೊರೆಹೋಗುತ್ತಾನೆ.
ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಂತಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳುತ್ತಾಳೆ. ಆದರೆ ಒಂದು ಹೆಣ್ಣಿನಿಂದ ಮಾತ್ರ ತನ್ನನ್ನು ವಧೆ ಮಾಡಲು ಸಾಧ್ಯ ಎಂಬ ವರವನ್ನು ಪಡೆದಿದ್ದನು. ಇದರಂತೆ ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಭಗವಾನ್ ಶ್ರೀಕೃಷ್ಣನ ಪತ್ನಿ ಸತ್ಯಭಾಮಾ ನರಕಾಸುರನನ್ನು ಸಂಹರಿಸುತ್ತಾಳೆ . ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ವಿಜಯದ ಖುಷಿಯಲ್ಲಿ ಪಟಾಕಿ ಸಿಡಿಸುವುದರ ಮೂಲಕ ಸಂಭ್ರಮಿಸುತ್ತಾರೆ.
ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಈ ದಿನ ಕಾಣಬಹುದಾಗಿದೆ.
*ದೀಪಾವಳಿಯ ಎರಡನೆಯ ದಿನದ ವಿಶೇಷತೆ*
*ಲಕ್ಷ್ಮೀ ಪೂಜೆ*
ದೀಪಾವಳಿ ಅಮಾವಾಸ್ಯೆಯಲ್ಲಿ ಧನದೇವತೆ ಲಕ್ಷ್ಮೀ ಪೂಜೆ ನಡೆಯುತ್ತದೆ. ಅಂದು ಮನೆಯಲ್ಲಿರುವ ಹಣವನ್ನೂ, ಸುವರ್ಣವನ್ನೂ ಕಲಶದ ಜೊತೆ ಇಟ್ಟು, ಲಕ್ಷ್ಮೀಯನ್ನು ಪೂಜಿಸಿ, ಉತ್ತರೋತ್ತರ ಅಭಿವೃದ್ಧಿ ಮಾಡುವಂತೆ ಪ್ರಾರ್ಥಿಸುತ್ತಾರೆ. ಲಕ್ಷ್ಮಿದೇವಿ ಮೂಲತಃ ಪ್ರಕೃತಿಮಾತೆ. ಪ್ರಕೃತಿಯಲ್ಲಿ ಧಾನ್ಯ, ಫಲ ಪುಷ್ಪಗಳು ಸಮೃದ್ಧಿಯಾಗಿ ಬೆಳೆದು ಧನವೃದ್ಧಿಯಾಗಿ ಸುಖ-ಶಾಂತಿ, ಸಂಪತ್ತು ಬರಲಿ ಎಂದು ಜನರು ಸಮೃದ್ಧಿಯ ದೇವತೆಯಾದ ಲಕ್ಷ್ಮಿದೇವಿಯನ್ನು ಪೂಜಿಸುತ್ತಾರೆ.
ಪೂಜೆಯನ್ನು ನಡೆಸಲು ಮಂಟಪವನ್ನು ಸ್ಥಾಪಿಸುವುದು ಬಹಳ ಮುಖ್ಯವಾಗುತ್ತದೆ. ನೀವು ದೇವರ ಮುಂದೆ ಮಂಟಪವನ್ನು ಸ್ಥಾಪನೆ ಮಾ ಡಿ, ಕೆಂಪು ಬಟ್ಟೆಯನ್ನು ಹರಡಿ ಅದರ ಮೇಲೆ ಕೆಲವು ಧಾನ್ಯಗಳನ್ನು ಹಾಕಿ.ಅದರ ಮೇಲೆ ಅರಿಶಿನ ಪುಡಿಯಿಂದ ಕಮಲವನ್ನು ಬಿಡಿಸಿ ಲಕ್ಷ್ಮಿ ಮತ್ತು ಗಣೇಶನ ಚಿತ್ರ ಅಥವಾ ವಿಗ್ರಹವನ್ನು ಇರಿಸಿ.
ಒಂದು ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ ಅದರೊಳಗೆ ನಾಣ್ಯಗಳೊಂದಿಗೆ ವೀಳ್ಯದೆಲೆ, ಒಣದ್ರಾಕ್ಷಿ, ಲವಂಗ, ಒಣ ಹಣ್ಣುಗಳು ಮತ್ತು ಏಲಕ್ಕಿಯನ್ನು ಹಾಕಿ. ಆ ಪಾತ್ರೆಯ ಮೇಲೆ ವೃತ್ತಾಕಾರದಲ್ಲಿ ಮಾವಿನ ಎಲೆಗಳನ್ನು ಇರಿಸಿ ಮತ್ತು ಅದರ ಮಧ್ಯದಲ್ಲಿ ತೆಂಗಿನಕಾಯಿಯನ್ನು ಇಡಬೇಕು. ಹೀಗೆ ಮಾಡಿದರೆ ಕಲಶ ಸಿದ್ಧವಾಗುತ್ತದೆ. ಈ ಕಲಶವನ್ನು ಪೂಜಾ ಪೀಠದ ಮೇಲೆ ಇರಿಸಿ ಮತ್ತು ಅದನ್ನು ಕುಂಕುಮ ಮತ್ತು ಹೂವುಗಳಿಂದ ಅಲಂಕರಿಸಬೇಕು.
*ದೀಪಾವಳಿಯ ಮೂರನೆಯ ದಿನದ ವಿಶೇಷತೆ*
*ಬಲೀಂದ್ರ ಪೂಜೆ, ಗೋಪೂಜೆ*
ನರಸಿಂಹನ ಅವತಾರದಲ್ಲಿ ಶ್ರೀವಿಷ್ಣುವಿನಿಂದ ಹತನಾದ ಹಿರಣ್ಯಕಶಿಪುವಿನ ಪುತ್ರ ಪ್ರಹ್ಲಾದನ ಮೊಮ್ಮಗ ಮಹಾಬಲಿ, ಅಸುರ ಕುಲದಲ್ಲಿ ಹುಟ್ಟಿದ ವಿಷ್ಣುಭಕ್ತ ಪ್ರಹ್ಲಾದನಂತೆಯೇ ಮಹಾಬಲಿಯೂ ಕೂಡಾ ವಿಷ್ಣುಭಕ್ತನೇ. ದೇವಾನುದೇವತೆಗಳನ್ನು ಸೋಲಿಸಿ ಮೂರೂ ಲೋಕಗಳನ್ನು ಆಳತೊಡಗುತ್ತಾನೆ. ಆ ಸಂದರ್ಭದಲ್ಲಿ ದೇವತೆಗಳು ಮಹಾವಿಷ್ಣುವಿನ ಮೊರೆಹೋಗುತ್ತಾರೆ.
ಮೂರೂ ಲೋಕಗಳನ್ನು ಜಯಿಸಿದ ಮಹಾಬಲಿಯು ಮಹಾಯಾಗವೊಂದನ್ನು ಮಾಡುವ ಸಂದರ್ಭದಲ್ಲಿ ಕೇಳಿದ ವಸ್ತುಗಳೆಲ್ಲವನ್ನೂ ಬಂದವರಿಗೆ ದಾನ ಮಾಡುತ್ತಾನೆ. ಆ ಸಂದರ್ಭದಲ್ಲಿ ಮಹಾವಿಷ್ಣುವು ಮಹಾಬಲಿಯ ಭಕ್ತಿಯನ್ನು ಪರೀಕ್ಷಿಸಲು ಪುಟ್ಟ ಬಾಲಕ ವಾಮನನ ಅವತಾರದಲ್ಲಿ ಬಲಿ ಚಕ್ರವರ್ತಿಯ ಯಾಗಕ್ಕೆ ಬರುತ್ತಾನೆ. ಚಕ್ರವರ್ತಿಯು ಬಾಲಕ ವಾಮನನಿಗೆ ನೀನು ಕೇಳಿದ್ದೆಲ್ಲವನ್ನೂ ಕೊಡುತ್ತೇನೆ, ನಿನಗೇನು ಬೇಕು ಎಂದು ಕೇಳಿದಾಗ, ಬಾಲಕ ವಾಮನನು ನನಗೆ ಮೂರು ಹೆಜ್ಜೆ ಜಾಗವನ್ನು ನೀಡು ಎಂದು ಕೇಳುತ್ತಾನೆ.
ಬಲಿ ಚಕ್ರವರ್ತಿಯು ಬಾಲಕನ ಆಸೆಯಂತೆ ಮೂರು ಹೆಜ್ಜೆಗಳನ್ನಿಡಲು ಒಪ್ಪುತ್ತಾನೆ.ಆಗ ಬಂದಿರುವುದು ಮಹಾವಿಷ್ಣುವೆಂದು ತಿಳಿದ ಶುಕ್ರಾಚಾರ್ಯರು ದಾನವನ್ನು ಜಲಸಾಕ್ಷಿಯಾಗಿ ನೀಡುವುದರಿಂದ ಬಲೀಂದ್ರನ ಕಮಂಡಲದೊಳಗೆ ಕಪ್ಪೆಯ ರೂಪದಲ್ಲಿ ಸೇರಿ, ನೀರು ಹೊರಬರದಂತೆ ಅಡ್ಡವಾದರು. ಆಗ ಬಾಲಕ ವಾಮನನು ದರ್ಭೆಯಿಂದ ಕಮಂಡಲದಿಂದ ನೀರು ಬರುವ ಕಡೆ ತಿವಿದಾಗ, ಶುಕ್ರಾಚಾರ್ಯರ ಕಣ್ಣಿಗೆ ಚುಚ್ಚಿ, ಅವರು ಒಂದು ಕಣ್ಣನ್ನು ಕಳೆದುಕೊಂಡರು.
ವಾಮನನ ರೂಪದಲ್ಲಿರುವ ಮಹಾವಿಷ್ಣುವು ಸ್ವರ್ಗಲೋಕಗಳನ್ನು ಮೀರಿ ಎತ್ತರಕ್ಕೆ ಬೆಳೆಯುತ್ತಾನೆ. ಮೊದಲ ಹೆಜ್ಜೆಯಿಂದ ಭೂಮಿಯನ್ನು ಅಳೆದು ತೆಗೆದುಕೊಳ್ಳುತ್ತಾನೆ. ಎರಡನೇ ಹೆಜ್ಜೆಯಿಂದ ಸ್ವರ್ಗವನ್ನು ಅಳೆದು ಪಡೆಯುತ್ತಾನೆ, ಮೂರನೇ ಹೆಜ್ಜೆ ಇಡಲು ಮಹಾಬಲಿಯು ಜಾಗವನ್ನು ಕೊಡಬೇಕಾದಾಗ ಚಕ್ರವರ್ತಿಯು, ಉಳಿದೊಂದು ಹೆಜ್ಜೆಯನ್ನು ತನ್ನ ಶಿರದ ಮೇಲಿಡುವಂತೆ ವಾಮನನನ್ನು ಬೇಡಿಕೊಳ್ಳುತ್ತಾನೆ. ಮೂರನೇ ಹೆಜ್ಜೆಯನ್ನು ಬಲಿಚಕ್ರವರ್ತಿಯ ಶಿರದ ಮೇಲಿಡುತ್ತಿದ್ದಂತೆ, ಬಲಿ ಚಕ್ರವರ್ತಿಯು ಪಾತಾಳಕ್ಕೆ ತಳ್ಳಲ್ಪಡುತ್ತಾನೆ. ಬಲಿಚಕ್ರವರ್ತಿಯ ಭಕ್ತಿ ಮತ್ತು ನಿಷ್ಠೆಗೆ ಮೆಚ್ಚಿದ ಮಹಾವಿಷ್ಣುವು ಪಾತಾಳವನ್ನು ಆಳುವಂತೆ ಆಶೀರ್ವದಿಸುತ್ತಾನೆ. ವಿಷ್ಣುಭಕ್ತನಾದ ಬಲೀಂದ್ರನಿಗೆ ಆಶ್ವಯುಜ ಮಾಸದಲ್ಲಿ ಭೂಮಿಗೆ ಬಂದು ಪೂಜೆ ಸ್ವೀಕರಿಸುವ ವರವನ್ನು ನೀಡಿದ್ದರಿಂದ ಮೂರು ದಿನಗಳ ದೀಪಾವಳಿ ಆಚರಣೆಯಲ್ಲಿ ಮೂರನೇ ದಿನ ಪಾಡ್ಯದಂದು ಗೋಮಯದಿಂದ ಬಲಿಚಕ್ರವರ್ತಿಯ ಬಲಿಯಕೋಟೆಯನ್ನು ಕಟ್ಟಲಾಗುತ್ತದೆ. ತುಳಸಿಕಟ್ಟೆಯ ಸಮೀಪ ಗೋಮಯದಿಂದ ಏಳುಸುತ್ತಿನ ಕೋಟೆಯನ್ನು ಕಟ್ಟಿ , ಈ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ. ( ಬರಹ : ಶ್ರೀದೇವಿ ವಿ. ಹೆಗ್ಡೆ ಕುಕ್ಕೆ ಸುಬ್ರಹ್ಮಣ್ಯ)