Ad Widget

ಸುಬ್ರಹ್ಮಣ್ಯ : ದೀಪಾವಳಿ ಹಬ್ಬದ ಪ್ರಯುಕ್ತ ತುಡರ್ ಕಾರ್ಯಕ್ರಮ

“ಬನ್ನಿ ಸಹೋದರರೇ ವಸುಧ ಕುಟುಂಬ ರಚಿಸೋಣ, ಮೊಳಗಲಿ ತಾಯ ಯಶೋಗಾನ” ಎಂದು ಶ್ರೀ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಾಮರಸ್ಯ ವಿಭಾಗ ಸುಬ್ರಹ್ಮಣ್ಯ ಇದರ ಸಹಯೋಗದೊಂದಿಗೆ ನ.03 ರಂದು ತುಡರ್ ಕಾರ್ಯಕ್ರಮದ ಮೂಲಕ ದೀಪಾವಳಿ ಹಬ್ಬವನ್ನು ಸಂಭ್ರಮ ಸಡಗರದಿಂದ ದೇವಳದ ಹತ್ತಿರದ ದೇವರಗದ್ದೆಯ ಮಾನಾಡು ಎಂಬಲ್ಲಿ ಆಚರಿಸಲಾಯಿತು.
ದೇವಳದ ಪ್ರಧಾನ ಅರ್ಚಕರಾದ ಸೀತಾರಾಮ ಎಡಪಡಿತ್ತಾಯರು ಗರ್ಭಗುಡಿಯ ಎದುರು “ಸಮಾಜದಲ್ಲಿರುವ ಬೇಧ ಬಾವ, ಮೇಲು ಕೀಳು ತೊಲಗಿ ಪೂರ್ತಿ ಸನಾತನ ಧರ್ಮವು ಒಂದಾಗಿ ತಾಯಿ ಬಾರತಿ ವಿಶ್ವಗುರುವಾಗಿ ಮೆರೆಯಲಿ” ಎಂದು ಪುರದೊಡೆಯ ಕುಕ್ಕೆ ಸುಬ್ರಹ್ಮಣ್ಯನಲ್ಲಿ ಪ್ರಾರ್ಥನೆ ಹಾಗೂ ಮಂಗಳಾರತಿ ಮಾಡಿ ಮಾನಾಡಿನ ಹಿಂದೂ ಬಂಧುಗಳಾದ ಶ್ರೀ ಸದಾನಂದ ಸುಂದರಿ ದಂಪತಿಗಳು ಮಾನಾಡು, ಶ್ರೀ ರಮೇಶ್ ಗೀತಾ ದಂಪತಿಗಳು ಮಾನಾಡು ಮತ್ತು ಗುರಿಕಾರರಾದ ಶ್ರೀ ಬಾಬು ಮುಗೇರ ಮತ್ತು ಅವರ ಮನೆಯವರಿಗೆ, ಹಿರಿಯರಾದ ತನಿಯಪ್ಪ ಮುಗೇರರಿಗೆ ಗೌರವವನ್ನರ್ಪಿಸಿ ತೀರ್ಥ ಗಂಧ-ಪ್ರಸಾದವನ್ನು ನೀಡಿ ತದನಂತರ ದೇವರ ಗರ್ಭಗುಡಿಯ ದೀಪದಿಂದ ನಂದಾದೀಪವನ್ನು ಉರಿಸಿ ಶ್ರೀ ಸದಾನಂದ ಸುಂದರಿ ದಂಪತಿಗಳಿಗೆ ನೀಡಿದರು.
ದೀಪವನ್ನು ಹಿಡಿದು ದೇವಳಕ್ಕೆ ಪ್ರದಕ್ಷಿಣೆ ಬಂದು ಕ್ಷೇತ್ರ ರಕ್ಷಕರಾದ ಹೊಸಳಿಗಮ್ಮ ಮತ್ತು ಪುರುಷರಾಯರಲ್ಲಿ ಮಂಗಳಾರತಿ ಬೆಳಗಿ ನಂತರ ನಂದಾದೀಪವನ್ನು ಚೆಂಡೆ, ವಾದ್ಯ, ಜಾಗಟೆ, ಶಂಖ, ಪಟಾಕಿಗಳ ಮೂಲಕ ಅದ್ದೂರಿ ಮೆರವಣಿಗೆಯಿಂದ ದೇವರಗದ್ದೆಯ ಮಾನಾಡಿಗೆ ತರಲಾಯಿತು. ದಾರಿಯುದ್ದಕ್ಕೂ ಹಿಂದೂ ಬಂಧುಗಳು ಪುಷ್ಪಾರ್ಚನೆ ಮೂಲಕ ನಂದಾದೀಪವನ್ನು ಸ್ವಾಗತಿಸಿದ್ದು, ಈ ಕಾರ್ಯಕ್ರಮಕ್ಕೆ ಇನ್ನಷ್ಟು ಹೊಸ ಚೈತನ್ಯವನ್ನು ನೀಡಿತು.
ಮುಂದುವರಿದಂತೆ ಶ್ರೀ ಸದಾನಂದ ಸುಂದರಿ ದಂಪತಿಗಳ ಮನೆಯಲ್ಲಿ ದೇವರ ದೀಪ ಹಚ್ಚಿ ಮುಂದೆ ಸುತ್ತಲಿನ ಮನೆಗಳಲ್ಲಿ ಹಣತೆಗಳನ್ನು ಹಚ್ಚಲಾಯಿತು. ನಂತರ ಗೋ ಪೂಜೆ ಹಾಗೂ ಭಾರತ ಮಾತೆಗೆ ಅರ್ಚನೆ ಮಾಡಿ ಪ್ರತಿಭೆಯನ್ನು ಗುರುತಿಸುವ ಕಾರ್ಯಕ್ರಮ ನಡೆಯಿತು.
ಮುಂದೆ ಶ್ರೀ ಚಂದ್ರಶೇಖರ ಮುಗೇರ, ಶ್ರೀ ಗಿರಿಜಾ ಅವರ ಮನೆಯಲ್ಲಿ ಉಪಹಾರವನ್ನು ಮನೆಮಂದಿಯೊಂದಿಗೆ ಕುಳಿತು ಸವಿಯುವುದರೊಂದಿಗೆ ಅದ್ಭುತ ಮತ್ತು ಅಪರೂಪದ ಕಾರ್ಯಕ್ರಮಕ್ಕೆ ಊರಿಗೆ ಊರೇ ಸಾಕ್ಷಿಯಾಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಂತ ಸಹ ಕಾರ್ಯನಿರ್ವಾಹಕರಾದ ಪ್ರಕಾಶ್.ಪಿ.ಎಸ್, ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮೋಹನ್ ರಾಮ್ ಸುಳ್ಳಿ ಹಾಗೂ ಸದಸ್ಯರು, ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರು, ಸದಸ್ಯರು ಹಾಗೂ ಅನೇಕ ಊರ ಹಿರಿಯರು ಮತ್ತು ಹಿಂದೂ ಬಂಧುಗಳು ಉಪಸ್ಥಿತರಿದ್ದರು.
ಒಟ್ಟಿನಲ್ಲಿ ಈ ಕಾರ್ಯಕ್ರಮ ಭಕ್ತಿ ಭಾವದೊಂದಿಗೆ ಭಾವನಾತ್ಮಕವಾಗಿ ಹೊಸ ಪ್ರೇರಣೆಯನ್ನು ಹಾಗೂ ನವ ಸಂದೇಶವನ್ನು ನೀಡಿತು.

. . . . .

ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!