ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಹುಸಂಖ್ಯಾತರು ಮಾತನಾಡುವ ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಮಾಡಲು ಹಾಗೂ 8ನೇ ಪರಿಚ್ಛೇದಕ್ಕೆ ಸೇರಿಸುವಂತೆ ಆಗ್ರಹಿಸಿ ಹಾಗೂ ಈ ಬಗ್ಗೆ ಸದನದಲ್ಲಿ ಜನಪ್ರತಿನಿಧಿಗಳು ದ್ವನಿ ಎತ್ತುವಂತೆ ಆಗ್ರಹಿಸಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲು ತುಳುನಾಡಿನ ವಿವಿಧ ಸಂಘಟನೆಗಳು ಮುಂದಾಗಿವೆ.
ತುಳುಭಾಷೆಗೆ ರಾಜ್ಯ ಭಾಷೆಯ ಮಾನ್ಯತೆ ನೀಡಲು ಈ ಹಿಂದಿನಿಂದಲೇ ಆಗ್ರಹಗಳು ವ್ಯಕ್ತಗೊಂಡಿತ್ತು. ಜೊತೆಗೆ ಹಲವಾರು ಬಾರಿ ಟ್ವೀಟ್ ಅಭಿಯಾನ ಕೂಡ ನಡೆಸಿ ಸರಕಾರ ಹಾಗೂ ಜನಪ್ರತಿನಿಧಿಗಳನ್ನು ಎಚ್ಚರಿಸಿದ್ದರು. ಆದರೆ ಇಲ್ಲಿಯವರೆಗೆ ಈ ಬಗ್ಗೆ ಯಾವುದೇ ಪೂರಕ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಪೋಸ್ಟ್ ಕಾರ್ಡ್ ಚಳುವಳಿ :- ತುಳುಭಾಷೆಗೆ ರಾಜ್ಯಭಾಷೆಯ ಸ್ಥಾನ ನೀಡಲು ಸದನದಲ್ಲಿ ಕರಾವಳಿ ಭಾಗದ ಚುನಾಯಿತ ಪ್ರತಿನಿಧಿಗಳು ದ್ವನಿ ಎತ್ತಬೇಕೆಂದು ಆಗ್ರಹಿಸಿ ಸೋಷಿಯಲ್ ಮೀಡಿಯಾ ಮುಖಾಂತರ ಜನಪ್ರತಿನಿಧಿಗಳನ್ನು ಉಲ್ಲೇಖಿಸಿ ಪೋಸ್ಟ್ ಕಾರ್ಡ್ ಚಳುವಳಿ ನಡೆಸಲಾಗುತ್ತಿದೆ. ತುಳುನಾಡಿನ ವಿವಿಧ ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದು ಟ್ವಿಟರ್, ಫೇಸ್ ಬುಕ್ ಮೂಲಕ ಚಳುವಳಿ ನಡೆಸಲಾಗುತ್ತಿದೆ ಎಂದು ಸಂಘಟನೆಯ ಮುಖಂಡರು ಮಾಹಿತಿ ನೀಡಿದ್ದಾರೆ. ಸದನ ಪ್ರಾರಂಭವಾಗಿ ಇಷ್ಟು ದಿನಗಳು ಕಳೆದರೂ ಯಾರೊಬ್ಬರೂ ತುಳುವಿನ ಬಗ್ಗೆ ದ್ವನಿ ಎತ್ತದೇ ಇರುವುದಕ್ಕೆ ಸಂಘಟನೆಗಳು ಬೇಸರ ವ್ಯಕ್ತಪಡಿಸಿದ್ದಾರೆ.
ತುಳುಭಾಷೆಗೆ ಮಾನ್ಯತೆ ನೀಡಲು ಈ ಭಾಗದ ಜನಪ್ರತಿನಿಧಿಗಳು ಸದನದಲ್ಲಿ ಧ್ವನಿ ಎತ್ತಬೇಕು. ಈ ಹಿಂದೆ ನೀಡಿದ ಭರವಸೆ ಇನ್ನೂ ಈಡೇರಿಲ್ಲ, ಇದೇ ರೀತಿ ಮುಂದುವರಿದಲ್ಲಿ ತುಳುವರು ಮುಂದಿನ ಚುನಾವಣೆಯಲ್ಲಿ ನೋಟ ಚಲಾವಣೆಗೆ ಮುಂದಾಗಬೇಕಾಗಬಹುದು ಎಂದು ತುಳುವೆರ್ ಕುಡ್ಲ ಕುಕ್ಕೆ ಘಟಕದ ಅಧ್ಯಕ್ಷ ನಿತಿನ್ ಭಟ್ ಹೇಳಿದ್ದಾರೆ.
(ವರದಿ :- ಉಲ್ಲಾಸ್ ಕಜ್ಜೋಡಿ)