Ad Widget

ಅರೆಭಾಷೆ ಸಂಸ್ಕೃತಿ ಶಿಬಿರ ಸಮಾಪನ : ಆಚಾರ ವಿಚಾರಗಳಲ್ಲಿ ಯುವಜನಾಂಗ ಸಕ್ರಿಯವಾಗಿ ಪಾಲ್ಗೊಳ್ಳಬೇಕು – ಕಜೆಗದ್ದೆ

ಮದುವೆ, ತೊಟ್ಟಿಲು ಶಾಸ್ತ್ರ ಮುಂತಾದ ಗೌಡ ಸಮುದಾಯದ ಶುಭ ಕಾರ್ಯಗಳ ಸಂದರ್ಭಗಳಲ್ಲಿ ಹಾಡುವ ಶೋಬಾನೆ ಹಾಡುಗಳು ಮಹಿಳೆಯರ ನಾಲಗೆಯ ತುದಿಯಲ್ಲೇ ಇರಬೇಕು. ದೈವಾರಾಧನೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಕೈಗೊಳ್ಳುವ ಆಚರಣೆಗಳಲ್ಲಿ ಯುವಜನಾಂಗವೂ ಸಕ್ರೀಯವಾಗಿ ಪಾಲ್ಗೊಂಡರೆ ಸಮುದಾಯದ ಸಂಸ್ಕೃತಿ ಆಚಾರ ವಿಚಾರಗಳು ನಶಿಸದೆ ಉಳಿಯುವಂತಾಗುತ್ತದೆ ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದರು. 

. . . . . . .

ಅವರು ಅಕಾಡೆಮಿ ಹಾಗೂ ಗ್ರಾಮ ಗೌಡ ಸಮಿತಿ ಮಂಡೆಕೋಲು ಇದರ ಜಂಟಿ ಆಶ್ರಯದಲ್ಲಿ ಮಂಡೆಕೋಲಿನ ಅಮೃತ ಸಹಕಾರ ಸದನದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಅರೆಭಾಷೆ ಸಂಸ್ಕೃತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡುತ್ತಿದ್ದರು. ಅರೆಭಾಷೆ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಲು ಅಕಾಡೆಮಿ ಜನರ ನಡುವೆ ಕೊಂಡಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಅರೆಭಾಷಿಕರು ತಮ್ಮತನವನ್ನು ಉಳಿಸಿಕೊಳ್ಳಬೇಕು ಎಂದರು. 

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅಕಾಡೆಮಿ ಮಾಜಿ ಸದಸ್ಯ ಸದಾನಂದ ಮಾವಜಿ ಮಾತನಾಡುತ್ತಾ ಗೌಡ ಸಮುದಾಯದ ಕಟ್ಟುಕಟ್ಟಳೆಯ ಪ್ರಕಾರ ವರ ಅಥವಾ ವಧುವಿನ ತಾಯಿ ವಿಧವೆಯಾಗಿದ್ದರೆ ಅವಳ ಮಕ್ಕಳ ಮದುವೆಯ ಶುಭ ಕಾರ್ಯದಲ್ಲಿ ಆಕೆ ಪಾಲ್ಗೊಳ್ಳುವಂತಿಲ್ಲ. ಹೀಗೆ ವಿಧವೆಯರನ್ನು ಶುಭ ಕಾರ್ಯಗಳಿಂದ ಪ್ರತ್ಯೇಕವಾಗಿಡುವ ಸಂಪ್ರದಾಯಕ್ಕೆ ತಿದ್ದುಪಡಿ ಮಾಡುವ ಅವಶ್ಯಕತೆ ಇದೆ ಎಂದರು. ‌

ಮಂಡೆಕೋಲು ಗ್ರಾ. ಪಂ‌ ಅಧ್ಯಕ್ಷೆ ಹಾಗೂ ಗೌಡ ಸಮಿತಿಯ ತಾಲೂಕು ಅಧ್ಯಕ್ಷೆ ವಿನುತಾ ಪಾತಿಕಲ್ಲು ಮಾತನಾಡಿ ನಮ್ಮ ಪ್ರಕೃತಿ, ಭೂಮಿ, ನದಿಗಳಲ್ಲಿ ಮಾತೆಯನ್ನು ಕಾಣುವ ನಾವು ಗಂಡ ಸತ್ತ ಹೆಣ್ಣನ್ನು ಅಮಂಗಲೆಯಾಗಿ ನೋಡುವುದು ತರವಲ್ಲ. ಈ ಬಗ್ಗೆ ಕಟ್ಟುಕಟ್ಟಳೆಗಳು ಏನೇ ಇದ್ದರೂ ಸತಿ ಸಹಗಮನ ಪದ್ಧತಿ, ಬಹುಪತ್ನಿತ್ವ ಹಾಗೂ ಇನ್ನಿತರ ಕಂದಾಚಾರಗಳಿಗೆ ಅಂತ್ಯ ಹಾಡಿದಂತೆ ವಿಧವೆಯರನ್ನು ಅಮಂಗಲೆಯಾಗಿ ಪರಿಗಣಿಸುವ ಪದ್ಧತಿಗೂ ಮುಕ್ತಿ ಹಾಡಬೇಕು ಎಂದರು.‌

ಶಿಬಿರಾರ್ಥಿಗಳು ತಾವು ಶಿಬಿರದಲ್ಲಿ ಕಲಿತ ವಿಷಯಗಳನ್ನು ಪ್ರದರ್ಶಿಸುವ ಅವಕಾಶವನ್ನೂ ಸಮಾರೋಪ ಸಮಾರಂಭದಲ್ಲಿ ನೀಡಲಾಯಿತು. ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೇಶವ ಬಾಳೆಕೋಡಿ, ಚಂದ್ರಶೇಖರ ಕೇನಾಜೆ ಹಾಗೂ ದಿವ್ಯಲತಾ ಚೌಟಾಜೆ ಭಾಗವಹಿಸಿ ಗೌಡ ಸಮುದಾಯದ ಕಟ್ಟುಕಟ್ಟಳೆ, ಶೋಬಾನೆ ಹಾಡುಗಳು, ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ಕೈಗೊಳ್ಳುವ ಸಂಪ್ರದಾಯಗಳ ಬಗ್ಗೆ ಶಿಬಿರಾರ್ಥಿಗಳಿಗೆ ತಿಳಿಸಿಕೊಟ್ಟರು. ಇದೇ ವೇಳೆ ಶಿಬಿರಾರ್ಥಿಗಳಾಗಿ ಭಾಗವಹಿಸಿದ್ದ ವಿಶ್ವನಾಥ ಜಾಲಬಾಗಿಲು, ದೀಪಿಕಾ ಅತ್ಯಾಡಿ ಹಾಗೂ ತೀರ್ಥೇಶ್ ಬಳಂದೊಟ್ಟಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಬಿರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಶಸ್ತಿ ಪತ್ರಗಳನ್ನು ಅಕಾಡೆಮಿ ವತಿಯಿಂದ ನೀಡಲಾಯಿತು. 

ಸಮಾರಂಭದಲ್ಲಿ ಅಕಾಡೆಮಿ ಸದಸ್ಯ ಸಂಚಾಲಕ ಕುಸುಮಾಧರ ಎ.ಟಿ, ಸದಸ್ಯರಾದ ಪುರುಷೋತ್ತಮ ಕಿರ್ಲಾಯ, ಜಯಪ್ರಕಾಶ್ ಮೋಂಟಡ್ಕ, ಹಿರಿಯರಾದ ಚಂದಪ್ಪ ಗೌಡ ಪಾತಿಕಲ್ಲು ಉಪಸ್ಥಿತರಿದ್ದರು. ಮಂಡೆಕೋಲಿನ ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಜನಾರ್ದನ ಬರೆಮೇಲು ಅತಿಥಿಗಳನ್ನು ಸ್ವಾಗತಿಸಿದರು. ಸಮಿತಿಯ ಸದಸ್ಯ ಶಿವಪ್ರಸಾದ್ ಉಗ್ರಾಣಿಮನೆ ವಂದಿಸಿದರು. ಶುಭಕರ ಬೊಳುಗಲ್ಲು ಕಾರ್ಯಕ್ರಮ ನಿರೂಪಿಸಿದರು. 

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!