ಕೋಲ್ಚಾರು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಸುದರ್ಶನ ಪಾತಿಕಲ್ಲು ಅವರು ಒಂದು ನಿರ್ದಿಷ್ಟ ಸಮುದಾಯದ ಹುಡುಗರನ್ನು ತಾಲಿಬಾನ್ ಗಳು ಎಂದು ಕರೆದಿಲ್ಲ. ತಮ್ಮ ಸ್ವಂತ ವಸ್ತುಗಳನ್ನು ಹಾಳು ಮಾಡುವುದು ತಾಲಿಬಾನ್ ಗಳ ಸಂಸ್ಕೃತಿ ಎಂದು ಬುದ್ದಿಮಾತು ಹೇಳಿದ್ದಾರೆ ಅಷ್ಟೇ. ಆದರೆ ಕೆಲವರು ಕೋಮು ಸೌಹಾರ್ದತೆ ಕೆಡಿಸಲು ಈ ರೀತಿಯ ಅಪಪ್ರಚಾರ ಮಾಡುತ್ತಿದ್ದಾರೆ ಪ್ರತ್ಯಕ್ಷದರ್ಶಿ ಗ್ರಾ.ಪಂ.ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಅವರು ಸ್ಪಷ್ಟನೆ ನೀಡಿದ್ದಾರೆ.
ಕೋಲ್ಚಾರು ಶಾಲೆಯಲ್ಲಿ ತಾಲಿಬಾನ್ ಪದ ಬಳಕೆಯ ಕುರಿತು ಉಂಟಾಗಿರುವ ಗೊಂದಲದ ಕುರಿತು ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದರು.
ಕೋಲ್ಚಾರು ಶಾಲೆಯ ಮೈದಾನದಲ್ಲಿ ಶಾಲೆಯ ಗೋಡೆಗೆ ತಾಕುವಂತೆ ಗೋಲ್ ಸೆಟ್ ಮಾಡಿ ಕೆಲ ಹುಡುಗರು ಫೂಟ್ ಬಾಲ್ ಆಡುತ್ತಿದ್ದರು. ಅದರಿಂದ ಶಾಲೆಯ ಗೋಡೆಗೆ ಕೆಸರು ಆಗಿತ್ತು. ಇದನ್ನು ಸುದರ್ಶನ ಪಾತಿಕಲ್ಲು ಅವರು ಪ್ರಶ್ನಿಸಿ ನಿಮ್ಮ ಗೋಲ್ ಪಾಯಿಂಟ್ ಅನ್ನು ಬದಲಾಯಿಸಿ ಎಂದು ಹೇಳಿದ್ದಾರೆ. ಇದಕ್ಕೆ ಆ ಹುಡುಗರು ಕಾಡಿಗೆ ಬಾಲ್ ಹೋಗುತ್ತದೆ . ಅಲ್ಲಿ ಹಾವು ಕಚ್ಚಿದರೆ ಯಾರು ಹೊಣೆ ಎಂಬ ಸಬೂಬು ನೀಡಿ ಗೋಲ್ ಪಾಯಿಂಟ್ ಬದಲಾಯಿಸಲು ನಿರಾಕರಿಸಿದ್ದರು. ಇದಕ್ಕೆ ಸುದರ್ಶನ್ ಅವರು ನಿಮ್ಮ ಮನೆಯ ಗೋಡೆಗೂ ಹೀಗೆ ಕೆಸರು ಮಾಡುತ್ತೀರಾ ಎಂದು ಪ್ರಶ್ನಿಸಿದ್ದಕ್ಕೆ ಹುಡುಗರು ಹೌದು ನಾವು ಮನೆಯ ಗೋಡೆಗೂ ಹಾಗೇ ಮಾಡುತ್ತೇವೆ ಎಂದು ಹೇಳಿದ್ದಾರೆ. ಅವರ ಆ ಬೇಜವಾಬ್ದಾರಿ ಹೇಳಿಕೆಗೆ ಸುದರ್ಶನ್ ಅವರು ತಮ್ಮ ಸ್ವಂತ ವಸ್ತುವನ್ನು ಹಾಳು ಮಾಡುವುದು ಭಾರತೀಯ ಸಂಸ್ಕೃತಿಯಲ್ಲ.ಅದೇನಿದ್ದರೂ ತಾಲಿಬಾನಿಗಳ ಸಂಸ್ಕೃತಿ ಎಂದಷ್ಟೇ ಹೇಳಿದ್ದರು. ಬಳಿಕ ಈ ಹುಡುಗರು ಬೇಕಂತಲೇ ಹೊಸ ರಾದ್ದಾಂತ ಸೃಷ್ಟಿಸಿದ್ದಾರೆ ಎಂದರು. ಈ ಕುರಿತು ನಾವು ಸುಳ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಈ ಕುರಿತು ಸರಿಯಾದ ತನಿಖೆ ನಡೆಯಲಿ ಎಂದು ಆಗ್ರಹಿಸಿದರು.
ಬಿಜೆಪಿ ಮಹಾಶಕ್ತಿ ಆಲೆಟ್ಟಿ ಕೇಂದ್ರದ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಮಾತನಾಡಿ ಸದ್ಯ ಆ ಶಾಲೆಯ ೪೦ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಶಾಲೆಗೆ ಗೈರಾಗಿದ್ದಾರೆ. ಶಾಲೆಯ ದಾಖಲಾತಿ ಕೂಡ ರದ್ದು ಮಾಡಿಸಲು ಕೆಲವರು ಮುಂದಾಗುತ್ತಿದ್ದಾರೆ. ಈ ಮೂಲಕ ಸುಮ್ಮನೆ ಕೋಮು ಸೌಹಾರ್ದತೆಯನ್ನು ಕೆಡಿಸುವ ಹುನ್ನಾರ ಮಾಡುತ್ತಿದ್ದಾರೆ. ಸೆ.೨೨ ರಂದು ಬಂದಿದ್ದ ಒಂದು ಮಗುವನ್ನು ಕೂಡ ವಾಪಾಸ್ ಕರೆದುಕೊಂಡು ಹೋಗಿದ್ದಾರೆ ಇದು ಸರಿಯಲ್ಲ. ಶಾಲೆಯ ಹಾಗೂ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಮುಂದಾಗೋಣ ಎಂದರು.
ಈ ಸಂದರ್ಭ ಪ್ರಮುಖರಾದ ಪ್ರದೀಪ್ ಕೊಲ್ಲರಮೂಲೆ, ಚಿದಾನಂದ ಕೋಲ್ಚಾರು,ಜಗದೀಶ್ ಕೂಳಿಯಡ್ಕ, ಸಿದ್ಧಾರ್ಥ ಕೋಲ್ಚಾರು ಉಪಸ್ಥಿತರಿದ್ದರು.