ಕೇಂದ್ರದ ಮಾಜಿ ಸಚಿವ ಡಿ. ವಿ ಸದಾನಂದ ಗೌಡ ಅವರದೆಂದು ಹೇಳಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಈ ಬಗ್ಗೆ ಸದಾನಂದ ಗೌಡ ಅವರು ಬೆಂಗಳೂರು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
‘ನನ್ನ ವಿರುದ್ಧ ಫ್ಯಾಬ್ರಿಕೇಟಡ್, ಫೇಕ್, ಮಿಶ್ರಿತ ವಿಡಿಯೋ ಒಂದನ್ನು ಮಾಡಿದ್ದಾರೆ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ, ನನ್ನ ಇಮೇಜ್ ಹಾಳು ಮಾಡಲೆಂದು ಈ ವಿಡಿಯೋ ಹರಿಬಿಡಲಾಗಿದೆ’ ಎಂದು ಡಿವಿಎಸ್ ಆರೋಪಿಸಿದ್ದಾರೆ. ‘ವಿಡಿಯೋದಲ್ಲಿರುವ ವ್ಯಕ್ತಿ ನಾನಲ್ಲ, ಇಂಪರ್ಸೊನೇಷನ್ ಮೂಲಕ ಈ ವಿಡಿಯೋ ಸಿದ್ದಪಡಿಸಲಾಗಿದೆ. ಈ ವಿಡಿಯೋ ಒಬ್ಬರಿಂದ ಒಬ್ಬರಿಗೆ ಹೋಗುವ ಮುನ್ನ ಕ್ರಮ ಕೈಗೊಳ್ಳಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋಗೂ ನನಗೂ ಯಾವುದೇ ಸಂಬಂಧವಿಲ್ಲ, ಈ ವಿಡಿಯೋದಲ್ಲಿರುವುದು ನಾನಲ್ಲ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ನನ್ನ ರಾಜಕೀಯ ಜೀವನ ಹಾಗೂ ನನ್ನ ಏಳಿಗೆಯನ್ನು ಸಹಿಸದ ದುಷ್ಕರ್ಮಿಗಳು ನನ್ನ ತೇಜೋವಧೆ ಮಾಡಲು ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ನೋವು ತಂದಿದೆ. ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದು, ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು. ಎಂದು ಸದಾನಂದ ಗೌಡ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ನನ್ನ ಮುಖದಂತೆ ಕಾಣುವಂತೆ ಮಾರ್ಫ್ ಮಾಡಲಾಗಿದೆ, ಇದೊಂದು ಕುತಂತ್ರ. ಈ ವಿಡಿಯೋದಲ್ಲಿರುವುದು ನಾನಲ್ಲ ಇಂತಹ ವಿಡಿಯೋಗಳನ್ನು ಯಾವುದೇ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಳ್ಳುವುದು , ಅಪ್ಲೋಡ್, ಫಾರ್ವಡ್ ಮಾಡುವುದು ಶಿಕ್ಷಾರ್ಹವಾಗಿದೆ. ಇಂತಹ ಕೃತ್ಯ ಎಸಗಿದವರ ಬಗ್ಗೆ ನನಗೆ ತಿಳಿಸಿ, ನನ್ನ ವಿರುದ್ಧ ಮಾನಹಾನಿ ಲೇಖನ ಪ್ರಕಟಿಸುವುದಕ್ಕೂ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ ಎಂದು ಸದಾನಂದ ಗೌಡರು ತಿಳಿಸಿದ್ದಾರೆ.
ಈ ವಿಡಿಯೋ ಕುರಿತ ವ್ಯಾಪಕ ಟೀಕೆ, ರಾಜಕೀಯ ಪಕ್ಷಗಳ ಬೆಂಬಲಿಗರಿಂದ ಕಾಲೆಳೆತ-ಸಮರ್ಥನೆಯಂಥ ಪೋಸ್ಟ್ಗಳೂ ಸೋಷಿಯಲ್ ಮೀಡಿಯಾದಲ್ಲಿ ಕಂಡುಬಂದಿವೆ. ಇನ್ನೊಂದೆಡೆ ಇದು ಫೇಕ್ ವಿಡಿಯೋ, ತೇಜೋವಧೆ ಮಾಡಲು ಕಿಡಿಗೇಡಿಗಳು ಸೃಷ್ಟಿಸಿದ ವಿಡಿಯೋ ಎನ್ನುವ ವಾದಗಳೂ ಕೇಳಿಬಂದಿವೆ.