ಸರಸ್ವತಿ ಕಾಮತ್ ಅವರ ಆರೋಪ ದುರುದ್ದೇಶಪೂರಿತವಾಗಿದೆ. ಆದರೂ ನಾವು ನ್ಯಾಯಾಲಯದ ಆದೇಶವನ್ನು ಗೌರವಿಸುತ್ತೇವೆ. ಹರೀಶ್ ಕಂಜಿಪಿಲಿ ಅವರು ತಪ್ಪು ಮಾಡಿಲ್ಲ ಎಂದು ನಾವು ಮೇಲಿನ ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ ಎಂದು ರಾಜ್ಯ ರೈತಮೋರ್ಚಾದ ಉಪಾಧ್ಯಕ್ಷ ಎ.ವಿ ತೀರ್ಥರಾಮ ಅವರು ಹೇಳಿದರು.
ಸುಳ್ಯ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಕಂಜಿಪಿಲಿ ಅವರು ಬಿಜೆಪಿ ಮಂಡಲದ ಆಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂಬ ಕಾಂಗ್ರೆಸ್ ನ ಆಗ್ರಹಕ್ಕೆ ಪ್ರತಿಕ್ರಿಯೆ ನೀಡಿ ಆವರು ಮಾತನಾಡಿದರು. ಹರೀಶ್ ಕಂಜಿಪಿಲಿ ಅವರು ನಿರಪರಾಧಿ ಎಂಬ ನಂಬಿಕೆ ಬಿಜೆಪಿಗೆ ಇದೆ. ಹಾಗಾಗಿ ನಾವು ಅವರ ನೈತಿಕ ಬೆಂಬಲಕ್ಕೆ ನಿಲ್ಲುತ್ತೇವೆ ಎಂದರು.
ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಶುಭದ ಎಸ್ ಅವರು ಮಾತನಾಡಿ ನಾನು ಕಳೆದ ೧೨ ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಮಹಿಳೆಗೆ ಸಿಗಬೇಕಾದ ಗೌರವಗಳು ನನಗೆ ನಮ್ಮ ಪಕ್ಷ ಮಾತ್ರವಲ್ಲದೆ ಉಳಿದ ಪಕ್ಷಗಳಿಂದಲೂ ಸಿಕ್ಕಿದೆ. ನಮ್ಮ ನಡವಳಿಕೆ ಮಹಿಳೆಯರಂತೆಯೇ ಇದ್ದರೆ ಗೌರವಗಳು ತಾವಾಗಿಯೇ ಬರುತ್ತವೆ ಎಂದರು.
ವೆಂಕಟ್ ದಂಬೆಕೋಡಿ ಮಾತನಾಡಿ ಕಾಂಗ್ರೆಸ್ ನಾಯಕರಿಗೆ ನೈತಿಕತೆ ಕುರಿತು ಮಾತನಾಡುವ ಯೋಗ್ಯತೆಯೇ ಇಲ್ಲ ಎಂದರು. ರಾಕೇಶ್ ರೈ ಕೆಡೆಂಜಿ ಮಾತನಾಡಿ ಕಾಂಗ್ರೆಸ್ ನ ಹರಕಲು ಬಾಯಿಯಿಂದಾಗಿಯೇ ಅದು ಈ ಹಂತಕ್ಕೆ ಬಂದಿದೆ. ಸೋನಿಯಾ, ರಾಹುಲ್ , ಡಿಕೆಶಿ ಅಂತಹ ಮಹಾನಾಯಕರಿಂದ ಹಿಡಿದು ತಾಲೂಕು ಮಟ್ಟದಲ್ಲಿ ಸುಳ್ಳು ಜಾತಿ ಪ್ರಮಾಣಪತ್ರದಿಂದ ನ.ಪಂ. ಸದಸ್ಯರಾಗಿರುವವರೆಲ್ಲಾ ಕಾಂಗ್ರೆಸ್ ನಲ್ಲಿದ್ದಾರೆ. ಅವರೆಲ್ಲಾ ಜಾಮೀನಿನಲ್ಲಿಯೇ ಇದ್ದುಕೊಂಡು ಅಧಿಕಾರದಲ್ಲಿದ್ದಾರೆ. ಕಾಂಗ್ರೆಸ್ ತನ್ನ ತಟ್ಟೆಯಲ್ಲಿ ಹೆಗ್ಗಣ ಇಟ್ಟುಕೊಂಡು ಬಿಜೆಪಿ ತಟ್ಟೆಯಲ್ಲಿ ಇರುವೆ ಇದೆ ಎಂದು ಬೊಬ್ಬೆ ಹೊಡೆಯುತ್ತಿದೆ ಎಂದರು.
ಈ ಸಂದರ್ಭ ಎನ್.ಎ.ರಾಮಚಂದ್ರ, ಕೇಶವ ಮುಳಿಯ, ಎ.ವಿ.ತೀರ್ಥರಾಮ, ವೆಂಕಟ್ ವಳಲಂಬೆ, ಬೂಡು ರಾಧಕೃಷ್ಣ ಪನ್ನೆ, ಜಿನ್ನಪ್ಪ ಪೂಜಾರಿ, ವೆಂಕಟ್ ವಳಲಂಬೆ, ದಿನೇಶ್ ಕಣೆಮರಡ್ಕ ,ರಾಕೇಶ್ ರೈ ಕೆಡೆಂಜಿ, ಶುಭದ ಎಸ್. ರೈ, ಪುಷ್ಪಾವತಿ ಬಾಳಿಲ,ವಿನಯ್ ಕುಮಾರ್ ಕಂದಡ್ಕ, ಹರೀಶ್ ರೈ ಉಬರಡ್ಕ, ದಿನೇಶ್ ಮೆದು, ಶ್ರೀನಾಥ್ ಬಾಳಿಲ,ಪ್ರಪುಲ್ಲಾ ರೈ,ಗೀತಾಶೋಭಾ, ಅಚ್ಯುತ್ತ, ಆಶಾ ತಿಮ್ಮಪ್ಪ ಮೊದಲಾದವರಿದ್ದರು.