Ad Widget

ಸಂಪಾಜೆ : ಸೊಸೈಟಿ ಮಹಾಸಭೆ – ಶೇ.12 ಡಿವಿಡೆಂಡ್ ಘೋಷಣೆ

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ 100 ನೇ ವಾರ್ಷಿಕ ಮಹಾಸಭೆಯು ಬ್ಯಾಂಕಿನ ಸಮನ್ವಯ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸೋಮಶೇಖರ ಕೊಯಿಂಗಾಜೆ ಯವರ ಅಧ್ಯಕ್ಷತೆಯಲ್ಲಿ ದಿ.07-09-2021 ರಂದು ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಕುಮಾರ್ ಜೈನ್ ರವರು ಲೆಕ್ಕಪತ್ರಗಳನ್ನು ಮಂಡಿಸಿದರು.

. . . . . . .

ಸಂಘ ವರದಿ ಸಾಲಿನಲ್ಲಿ ಸದಸ್ಯತನ, ಪಾಲು ಬಂಡವಾಳ, ಧನ ವಿನಿಯೋಗ, ಠೇವಣಿಗಳು, ವ್ಯವಹಾರ ಹಾಗೂ ಲಾಭಾಂಶದಲ್ಲಿ ಪ್ರಗತಿಯನ್ನು ಸಾಧಿಸಿದ್ದು 3745072.27 ರೂಪಾಯಿ ನಿವ್ವಳ ಲಾಭಗಳಿಸಿದೆ. ಸದ್ಯಸರಿಗೆ ಶೇ.12 ಡಿವಿಡೆಂಡ್ ಹಾಗೂ ಸಿಬ್ಬಂದಿಗಳಿಗೆ ಎರಡು ತಿಂಗಳ ಬೋನಸ್ ನೀಡುವುದಾಗಿ ತಿಳಿಸಲಾಯಿತು. ಎಸ್ಸೆಸ್ಸೆಲ್ಸಿ ಹಾಗೂ ಅಂತಿಮ ಪಿಯುಸಿ ಪರೀಕ್ಷೆಯಲ್ಲಿ ಶೇ.85ಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ 16 ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.

ಕಳೆದ ಬಾರಿ ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಸಹಕಾರಿ ಸಂಘವು ಗ್ರಾಮದಲ್ಲಿರುವ ಪ್ರತಿಯೊಂದು ಪಡಿತರ ಕಾರ್ಡುದಾರರ ಮನೆಮನೆಗೆ ಪಡಿತರವನ್ನು ವಿತರಿಸಿರುವ ಬಗ್ಗೆ ಹಾಗೂ ಸಂಘದ ಸ್ವಂತ ಬಂಡವಾಳದಿಂದ ವಿತರಿಸಿದ ಕೃಷಿಯೇತರ ಸಾಲಗಳ ಮೇಲಿನ ಹೊರ ಬಾಕಿ ಸಾಲದ ಮೇಲೆ 76 ದಿವಸಗಳ ಸಂಪೂರ್ಣ ಬಡ್ಡಿ ಮನ್ನಾ ಮಾಡಿರುವ ಬಗ್ಗೆ ಸಭೆಗೆ ವಿವರಿಸಲಾಯಿತು.
ಈ ಬಾರಿಯೂ, ಸಂಘದ ಸ್ವಂತ ಬಂಡವಾಳದಿಂದ ವಿತರಿಸಿದ ಕೃಷಿಯೇತರ ಸಾಲಗಳ ಮೇಲಿನ ಹೊರಬಾಕಿ ಸಾಲದ ಮೇಲಿನ ಮೇ, ಜೂನ್ ಮತ್ತು ಜುಲೈ ತಿಂಗಳ ಬಡ್ಡಿಯಲ್ಲಿ ಶೇ.2 ಬಡ್ಡಿಯನ್ನು ಮನ್ನಾ ಮಾಡಿರುವ ಬಗ್ಗೆ ಹಾಗೂ ಸದಸ್ಯರ 3 ಮಾಸಿಕ ಕಂತುಗಳನ್ನು ಮುಂದೂಡಿರುವ ಬಗ್ಗೆ, ಸಂಘದ ಕಾರ್ಯ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ರೂ.500 ಮೌಲ್ಯದ ಆಹಾರ ಕಿಟ್ ವಿತರಿಸಿದ ಬಗ್ಗೆ, ಗ್ರಾಮದಲ್ಲಿ ವಾಸ್ತವ್ಯವಿರುವ ಕಡುಬಡವ ಹಾಗೂ ಪಡಿತರ ಕಾರ್ಡು ರಹಿತರಿಗೆ ಪಡಿತರದೊಂದಿಗೆ ಆಹಾರ ಕಿಟ್ ವಿತರಿಸಿದ ಬಗ್ಗೆ, ಆಶಾ ಕಾರ್ಯಕರ್ತರಿಗೆ ಗೌರವಧನ, ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕರಿಗೆ ಪಡಿತರ ಹಾಗೂ ಆಹಾರ ಕಿಟ್, ಪೋಲೀಸ್ ಇಲಾಖೆಗೆ ಸಹಾಯ ಹಸ್ತ ನೀಡಿರುವ ಬಗ್ಗೆ ಮಹಾಸಭೆಗೆ ತಿಳಿಸಲಾಯಿತು.

ಸದಸ್ಯರ ಆರೋಗ್ಯ ನಿಧಿ ಯೋಜನೆ ಹಾಗೂ ರೈತ ಸಾಂತ್ವನ ನಿಧಿ ( ಮರಣ ನಿಧಿ ) ಯನ್ನು ಸಂಘದಿಂದ ಆರಂಭಿಸಿರುವ ಬಗ್ಗೆ ಸದಸ್ಯರಾದ ವೆಂಕಟೇಶ್ ಅವರು ಅಭಿನಂದನೆ ಸಲ್ಲಿಸಿದರು.
ಸುಸ್ತಿ ಸಾಲಗಾರರ ಮೇಲೆ ಕಾನೂನು ಕ್ರಮ ಕೈಗೊಳ್ಳದಿರುವ ಬಗ್ಗೆ ವಿವರವಾಗಿ ಚರ್ಚಿಸಿ, ಈಗಾಗಲೇ ಒಬ್ಬ ಸಿಬ್ಬಂದಿಯನ್ನು ಸುಸ್ತಿ ಸಾಲಗಳ ವಸೂಲಾತಿ ಹಾಗೂ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ನಿಯೋಜಿಸಿರುವ ಬಗ್ಗೆ ತಿಳಿಸಲಾಯಿತು.
ಸಾಲ ಮನ್ನಾದ ಬಗ್ಗೆ, ಮಹಾಸಭೆಗೆ ಹಾಜರಾಗುವ ಸದಸ್ಯರ ಬಗ್ಗೆ, ಜನೌಷಧ ಕೇಂದ್ರ ತೆರೆಯುವ ಬಗ್ಗೆ, ಶತಮಾನೋತ್ಸವದ ಮುಂದಿನ ಯೋಜನೆಯ ಬಗ್ಗೆ ಚರ್ಚಿಸಲಾಯಿತು.
ನಿರ್ದೇಶಕರಾದ ಗಣಪತಿ ಭಟ್ ಪಿ. ಎನ್, ಸುಮತಿ ಶಕ್ತಿವೇಲು, ಆನಂದ ಪಿ.ಎಲ್, ಯಮುನಾ ಬಿ.ಎಸ್, ಹಮೀದ್ ಎಚ್, ಚಂದ್ರಶೇಖರ ಕೆ.ಯು, ರಾಜೀವಿ ಬೈಲೆ ಉಪಸ್ಥಿತರಿದ್ದರು. ನಿರ್ದೇಶಕರಾದ ಉಷಾ ಕೆ.ಎಮ್ ರವರ ಪ್ರಾರ್ಥನೆ, ಸಿಬ್ಬಂದಿಯಾದ ಧನಂಜಯ ರವರ ರೈತ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಉಪಾಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ರವರು ಸ್ವಾಗತಿಸಿ ನಿರ್ದೇಶಕರಾದ ಜಗದೀಶ್ ರೈ ಕೆ.ಆರ್ ರವರು ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!