ಅಮೃತ್ ಯೋಜನೆಯಡಿ ಆಯ್ಕೆ ಮಾಡಲಾದ ಎಲ್ಲಾ ಗ್ರಾಮ ಪಂಚಾಯತ್‍ಗಳಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು, ಅಗತ್ಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಆಯಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಮೇಲುಸ್ತುವಾರಿ ವಹಿಸಬೇಕು ಎಂದು ಸಚಿವ ಎಸ್.ಅಂಗಾರ ಸೂಚಿಸಿದರು.
ಅಮೃತ್ ಗ್ರಾಮ ಪಂಚಾಯತ್ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಗ್ರಾಮ ಪಂಚಾಯತ್‍ಗೆ 25 ಲಕ್ಷ ರೂ.ಗಳ ಅನುದಾನ ನೀಡಲಾಗುವುದು ಎಂದರು.
ಬಂಟ್ವಾಳ ತಾಲೂಕಿನ ಸಂಗಬೆಟ್ಟು, ಇರ್ವತ್ತೂರು, ಪಿಲಾತ ಬೆಟ್ಟು, ಕಡೇಶ್ವಾಲ್ಯ, ಬಾಳೆಪುಣಿ ಹಾಗೂ ಇಡ್ಕಿದು, ಬೆಳ್ತಂಗಡಿ ತಾಲೂಕಿನ ಮಡಂತ್ಯಾರು, ಕೊಕ್ಕಡ, ಧರ್ಮಸ್ಥಳ, ಉಜಿರೆ, ಹೊಸಂಗಡಿ, ಅಳದಂಗಡಿ, ಕಡಬ ತಾಲೂಕಿನ ಸವಣೂರು, ಅಲಂಕಾರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಆರ್ಯಾಪು, ಕಬಕ, ಸುಳ್ಯ ತಾಲೂಕಿನ ಅರಂತೋಡು, ಮಂಡೆಕೋಲು, ಮರ್ಕಂಜ, ಮೂಡಬಿದ್ರೆ ತಾಲೂಕಿನ ಬೆಳುವಾಯಿ, ತೆಂಕಮಿಜಾರು, ಮಂಗಳೂರು ತಾಲೂಕಿನ ಬಡಗ ಎಡಪದವು, ಗಂಜಿಮಠ, ಮುನ್ನೂರು, ಹಳೆಯಂಗಡಿ, ಪೆರ್ಮುದೆ ಗ್ರಾಮ ಪಂಚಾಯತ್‍ಗಳು ಅಮೃತ್ ಗ್ರಾಮ ಪಂಚಾಯತ್ ಯೋಜನೆಯಡಿ ಆಯ್ಕೆ ಮಾಡಲಾಗಿದೆ ಎಂದವರು ಹೇಳಿದರು.
ಅಮೃತ್ ಗ್ರಾಮ ಪಂಚಾಯತ್ ಅನುಷ್ಠಾನ ಮಾಡಲು ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗಳಿಗೆ ನಳ ಸಂಪರ್ಕ, ಗ್ರಾಮ ಪಂಚಾಯತ್ ಸ್ವಂತ ಅಥವಾ 15 ನೇ ಹಣಕಾಸು ಯೋಜನೆಯಡಿ ಬೀದಿ ದೀಪಗಳು ಮತ್ತು ಸೋಲಾರ್ ದೀಪಗಳ ಅಳವಡಿಕೆ, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಉದ್ಯಾನವನಗಳ ನಿರ್ಮಾಣ, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಅನುದಾನದಿಂದ ಶಾಲಾ ಕೊಠಡಿಗಳ ನಿರ್ಮಾಣ ಹಾಗೂ ದುರಸ್ತಿ, ಮಹಾತ್ಮ ಗಾಂಧಿ ನರೇಗಾ, ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಶಾಲೆ, ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು, ಆಟದ ಮೈದಾನ, ಆವರಣ ಗೋಡೆಗಳ ನಿರ್ಮಾಣ, ಗ್ರಾಮ ಪಂಚಾಯತ್ ಸ್ವಂತ ಅನುದಾನ ಹಾಗೂ 15 ನೇ ಹಣಕಾಸು ಯೋಜನೆಯಡಿ ಗ್ರಾಮ ಪಂಚಾಯತ್ ಡಿಜಿಟಲೀಕರಣ, ಸ್ವಚ್ಛ ಭಾರತ ಮಿಷನ್ ಹಾಗೂ 15 ನೇ ಹಣಕಾಸು ಯೋಜನೆಯಡಿ ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಚಟುವಟಿಕೆಗಳನ್ನು ಕೈಗೊಳ್ಳಬಹುದಾಗಿದೆ ಎಂದು ಸಚಿವರು ತಿಳಿಸಿದರು.