ಮಕ್ಕಳ ಸುಪ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ ಕಲ್ಪಿಸಲು ಮಕ್ಕಳಿಂದಲೇ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್‌ನ ಎರಡನೇ ಘಟಕ ಇದೀಗ ಪ್ರಾರಂಭಗೊಂಡಿದೆ.
ಮಂಡೆಕೋಲಿನ ಕಣೆಮರಡ್ಕದಲ್ಲಿ ಪ್ರಾರಂಭಗೊಂಡ ಚಿರಾಯು ಸ್ಟುಡೆಂಟ್ಸ್ ಕ್ಲಬ್ ನ ಎರಡನೇ ಘಟಕದ ಉದ್ಘಾಟನೆಯನ್ನು ಮಂಡೆಕೋಲು ಗ್ರಾ.ಪಂ ಅಧ್ಯಕ್ಷೆ ವಿನುತಾ ಪಾತಿಕಲ್ಲು ಸೆ.5 ರಂದು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಆರಂಭದ ಹಂತದಲ್ಲೇ ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆ ದೊರೆತರೆ ಮುಂದೆ ಯಾವುದೇ ಕ್ಷೇತ್ರದಲ್ಲೂ ಬೆಳೆಯಲು ಸಾಧ್ಯವಾಗುತ್ತದೆ. ಸುಪ್ತ ಪ್ರತಿಭೆಗಳನ್ನು ಗುಪ್ತವಾಗಿರಿಸದೆ ಅವಕಾಶ ದೊರೆತಾಗ ಅನಾವರಣಗೊಳಿಸಿದರೆ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದರು.
ಕ್ಲಬ್‌ನ ಮಾರ್ಗದರ್ಶಕ ಸುರೇಶ್ ಕಣೆಮರಡ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ಸಭಾಕಂಪನ ದೂರೀಕರಿಸಲು ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ನೂತನ ಘಟಕದ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು. ಮುಖ್ಯ ಅತಿಥಿಯಾಗಿ ಪತ್ರಕರ್ತ ಗಣೇಶ್ ಮಾವಂಜಿ ಆಗಮಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಸದಸ್ಯರಾದ ಬಾಲಚಂದ್ರ ಹಾಗೂ ರಾಧಿಕಾ ಉಪಸ್ಥಿತರಿದ್ದರು.
*ನೂತನ ಪದಾಧಿಕಾರಿಗಳ ಆಯ್ಕೆ*
ಚಿರಾಯು ಸ್ಟುಡಂಟ್ಸ್ ಕ್ಲಬ್ 1 ರ ನೂತನ ಅಧ್ಯಕ್ಷರಾಗಿ ನಮಿತಾ, ಕಾರ್ಯದರ್ಶಿಯಾಗಿ ಅಭಿಷೇಕ್, ಖಜಾಂಜಿಯಾಗಿ ಜನನಿ ಹಾಗೂ ಲೆಕ್ಕಪತ್ರ ಉಸ್ತುವಾರಿಯಾಗಿ ಧನುಶ್ ಅಧಿಕಾರ ಸ್ವೀಕರಿಸಿದರು. ಮಕ್ಕಳಿಂದಲೇ ನಡೆಸಲ್ಪಡುವ ಈ ಚಿರಾಯು ಸ್ಟುಡೆಂಟ್ಸ್ ಕ್ಲಬ್-1 ರ ಕಾರ್ಯಚಟುವಟಿಕೆಗಳು ಮಕ್ಕಳ ಬೌದ್ಧಿಕ ಹಾಗೂ ಶಾರೀರಿಕ ಬೆಳವಣಿಗೆಗೆ ಪೂರಕವಾಗಿರುತ್ತದೆ. ಪ್ರತೀ ಭಾನುವಾರ ಹಿರಿಯ ಮಕ್ಕಳು ಕಿರಿಯ ಮಕ್ಕಳಿಗೆ ಕೆಲವೊಂದು ಚಟುವಟಿಕೆಗಳನ್ನು ನೀಡುವುದಲ್ಲದೆ ಮಕ್ಕಳೊಳಗೆ ಕೆಲವೊಂದು ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಣೆಯನ್ನೂ ಮಾಡಿ ಅವರನ್ನು ಹುರಿದುಂಬಿಸಲಿದೆ.