ಭಾರತದ ಧ್ವಜ ದಲ್ಲಿ ಕೇಸರಿ ಬಿಳಿ ಹಸಿರು ಬಣ್ಣದಲ್ಲಿ ಕೇಸರಿ ತ್ಯಾಗದ, ಬಿಳಿ ಶಾಂತಿ ಹಾಗೂ ಹಸಿರು ಬಣ್ಣ ಸಮೃದ್ಧಿಯ ಬಗ್ಗೆ ಅರ್ಥವನ್ನು ಸೂಚಿಸುತ್ತದೆ. ಶಾಂತಿ ಮತ್ತು ಸಮೃದ್ಧಿ ಇರಬೇಕಾದರೆ ತ್ಯಾಗ ಅನಿವಾರ್ಯ. ಹಾಗಾಗಿ ನಾನು ತ್ಯಾಗದ ಬಣ್ಣವನ್ನು ಸೂಚಿಸುವ ಕೇಸರಿ ಬಣ್ಣದ ಶಾಲು ಹಾಕಿಕೊಳ್ಳುತ್ತೇನೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.
ಇತ್ತೀಚಿಗೆ ಅಂಗಾರ ಅವರು ಸರಕಾರಿ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹಾಕಿದ್ದಕ್ಕೆ ಕೆಲ ವಿರೋಧ ಪಕ್ಷದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಕೆ.ವಿ.ಜಿ ಆಯರ್ವೇದ ಕಾಲೇಜಿನ ಮೀನುಕೃಷಿ ಕಾರ್ಯಗಾರದಲ್ಲಿ ಭಾಷಣ ಮಾಡುವ ಸಂದರ್ಭ ಪ್ರತಿಕ್ರಿಯೆ ನೀಡಿದರು. ನಮ್ಮ ದೇಶದಲ್ಲಿ ಮಾತ್ರ ಸರ್ವೇ ಜನಃ ಸುಖಿನೋ ಭವಂತು ಎಂಬ ಸಂಸ್ಕಾರವಿದೆ. ಭಾರತದ ಸಂಸ್ಕಾರದ ಸ್ಪಷ್ಟ ಪರಿಚಯವಿಲ್ಲದ ಅತಿ ಬುದ್ದಿವಂತರು ಮಾತ್ರ ಹೀಗೆ ಆರ್ಥಹೀನರಾಗಿ ಮಾತನಾಡುತ್ತಾರೆ ಎಂದರು. ಕೇಸರಿ ಶಾಲು ಹಾಕುವುದು ತ್ಯಾಗದ ಸಂಕೇತವಾಗಿ ಎಂದು ಹೇಳುವ ವೇಳೆ ಸಭಿಕರು ಪ್ರೋತ್ಸಾಹದಾಯಕವಾಗಿ ಕರತಾಡನ ಮಾಡುವ ಮೂಲಕ ಬೆಂಬಲ ಸೂಚಿಸಿದರು.