Ad Widget

ತಮಿಳುನಾಡಿನಲ್ಲಿ ಅರಳುತ್ತಿರುವ ತುಳುನಾಡಿನ ವಯೋಲಿನ್ ಪ್ರತಿಭೆ – ಸುಳ್ಯದ ರಾಜೇಶ್ ಕುಂಭಕೋಡು

ಹಿತ್ತಲ ಗಿಡ ಮದ್ದಲ್ಲ ಅನ್ನುವ ಗಾದೆ ಮಾತೊಂದಿದೆ‌. ತನ್ನೂರಿನಲ್ಲಿ ಗುರುತಿಸಲ್ಪಡದೇ ದೂರದ ಚೆನ್ನೈ ಮಹಾನಗರದಲ್ಲಿ ಕುಳಿತು ಸಂಗೀತ ಕ್ಷೇತ್ರದಲ್ಲಿ ಅಪರೂಪದ ಸಾಧನೆಗೈಯುತ್ತಿರುವ ವಯೋಲಿನ್ ವಾದಕ ರಾಜೇಶ್ ಕುಂಭಕೋಡು ಅವರು ಈ ಮಾತಿಗೆ ಜೀವಂತ ಸಾಕ್ಷಿ ಎಂದರೆ ತಪ್ಪಾಗಲಾರದು‌. ವಯೋಲಿನ್ ಕಲಿಯುವ ಏಕೈಕ ಗುರಿಯೊಂದಿಗೆ ಬರಿಗೈಯಲ್ಲಿ ಚೆನ್ನೈ ಗೆ ತೆರಳಿದ ಇವರನ್ನು ಸಂಗೀತ ಮಾತೆ ಕೈ ಹಿಡಿದು ಆಸರೆ‌ ನೀಡಿದಳು. ಹೌದು… ಇವರ ಬೆರಳುಗಳ ಮಾಂತ್ರಿಕ ಸ್ಪರ್ಶದಿಂದ ನಾಲ್ಕು ತಂತಿ ಮಾತನಾಡುತ್ತದೆ, ನೋಡುಗರನ್ನು ಮಂತ್ರಮುಗ್ದಗೊಳಿಸುತ್ತದೆ, ಕೇಳುಗರನ್ನು‌ ಗಾನಲೋಕದಲ್ಲಿ ಮೈಮರೆಸಿ ಗಂಧರ್ವ ಲೋಕಕ್ಕೆ ಕರೆದೊಯ್ಯುತ್ತದೆ. ವಯೋಲಿನ್ ತಂತಿಯನ್ನು ಮೀಟುತ್ತಾ ನಾದ ಹೊಮ್ಮಿಸುವ ಸಂಗೀತದ ಕಲೆ ಇವರಿಗೆ ಸಿದ್ಧಿಸಿದೆ. ಆದರೆ ಇವರ ಪ್ರತಿಭೆ ಹುಟ್ಟೂರಿನಲ್ಲಿ ಬೆಳಕಿಗೆ ಬರಲೇ ಇಲ್ಲ, ಅದಕ್ಕೆ ಸರಿಯಾದ ವೇದಿಕೆ ಹಾಗೂ ಮನ್ನಣೆಯೂ ಹುಟ್ಟೂರಲ್ಲಿ‌ ಸಿಕ್ಕಿಲ್ಲವೆನ್ನುವುದು ವಿಷಾದನೀಯ.

“ಗ್ರಾಮೀಣ ಪ್ರತಿಭೆಯೊಂದು ಸಂಗೀತ ನಗರಿಗೆ ಕಾಲಿಟ್ಟ ಬಗೆ…” :-

ಸುಳ್ಯದ ಭಜನಾ ಮಂದಿರದಲ್ಲಿ ಕಾಸರಗೋಡಿನ ವಾಸುದೇವ ಆಚಾರ್ಯರ ಬಳಿ ವಯೋಲಿನ್ ಕಲಿಕೆ ಆರಂಭಿಸಿದ ಇವರು ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ಉದ್ದೇಶದಿಂದ ತಮಿಳುನಾಡಿನ ಖ್ಯಾತ ವಯೋಲಿನ್ ವಾದಕಿ, ಸಂಗೀತ ಕಲಾನಿಧಿ, ಕಲೈಮಾಮಣಿ, ಪದ್ಮಶ್ರೀ ಎ.ಕನ್ಯಾಕುಮಾರಿಯವರ ಶಿಷ್ಯರಾಗಿ ವಯೋಲಿನ್ ಕಲಿಯುವ ಬಯಕೆ ಹೊಂದಿದ್ದರು. ತನ್ನ ಮನೋಭಿಲಾಷೆಯನ್ನು ಆತ್ಮೀಯರಾದ ಸುಳ್ಯದ ಪುರೋಹಿತ ನಟರಾಜ್ ಶರ್ಮರಲ್ಲಿ ಹೇಳಿಕೊಂಡಾಗ, ಕನ್ಯಾಕುಮಾರಿಯವರನ್ನು ಸಂಪರ್ಕಿಸಿ ಅವರ ಶಿಷ್ಯರಾಗಿ ಚೆನ್ನೈ ನಲ್ಲಿ ನೆಲೆಸುವುದಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನೂ ಅವರು ಮಾಡಿಕೊಟ್ಟಿದ್ದರು. ಆ ಬಳಿಕ ತನ್ನ ಸಾಧನಾ ಪಥದಲ್ಲಿ ಹಿಂದಿರುಗಿ ನೋಡದ ಇವರು ಸಂಗೀತ ಕ್ಷೇತ್ರದಲ್ಲಿ ಹಂತ ಹಂತವಾಗಿ ಬೆಳೆಯುತ್ತಾ ಇದೀಗ ಹೆಸರಾಂತ ಕಲಾವಿದರ ಕಛೇರಿಗಳಲ್ಲಿ ಪಕ್ಕವಾದ್ಯ ಕಲಾವಿದನಾಗಿ ವಯೋಲಿನ್ ನುಡಿಸುವುದರ ಜೊತೆಗೆ ನೂರಾರು ಶಿಷ್ಯ ವರ್ಗಕ್ಕೆ ವಯೋಲಿನ್ ತರಗತಿ ನಡೆಸಿಕೊಡುತ್ತಿದ್ದಾರೆ. ಪ್ರಸ್ತುತ ಚೆನ್ನೈ ನಲ್ಲಿ 60 ವಿದ್ಯಾರ್ಥಿಗಳು ಇವರಿಂದ ವಯೋಲಿನ್ ತರಬೇತಿ ಪಡೆಯುತ್ತಿದ್ದಾರೆ‌. ಚೆನ್ನೈ ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರು ಕೂಡಾ ತಮ್ಮ ಶಿಷ್ಯರಲ್ಲೊಬ್ಬರು ಅನ್ನುವ ಹೆಗ್ಗಳಿಕೆ ಇವರದ್ದು.! ಇದರ ಜೊತೆಗೆ ವಿದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಮೂಲಕವೂ ತರಗತಿ ನಡೆಸಿಕೊಡುತ್ತಿದ್ದಾರೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ 10, ಅಬುದಾಬಿಯಲ್ಲಿ 3, ಸ್ವಿಟ್ಜರ್ಲೆಂಡ್ ನಲ್ಲಿ 2 ವಿದ್ಯಾರ್ಥಿಗಳು ಅಂತರ್ಜಾಲದ ಮೂಲಕ ಇವರಿಂದ ವಯೋಲಿನ್ ಕಲಿಯುತ್ತಿದ್ದು ಇವರ ಪೈಕಿ ಇಬ್ಬರು ಶಿಷ್ಯರು ಅಮೇರಿಕಾದ ಕ್ಲೀವ್ ಲ್ಯಾಂಡ್ ಸಂಗೀತ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಹಾಗೂ ಇನ್ನೊಬ್ಬ ವಿದ್ಯಾರ್ಥಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮೂವರು ವಿದ್ಯಾರ್ಥಿಗಳು ಕೇಂದ್ರ ಸರಕಾರದಿಂದ CCRT ವಿದ್ಯಾರ್ಥಿ ವೇತನ ಪಡೆಯಲು ಅರ್ಹತೆ ಗಳಿಸಿರುತ್ತಾರೆ. ಚೆನ್ನೈ ನ ವಿದ್ಯಾರ್ಥಿಗಳು ಕೂಡಾ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡಿರುತ್ತಾರೆ. ಅಂತರ್ಜಾಲ ತರಗತಿಗೆ ಮತ್ತಷ್ಟು ಬೇಡಿಕೆ ಬರುತ್ತಿದ್ದು ಸಮಯದ ಅಭಾವದಿಂದ ಎಲ್ಲರ ಬೇಡಿಕೆಗಳನ್ನು ಇವರಿಗೆ ಪೂರೈಸಲಾಗುತ್ತಿಲ್ಲ.  

“ಸಂಗೀತ ಶಿರೋಮಣಿಗಳ ಜೊತೆ ಪಕ್ಕವಾದ್ಯ ಕಲಾವಿದನಾಗಿ…” :-

ಈ ತನಕ ಇವರು ಚೆನ್ನೈ, ತಿರುಪತಿ, ಹೈದರಾಬಾದ್, ಬೆಂಗಳೂರು,ಮುಂಬೈ ಮೊದಲಾದ ಕಡೆ ಹಲವಾರು ಗಣ್ಯರ ಸಮ್ಮುಖದಲ್ಲಿ ಪಕ್ಕವಾದ್ಯ ಕಲಾವಿದರಾಗಿ ವಯೋಲಿನ್ ನುಡಿಸಿದ್ದು ಮಾತ್ರವಲ್ಲದೆ 2017 ಏಪ್ರಿಲ್ ನಲ್ಲಿ ಕಛೇರಿ ನಿಮಿತ್ತ ಅಬುದಾಬಿಗೂ ತೆರಳಿದ್ದಾರೆ. ಸರಿ ಸುಮಾರು ಹತ್ತು ವರ್ಷದ ಹಿಂದೆ ತನ್ನ ಮನೆಯಲ್ಲಿ, ತನ್ನೂರಿನ ದೇಗುಲಗಳಲ್ಲಿ ಕ್ಯಾಸೆಟ್ ಅಥವಾ ಸಿಡಿಗಳ ಮೂಲಕ ಸಂಗೀತ ವಿದ್ಯಾನಿಧಿ ಶ್ರೀ ವಿದ್ಯಾಭೂಷಣ ಅವರ ಹಾಡುಗಳನ್ನು ಕೇಳಿ ಮೈಮರೆಯುತ್ತಿದ್ದ ಯುವಕ ಇಂದು ಅದೇ ವಿದ್ಯಾಭೂಷಣರ ಸಂಗೀತ ಕಛೇರಿಗೆ ವಯೋಲಿನ್ ವಾದಕರಾಗಿ ಸಹಕರಿಸುತ್ತಾ ಅವರ ಜೊತೆಗೆ ವೇದಿಕೆ ಹಂಚಿಕೊಂಡು ಅವರಿಂದಲೇ ಬೆನ್ನುತಟ್ಟಿಸಿಕೊಳ್ಳುತ್ತಿದ್ದಾರೆ.! ಅಂದು ರೇಡಿಯೋದಲ್ಲಿ ಕನ್ಯಾಕುಮಾರಿಯವರ ವಯೋಲಿನ್ ಕಛೇರಿಯನ್ನು ಆಲಿಸುತ್ತಾ ಕನಸು ಕಾಣುತ್ತಿದ್ದ ಇವರು ಇಂದು ಅದೇ ಕನ್ಯಾಕುಮಾರಿಯವರ ಶಿಷ್ಯರಾಗಿ ಜನಮನ್ನಣೆ ಗಳಿಸಿ ಎತ್ತರಕ್ಕೇರಿದ್ದಾರೆ.! ಕಲಾತಪಸ್ಸು, ಸಾಧನೆ ಅಂದರೆ ಇದೇ ತಾನೇ.?

“ಸಂಗೀತ ಸಾಧನೆಗೆ ಸಂದ ಗೌರವ..” :-

ಇವರ ಸಂಗೀತ ಸಾಧನೆಯನ್ನು ಮೆಚ್ಚಿ ಆಲ್ ಇಂಡಿಯಾ ರೇಡಿಯೋದಿಂದ ಬಿ ಗ್ರೇಡ್ ಕಲಾವಿದ ಅನ್ನುವ ಮಾನ್ಯತೆ ಸಿಕ್ಕಿದೆ, ಕಂಚಿ ಕಾಮಕೋಟಿ ಪೀಠದಿಂದ ಆಸ್ಥಾನ ವಿದ್ವಾನ್ ಗೌರವ ಲಭಿಸಿದೆ. ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನಲ್ಲಿ ನಡೆದ ಕೊಂಕಣಿ ಯುವಜನೋತ್ಸವ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿತರಾಗಿದ್ದಾರೆ.

ಸುಳ್ಯ ತಾಲೂಕಿನ ಆಲೆಟ್ಟಿ ಗ್ರಾಮದ ಕುಂಭಕೋಡು ಗೋಪಾಲಕೃಷ್ಣ ನಾಯಕ್ ಮತ್ತು ವಿಜಯ ದಂಪತಿಗಳ ಪುತ್ರರಾಗಿರುವ ಈ ಸಂಗೀತ ಸಾಧಕನ ವಿಶೇಷ ಪ್ರತಿಭೆಯನ್ನು ಬೆಳಕಿಗೆ ತಂದು ಪ್ರೋತ್ಸಾಹಿಸುವುದರ ಜೊತೆಗೆ ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೇರಲೆಂದು ಶುಭ ಹಾರೈಸೋಣ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!