ಮಕ್ಕಳು ಹಾಗೂ ಯುವಜನತೆಯನ್ನು ತಂಬಾಕು ಹಾಗೂ ಇತರ ಮಾದಕ ವಸ್ತುಗಳಿಂದ ರಕ್ಷಿಸುವ ಸಲುವಾಗಿ ಮತ್ತು ಜಾಗೃತಿಯನ್ನು ಮೂಡಿಸುವ ಸಲುವಾಗಿ ತಂಬಾಕು ಮುಕ್ತ ಶಾಲೆ – ಗುಲಾಬಿ ದಿನಾಚರಣೆಯನ್ನು ಸ.ಹಿ.ಪ್ರಾ.ಶಾಲೆ ಮುರುಳ್ಯ ಶಾಂತಿನಗರ ಇಲ್ಲಿ ಫೆ. 24 ರಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಕ್ಕಳು ಸ್ಥಳೀಯ ಶಾಲಾ ಪರಿಸರದಲ್ಲಿ ಜಾಥಾವನ್ನು ನಡೆಸಿದರು ಹಾಗೂ ತಂಬಾಕು ವಿರೋಧಿ ಘೋಷಣೆಗಳನ್ನು ಕೂಗಿದರು.
ಸ್ಥಳೀಯ ಅಂಗಡಿಗಳಿಗೆ ತೆರಳಿ ಗುಲಾಬಿ ಹೂಗಳನ್ನು ನೀಡಿ, ಶಾಲಾ ಪರಿಸರದಿಂದ 100 ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟ ಮಾಡದಂತೆ ಮತ್ತು 18 ವರ್ಷ ಕ್ಕಿಂತ ಕೆಳಗಿನ ಮಕ್ಕಳಿಗೆ ತಂಬಾಕು ಪದಾರ್ಥ ಮಾರಾಟ ಮಾಡುವುದು ಕಾನೂನಿಗೆ ವಿರುದ್ದವಾದದ್ದು ಎಂಬುದಾಗಿ ತಿಳಿಹೇಳಲಾಯಿತು. ಇದೇ ಸಂದರ್ಭದಲ್ಲಿ ಮುರುಳ್ಯ ಶಾಂತಿನಗರ ಪೇಟೆಯಲ್ಲಿ ಸಾರ್ವಜನಿಕರನ್ನು ಒಟ್ಟು ಸೇರಿಸಿ, ಅವರಿಗೂ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಈ ಬಗ್ಗೆ ಜಾಗೃತಿ ಸಂದೇಶವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಪದ್ಮಾವತಿ, ಶಿಕ್ಷಕರುಗಳಾದ ಶ್ರೀಮತಿ ಶಶಿಕಲಾ ಹಾಗೂ ಶ್ರೀ ಪ್ರದೀಪ್ ಬಾಕಿಲ, ಮಕ್ಕಳ ಪೋಷಕರು ಹಾಗೂ ಊರವರು ಉಪಸ್ಥಿತರಿದ್ದರು.