ನಾಲ್ಕನೇ ಹಂತದ ಲಾಕ್ಡೌನ್ ಇದೇ ಮೇ 31ಕ್ಕೆ ಮುಗಿಯಲಿದ್ದು , ಈ ನಡುವೆಯೂ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ವ್ಯಾಪಕವಾಗಿ ಹೆಚ್ಚುತ್ತಿದೆ. ಹೀಗಾಗಿ ಐದನೇ ಹಂತದಲ್ಲಿ ಜೂನ್ 15ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತಿದೆ.
ಮೊದಲ ಬಾರಿ ಲಾಕ್ಡೌನ್ ಘೋಷಣೆ ಮಾಡುವಾಗ ಪ್ರಧಾನಿ ಮೋದಿ ಯಾರನ್ನು ಕೇಳಿರಲಿಲ್ಲ. ಏಕಾಏಕಿ ನಾಲ್ಕೇ ನಾಲ್ಕು ಗಂಟೆ ಮೊದಲು ಇಂದು ಮಧ್ಯರಾತ್ರಿಯಿಂದ ದೇಶಾದ್ಯಂತ ಲಾಕ್ಡೌನ್ ಎಂದು ಘೋಷಿಸಿದ್ದರು. ಅದಾದ ಬಳಿಕ ಪ್ರತಿ ಸಲವೂ ಲಾಕ್ಡೌನ್ ಅನ್ನು ಮುಂದುವರೆಸಬೇಕೋ ಮೊಟಕುಗೊಳಿಸಬೇಕೋ ಎಂಬ ಗೊಂದಲ ಉಂಟಾದಾಗ ರಾಜ್ಯಗಳ ಅಭಿಪ್ರಾಯ ಪಡೆದಿದ್ದರು. ಈಗಲೂ ಮತ್ತೆ ಸಂದರ್ಭ ಸೃಷ್ಟಿಯಾಗಿದೆ. ಆದರೀಗ ದೇಶದಲ್ಲಿ ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವುದರಿಂದ ಲಾಕ್ಡೌನ್ ತೆರವುಗೊಳಿಸುವುದು ಸೂಕ್ತವಾದ ಕ್ರಮವಲ್ಲ ಎಂದು ಆರೋಗ್ಯ ಇಲಾಖೆ ಸಲಹೆ ನೀಡಿರುವುದರಿಂದ ಲಾಕ್ಡೌನ್ ವಿಸ್ತರಣೆ ಮಾಡಲಾಗುತ್ತಿದೆ.
ಜೂನ್ 15ರವರೆಗೂ ಲಾಕ್ಡೌನ್ ವಿಸ್ತರಣೆ ಮಾಡಲು ಮುಂದಾಗಿದ್ದರೂ 5.O ಲಾಕ್ಡೌನ್ನಲ್ಲಿ ಭಾರೀ ಬದಲಾವಣೆ ಇರಲಿದೆ ಎಂದು ಕೇಂದ್ರ ಗೃಹ ಇಲಾಖೆಯ ಮೂಲಗಳು ಮಾಧ್ಯಮ ಕ್ಕೆ ತಿಳಿಸಿವೆ. ಐದನೇ ಹಂತದ ಲಾಕ್ಡೌನ್ ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತಾ, ಅಹಮದಾಬಾದ್, ಇಂದೂರ್, ದೆಹಲಿ, ಪುಣೆ, ಥಾಣ, ಜೈಪುರ್ ಮತ್ತು ಸೂರತ್ ನಗರಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರಲಿದೆ. ಇಡೀ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆಯಲ್ಲಿ ಈ 11 ನಗರಗಳ ಕೊಡುಗೆ ಶೇಕಡಾ 70ರಷ್ಟು ಇರುವುದರಿಂದ ಈ ನಗರಗಳತ್ತ ವಿಶೇಷ ಗಮನ ಹರಿಸಲಾಗಿದೆ.
ಉಳಿದೆಡೆಗೆ ಹಲವಾರು ವಿನಾಯಿತಿ ನೀಡುವ ಸಾಧ್ಯತೆ ಇದೆ. ಅಂಥ ಪ್ರಮುಖ ವಿನಾಯಿತಿ ಎಂದರೆ ಬೆಳಿಗ್ಗೆ 7ರಿಂದ ಸಂಜೆ 7ರವರೆಗೆ ಎಲ್ಲಾ ವ್ಯವಹಾರಗಳನ್ನು ನಡೆಸಬಹುದು. ಆದರೆ ರಾತ್ರಿ 7ರಿಂದ ಬೆಳಿಗ್ಗೆ 7ರವರೆಗೆ ಕಟ್ಟುನಿಟ್ಟಿನ ಕ್ರಮ ನಿಷೇಧಾಜ್ಞೆ ಜಾರಿಯಲ್ಲಿರಲಿದೆ. ಲಕ್ಡೌನ್ 5.O ಸಂದರ್ಭದಲ್ಲಿ ಆಟೋ, ಟ್ಯಾಕ್ಸಿ ಓಡಾಟಕ್ಕೆ ಅವಕಾಶ ನೀಡುವ ಸಾಧ್ಯತೆಗಳು ಇವೆ.
ದೇವಸ್ಥಾನಗಳನ್ನು ತೆರೆಯುವ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳು ನಿರ್ಧಾರ ಕೈಗೊಳ್ಳಬಹುದು. ಆದರೆ ಬೃಹತ್ ಧಾರ್ಮಿಕ ಕಾರ್ಯಕ್ರಮ ನಡೆಸುವಂತಿಲ್ಲ ಎಂದು ಹೊಸ ಮಾರ್ಗಸೂಚಿಯಲ್ಲಿ ತಿಳಿಸುವ ಸಾಧ್ಯತೆ ಇದೆ. ಅದೇ ರೀತಿ ಜಿಮ್ ಮತ್ತು ಉದ್ಯಾನವನಗಳನ್ನು, ತೆರೆಯುವ ನಿರ್ಧಾರವನ್ನು ಕೂಡ ರಾಜ್ಯ ಸರ್ಕಾರಕ್ಕೆ ಬಿಡುವ ಸಾಧ್ಯತೆಗಳು ದಟ್ಟವಾಗಿವೆ.
ಜೂನ್ 1ಕ್ಕೆ ಶೈಕ್ಷಣಿಕ ವರ್ಷ ಆರಂಭ ಆಗಬೇಕಿತ್ತು. ಈ ಹಿನ್ನೆಲೆಯಲ್ಲಿ ಕೆಲ ರಾಜ್ಯಗಳು ತಯಾರಿ ನಡೆಸಿದ್ದವು. ಆದರೆ ಲಾಕ್ಡೌನ್ ಜಾರಿಯಲ್ಲಿರುವಾಗ ಶಾಲಾ-ಕಾಲೇಜುಗಳು, ಟುಟೋರಿಯಲ್ ಗಳನ್ನು ಸದ್ಯಕ್ಕೆ ತೆರೆಯುವಂತಿಲ್ಲ ಎಂದು ಆದೇಶಿಸುವ ಸಾಧ್ಯತೆ ಇದೆ. ಅದೇ ರೀತಿ ಜನಸಂದಣಿಗೆ ಅವಕಾಶ ನೀಡುವ ಶಾಪಿಂಗ್ ಮಾಲ್ ಮತ್ತು ಚಿತ್ರಮಂದಿರಗಳನ್ನು ತೆರೆಯುವುದಕ್ಕೂ ನಿಷೇಧ ಹೇರುವ
ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.