ಸುಳ್ಯದ ಎಲ್ಲಾ ವರ್ತಕರು ಕಳೆದ ಎರಡು ತಿಂಗಳಿಂದ ವ್ಯವಹಾರ ಸ್ಥಗಿತ ಗೊಳಿಸಿ ಸಂಕಷ್ಟದಲ್ಲಿರುವಾಗ ಸರಕಾರದ ಆದೇಶದ ಹೆಸರಿನಲ್ಲಿ ವಿಪರೀತ ತ್ಯಾಜ್ಯ ಸಂಗ್ರಹಣಾ ಶುಲ್ಕವನ್ನು ಲೈಸೆನ್ಸ್ ನವೀಕರಣ ಸಂದರ್ಭದಲ್ಲಿ ವಸೂಲು ಮಾಡುತ್ತಿರುವುದು ನ್ಯಾಯಯುತವಲ್ಲ ಎಂದು ನಗರ ಬಿಜೆಪಿ ಅಭಿಪ್ರಾಯ ಪಟ್ಟಿದೆ.
ಈ ಬಾರಿಯ ಅಂಗಡಿ ಲೈಸೆನ್ಸ್ ನವೀಕರಣಕ್ಕೆ ವರ್ತಕರು ನೀಡಿದ ಸಂದರ್ಭದಲ್ಲಿ ವಿವಿಧ ರೀತಿಯ ವ್ಯವಹಾರಗಳಿಗೆ 600ರೂ ನಿಂದ 12000ರೂ ಗಳ ತನಕ ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ವಿಧಿಸುತ್ತಿರುವುದು ಗಮನಕ್ಕೆ ಬಂದಿದೆ. ಈಗಾಗಲೇ ಆಸ್ತಿ ತೆರಿಗೆಯ ಜೊತೆಗೆ ಶೇಕಡಾವಾರು ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ಸಂಗ್ರಹಿಸಲಾಗುತ್ತಿದೆ. ಇದೀಗ ಸರಕಾರದ ಅಧಿಸೂಚನೆಯು ಕಳೆದ ಅಕ್ಟೊಬರ್ ನಲ್ಲಿಯೇ ಬಂದಿದ್ದರೂ ಯಾರ ಗಮನಕ್ಕೂ ತಾರದೆ ಈಗ ಏಕಾಏಕಿ ಸರಕಾರದ ಆದೇಶವೆಂದು ಜನಗಳ ಮೇಲೆ ಹೇರಿಕೆ ಮಾಡುವುದು ಸರಿಯಲ್ಲ. ಈಗಾಗಲೇ ಲಾಕ್ ಡೌನ್ ನಿಂದ ಕಂಗಾಲಾಗಿರುವ ವರ್ತಕರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸುಳ್ಯ ನಗರದ ತ್ಯಾಜ್ಯ ನಿರ್ವಹಣೆಯು ತೀರಾ ಅಸಂಬದ್ಧ ವಾಗಿದ್ದು ನ. ಪಂ. ಆವರಣದಲ್ಲಿಯೇ ಕಸದ ರಾಶಿ ಇರುವುದು ಎಲ್ಲರಿಗೂ ತಿಳಿದ ಸಂಗತಿಯಾಗಿದೆ. ತ್ಯಾಜ್ಯ ವಿಲೇವಾರಿಗೆ ಯಾವುದೇ ಇಚ್ಚಾ ಶಕ್ತಿ ಪ್ರದರ್ಶಿಸದೆ ಕೇವಲ ಶುಲ್ಕವನ್ನು ಹೆಚ್ಚಿಸುವುದು ಅಧಿಕಾರಿಶಾಹಿ ಧೋರಣೆ ಯಾಗಿದೆ. ನಗರದಲ್ಲಿ ಪಂಚಾಯತ್ ಸದಸ್ಯರಿಗೆ ಆಡಳಿತ ಅವಕಾಶ ಇಲ್ಲದಿದ್ದರೂ, ಚುನಾಯಿತ ಪ್ರತಿನಿಧಿಗಳಿದ್ದರು, ಅವರೊಂದಿಗೆ ಸೌಜನ್ಯಕ್ಕೂ ಸಮಾಲೋಚಿಸದೇ ಅಧಿಕಾರ ಚಲಾಯಿಸುತ್ತಿರುವುದರಿಂದ ವರ್ತಕರಿಗೆ ತೊಂದರೆಯಾಗಿರುವುದಲ್ಲದೆ, ಜನರಲ್ಲಿ ತಪ್ಪು ಅಭಿಪ್ರಾಯ ಮೂಡುವಂತಾಗಿದೆ.
ಆದುದರಿಂದ ಈ ತ್ಯಾಜ್ಯ ನಿರ್ವಹಣಾ ಶುಲ್ಕವನ್ನು ಪುನರ್ ವಿಮರ್ಶಿಸಬೇಕಾಗಿ ಈ ಮೂಲಕ ಆಗ್ರಹಿಸುತ್ತೇವೆ.
ಅಲ್ಲದೆ ಈ ಹಿಂದೆ ಸಂಭವಿಸಿದಂತೆ ಯಾವುದೇ ಅವಘಡಗಳು ಸಂಭವಿಸುವ ಮೊದಲು ತ್ಯಾಜ್ಯ ವಿಲೇವಾರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕೆಂದು
ನ ಪಂ ಸದಸ್ಯ ಹಾಗೂ ನಗರ ಬಿಜೆಪಿ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ಒತ್ತಾಯಿಸಿದ್ದಾರೆ.
- Saturday
- November 23rd, 2024