ಸುಳ್ಯ ತಾಲೂಕಿನ ಹಲವು ವರ್ಷಗಳ ಕನಸಾಗಿರುವ 110 ಕೆವಿ ವಿದ್ಯುತ್ ವಿತರಣಾ ಸಬ್ ಸ್ಟೆಷನ್ ಕಾಮಗಾರಿಯ ಬಗ್ಗೆ ಕೊರೋನ ವೈರಸ್ ಸಮಸ್ಯೆ ಮುಗಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವುದಾಗಿ ಶಾಸಕ ಅಂಗಾರ ಹೇಳಿದರು.
ಮೇ 17ರಂದು ಸುಳ್ಯ ಐ ಬಿ ಬಂಗಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಈ ಕಾಮಗಾರಿಗೆ ಅರಣ್ಯ ಭೂಮಿ ಮಂಜೂರಾತಿ ವಿಚಾರದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ ತಾತ್ಕಾಲಿಕವಾಗಿ ಬಾಕಿಯಾಗಿದ್ದು ಲಾಕ್ ಡೌನ್ ಮುಗಿದ ಕೂಡಲೇ ಅವರ ಗಮನಕ್ಕೆ ಮತ್ತೊಮ್ಮೆ ವಿಷಯವನ್ನು ತಂದು ಅರಣ್ಯ ಭೂಮಿ ಮಂಜೂರು ಆಗುವಂತೆ ಮಾಡುತ್ತೇವೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಈ ಬಾರಿಯ ವಿದ್ಯುತ್ ಬಿಲ್ಲಿನಲ್ಲಿ ಉಂಟಾದ ಗೊಂದಲದ ಬಗ್ಗೆ ಮಾತನಾಡಿದ ಶಾಸಕರು ಇದರ ಬಗ್ಗೆ ಮಾಹಿತಿ ಸಂಗ್ರಹಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ದೇಶವು ಲಾಕ್ ಡೌನ್ ಗೊಂಡ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿದ ಹತ್ತು ಹಲವಾರು ಯೋಜನೆಗಳ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಯವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಕೇಂದ್ರ ಸರ್ಕಾರ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿಗಳ ಅನುದಾನ ಮುಂದಿನ ದಿನಗಳಲ್ಲಿ ವಿತ್ತ ಸಚಿವರ ವಿವರಣೆ ಹಾಗೂ ಮಾಹಿತಿ ಪೂರ್ಣಗೊಂಡ ಕೂಡಲೇ ಕಾರ್ಯಗತವಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದ ವತಿಯಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮಾಜದಲ್ಲಿ ಇರುವ ವಿವಿಧ ಕಸುಬುದಾರರಾದ ಕ್ಷೌರಿಕರಿಗೆ, ಅಗಸರಿಗೆ ,ಕಮ್ಮಾರರಿಗೆ, ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ, ತಲಾ 5 ಸಾವಿರ ರೂಪಾಯಿ ನೀಡುವುದಾಗಿ ಈಗಾಗಲೇ ಘೋಷಿಸಿದ್ದು ,ಅದರೊಂದಿಗೆ ಆಶಾ ಕಾರ್ಯಕರ್ತರಿಗೆ ರೂಪಾಯಿ 3000 ದೊರಕಲಿದೆ ಎಂದು ತಿಳಿಸಿದರು.
ಸುಳ್ಯ ಆಟೋರಿಕ್ಷಾ ಚಾಲಕ ಸಂಘದವರು ತಮ್ಮ ಬೇಡಿಕೆಗಳನ್ನು ಮನವಿ ಮೂಲಕ ನನಗೆ ನೀಡಿದ್ದು ಅದನ್ನು ಈಗಾಗಲೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ ಮಾತನಾಡಿ ಶಾಸಕರ ನೇತೃತ್ವದಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಸುಮಾರು 34 ಸಾವಿರ ಅಗತ್ಯ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆಯನ್ನು ಸೇವಾಭಾರತಿ ಮೂಲಕ ವಿತರಿಸಲಾಗಿದೆ. ಈ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವೆಂಕಟ್ ವಳಲಂಬೆ, ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬಿಜೆಪಿ ಪಕ್ಷದ ಮುಖಂಡರಾದ ವೆಂಕಟ್ ದಂಬೆಕೋಡಿ , ಶುಭೋದ್ ಶೆಟ್ಟಿ ಮೇನಾಲ , ರಾಕೇಶ್ ರೈ ಕೆಡಂಜಿ,ನ.ಪಂ ಸದಸ್ಯ ವಿನಯ ಕುಮಾರ್ ಕಂದಡ್ಕ ಉಪಸ್ಥಿತರಿದ್ದರು.
- Tuesday
- December 3rd, 2024