ಮಂಗಳೂರು ಮಿತ್ರ ಮಂಡಳಿ ಪುನರಾರಂಭ – ಜುಲೈ 18 ರಂದು ಉದ್ಘಾಟನೆ

1920 ರ ಕಾಲಘಟ್ಟದಲ್ಲಿ ಕರಾವಳಿ ಕರ್ನಾಟಕವೂ ಸೇರಿದಂತೆ ಇಡೀ ರಾಷ್ಟ್ರವು ಸ್ವಾತಂತ್ರ್ಯ ಹೋರಾಟದಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದ್ದ ಸಮಯದಲ್ಲಿ ರಾಷ್ಟ್ರೀಯತೆ ಎನ್ನುವುದು ಸಾಹಿತ್ಯದ ಮುಖ್ಯ ತಿರುಳಾಗಿ ಸಾಹಿತಿಗಳ ಲೇಖನದಿಂದ ಹೊರಹೊಮ್ಮುತ್ತಿದ್ದ ಕಾಲ. ಈ ಹಂತದಲ್ಲಿ ಕನ್ನಡ ಭಾಷೆಯ ಮೂಲಕ ರಾಷ್ಟ್ರೀಯತೆಯ ಭಾವವನ್ನು ಹರಡಿಸಲು ಕರಾವಳಿಯ ಕನ್ನಡ ಪಂಡಿತರು ದೃಢವಾದ ಹೆಜ್ಜೆಯನ್ನು ಇಟ್ಟಿದ್ದರು. ಮಂಗಳೂರಿನ ಕೆನರಾ ಹೈಸ್ಕೂಲಿನ ಮರದಡಿಯಲ್ಲಿ ಸಮಾನ ಮನಸ್ಕ ಸಾಹಿತಿಗಳು ಸೇರಿ ಚಿಂತನೆ ನಡೆಸಿ, ಕನ್ನಡ ಸಾಹಿತ್ಯ ಲೋಕದಲ್ಲಿಯೂ ಅನೇಕ ಪ್ರಯೋಗಗಳನ್ನು ಮಾಡಲು ತಮ್ಮನ್ನು ಸಮರ್ಪಿಸಿಕೊಂಡಿದ್ದರು.. ಅವರಿಗೆಲ್ಲಾ ವೇದಿಕೆಯಾಗಿ 1928 ರಲ್ಲಿ ಜನ್ಮ ತಾಳಿದ್ದೇ ಮಂಗಳೂರು ಮಿತ್ರ ಮಂಡಳಿ.‌ ಪಂಜೆ ಮಂಗೇಶ್ ರಾವ್, ಎಂ.ಎನ್. ಕಾಮತ್, ಮಂಜೇಶ್ವರ ಗೋವಿಂದ ಪೈ, ಜೋಡುಮಠ ವಾಮನ ಭಟ್, ಪೇಜಾವರ ಸದಾಶಿವ ರಾವ್, ಸೇಡಿಯಾಪು ಕೃಷ್ಣ ಭಟ್, ಕಡೆಂಗೋಡ್ಲು ಶಂಕರ್ ಭಟ್, ಮುಳಿಯ ತಿಮ್ಮಪ್ಪಯ್ಯ, ಕಯ್ಯಾರ ಕಿಞ್ಞಣ್ಣ ರೈ, ಕೆ. ಸೂರ್ಯನಾರಾಯಣ ಅಡಿಗ, ಕಣಂದೂರು ರಾಘವಾಚಾರ್, ಕಣಂದೂರು ತಿಮ್ಮಯಾಚಾರ್, ಅಮ್ಮೆಂಬಳ ನಾರಾಯಣ ಪೈ, ಕೆ.ಕೆ.ರೈ, ಬಾಬುರಾಯ್ ಪ್ರಭು, ಎಸ್.ಪಿ.ಭಟ್, ಎ ನಾರಾಯಣ ಪೈ ಹಾಗೂ ಅನೇಕ ಧೀಮಂತ ಸಾಹಿತಿಗಳು ಕ್ರಿಯಾಶೀಲವಾಗಿ ರೂಪುಗೊಳಿಸಿದ, ಸಾಹಿತ್ಯ ಸೃಷ್ಟಿಯ – ಸಾಹಿತ್ಯ ಪ್ರಸಾರದ ವೇದಿಕೆಯಾಗಿ ” ಮಂಗಳೂರು ಮಿತ್ರ ಮಂಡಳಿ” ಕರಾವಳಿಯ ಸಾಹಿತ್ಯ ಲೋಕದಲ್ಲಿ ಇತಿಹಾಸ ಸೃಷ್ಟಿಸಿತ್ತು. ಮಂಗಳೂರು ಮಿತ್ರ ಮಂಡಳಿಯನ್ನು ಪುನರುಜ್ಜೀವನಗೊಳಿಸಿ, ಮತ್ತೇ ಮುನ್ನಲೆಗೆ ತರಲು ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಇದರ ಕಲ್ಚರಲ್ ಅಕಾಡೆಮಿಯ ವತಿಯಿಂದ ನಿರ್ಧರಿಸಲಾಗಿದೆ. ಮಂಗಳೂರು ಮಿತ್ರ ಮಂಡಳಿಯ ಮೂಲಕ ನವಚಿಂತನೆಯ ಸಾಹಿತಿಗಳಿಗೆ ವೇದಿಕೆ ಕಲ್ಪಿಸುವ, ವಿವಿಧ ಸಾಹಿತ್ಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಹಕರಿಸುವ, ಸಾಹಿತ್ಯಾಸಕ್ತರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಲಿದೆ. ಮಂಗಳೂರು ಮಿತ್ರ ಮಂಡಳಿ 2.0 ಇದರ ಉದ್ಘಾಟನಾ ಕಾರ್ಯಕ್ರಮ ಜುಲೈ 18 ರಂದು ಸಂಜೆ 5 ಗಂಟೆಗೆ ಡೊಂಗರಕೇರಿಯಲ್ಲಿರುವ ಭುವನೇಂದ್ರ ಸಭಾಂಗಣದಲ್ಲಿ ಜರುಗಲಿದೆ. ಸಾಹಿತಿ ಶ್ರೀಮತಿ ಚಂದ್ರಕಲಾ ನಂದಾವರ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಪ್ರಧಾನ ಭಾಷಣ ಮಾಡಲಿದ್ದಾರೆ ಎಂದು ಕೆನರಾ ಕಲ್ಚರಲ್ ಅಕಾಡೆಮಿಯ ಸಂಚಾಲಕ ಮಂಗಲ್ಪಾಡಿ ನರೇಶ್ ಶೆಣೈ ತಿಳಿಸಿದ್ದಾರೆ.

. . . . . . . . .

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading