ಸುಬ್ರಹ್ಮಣ್ಯ : ಕಡಬ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ – ಹಿರಿಯ ಪತ್ರಕರ್ತ ಪಿ.ಬಿ ಹರೀಶ್ ರೈ ರವರಿಗೆ “ಮಾಧ್ಯಮ ಸಾಧಕ” ಹಾಗೂ ಪತ್ರಿಕಾ ವಿತರಕ ಬಸವರಾಜ್ ರಿಗೆ “ಶ್ರೇಷ್ಠ ಪತ್ರಿಕಾ ವಿತರಕ” ಪ್ರಶಸ್ತಿ ಪ್ರಧಾನ – “ಸಮಾಜವನ್ನು ಒಗ್ಗೂಡಿಸಿ ದೇಶ ಕಟ್ಟುವ ಕಾಯಕದಲ್ಲಿ ಪತ್ರಿಕೋದ್ಯಮದ ಪಾತ್ರ ಅನನ್ಯ” : ಅರವಿಂದ ಅಯ್ಯಪ್ಪ ಸುತಗುಂಡಿ

ಸುಬ್ರಹ್ಮಣ್ಯ : “ಪತ್ರಿಕೆಯು ಸಮಾಜವನ್ನು ತಿದ್ದುವ ಅಧಮ್ಯ ಕಾರ್ಯವನ್ನು ಮಾಡುತ್ತಿದೆ. ಹರಿತವಾದ ಆಯುಧವಾದ ಪೆನ್ನಿನ ಮೂಲಕ ಜನತೆಯ ಆಶೋತ್ತರಕ್ಕೆ ತಕ್ಕುದಾಗಿ ಕಾರ್ಯನಿರ್ವಹಿಸುವ ಅಂಗ ಇದಾಗಿದೆ. ಪತ್ರಕರ್ತರು ಪತ್ರಿಕೆಯಲ್ಲಿನ ತಮ್ಮ ಬರಹಗಳ ಮೂಲಕ ಸಮಾಜದಲ್ಲಿ ಜಾಗೃತಿಯ ಬೀಜವನ್ನು ಬಿತ್ತುತ್ತಾರೆ. ಸಮಾಜವನ್ನು ಒಗ್ಗೂಡಿಸಿ ದೇಶವನ್ನು ಕಟ್ಟುವ ಕಾಯಕವನ್ನು ಪತ್ರಿಕೋದ್ಯಮ ಮಾಡುತ್ತಿದೆ. ಆಧುನಿಕ ಯುಗದಲ್ಲಿ ಮೊಬೈಲ್ ವ್ಯಾಮೋಹವನ್ನು ತ್ಯಜಿಸಿ ಪತ್ರಿಕೆ ಓದುವ ಹವ್ಯಾಸವನ್ನು ಬೆಳೆಸಿಕೊಂಡರೆ ಜ್ಞಾನವೃದ್ಧಿಗೆ ಪೂರಕವಾಗುತ್ತದೆ. ಯುವ ವಿದ್ಯಾರ್ಥಿಗಳು ಪತ್ರಿಕೆಯಲ್ಲಿ ಬರುವ ಅಂಕಣಗಳನ್ನು ಓದಿದರೆ ನಿಮ್ಮ ಬದುಕು ಉಜ್ವಲವಾಗುತ್ತದೆ” ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಹೇಳಿದರು. 

. . . . . . . . .

ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕು ಮತ್ತು ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಆಶ್ರಯದಲ್ಲಿ ಸುಬ್ರಹ್ಮಣ್ಯದ ಎಸ್‌.ಎಸ್‌.ಪಿ.ಯು ಕಾಲೇಜಿನ ಬೆಳ್ಳಿಹಬ್ಬ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

. . . . . . .

“ಪತ್ರಿಕೆಯು ಜ್ಞಾನ ಸಂಪತ್ತು” – ಅಶೋಕ್ ನೆಕ್ರಾಜೆ : “ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸಿ ಅವನನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕಾರ್ಯವನ್ನು ಪತ್ರಿಕೆ ಮಾಡುತ್ತಿದೆ. ಸಮಾಜದಲ್ಲಿ ಪತ್ರಿಕೆಯು ಜ್ಞಾನ ಸಂಪತ್ತಿನ ಆಗರವಾಗಿದೆ. ಆದುದರಿಂದ ಪತ್ರಿಕೆಯನ್ನು ಓದುವುದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಲಿ. ಓದುವಿಕೆ ನಮಗೆ ಅಧಮ್ಯ ವಿಚಾರಗಳತ್ತ ಕೊಂಡೊಯ್ಯುವುದರಿಂದ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಮುಂಜಾನೆ ಎದ್ದು ಪತ್ರಿಕೆಯನ್ನು ಓದುವ ಹವ್ಯಾಸ ಅನಾಧಿ ಕಾಲದಿಂದ ಬಂದಿದ್ದು ಅದನ್ನು ಯುವ ಜನಾಂಗ ರೂಢಿಸಿಕೊಳ್ಳಬೇಕು. ಇದು ಭವಿಷ್ಯದ ಔನತ್ಯಕ್ಕೆ ಕನ್ನಡಿಯಾಗುತ್ತದೆ. ಪತ್ರಿಕಾ ಧರ್ಮ ಬೆಳೆದು ಚಿರಕಾಲ ಬಾಳಲಿ” ಎಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ ನುಡಿದರು.

“ವಿತರಕರು ಪತ್ರಿಕೆಯ ಬೆನ್ನೆಲುಬು” – ವಾಲ್ಟರ್ ನಂದಳಿಕೆ : “ಶಿಸ್ತು ಮತ್ತು ಸಮಯಪಾಲನೆ ಬದುಕಿಗೆ ಅತ್ಯವಶ್ಯಕ. ಕಷ್ಟ ಪರಿಶ್ರಮದಿಂದ ಮಾದ್ಯಮ ಕ್ಷೇತ್ರದಲ್ಲಿ ಸೇವೆ ಮಾಡಿದರೆ ಶ್ರೇಷ್ಠ ಗೌರವ ಪ್ರಾಪ್ತವಾಗುತ್ತದೆ. ಪ್ರಾಮಾಣಿಕತೆ ಪತ್ರಕರ್ತರ ಜೀವಾಳವಾಗಿದೆ. ಪತ್ರಿಕಾ ವಿತರಕರು ಪತ್ರಿಕೆಯ ಬೆನ್ನೆಲುಬಾಗಿದೆ. ಅಂತರ್‌ಜಾಲ ವ್ಯವಸ್ಥೆಗಳು ಎಷ್ಟೆ ಮುಂದುವರೆದರೂ ಪತ್ರಿಕೆಗಳು ತಮ್ಮದೇ ಆದ ಶ್ರೇಷ್ಠ ಸಾಧನೆಯನ್ನು ಮುಂದುವರೆಸುತ್ತಿದೆ. ದಿನಪತ್ರಿಕೆಗಳನ್ನು ಓದುವ ಮಂದಿ ಆಧುನಿಕ ಯುಗದಲ್ಲಿ ಅಧಿಕವಿದ್ದಾರೆ. ಇಂದಿಗೂ ಬೆಳಗ್ಗೆ ಪತ್ರಿಕೆಯನ್ನು ಕಾಯುವ ಅಸಂಖ್ಯಾತ ಮಂದಿ ಇದ್ದಾರೆ ಅನ್ನುವುದು ಸತ್ಯ” ಎಂದು ಹಿರಿಯ ಪತ್ರಕರ್ತ ವಾಲ್ಟರ್ ನಂದಳಿಕೆ ನುಡಿದರು.

ಪುರಸ್ಕಾರ ಪ್ರಧಾನ : ಸಮಾರಂಭದಲ್ಲಿ ಹಿರಿಯ ಪತ್ರಕರ್ತರು ಮತ್ತು ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷರಾದ ಸುಬ್ರಹ್ಮಣ್ಯದ ಪಿ.ಬಿ.ಹರೀಶ್ ರೈ ಅವರಿಗೆ “ಮಾಧ್ಯಮ ಸಾಧಕ ಪುರಸ್ಕಾರ” ಮತ್ತು ಹಿರಿಯ ಪತ್ರಿಕಾ ವಿತರಕರಾದ ಬಸವರಾಜ್.ಎಸ್.ಟೋಂಗಳೆ ಅವರಿಗೆ “ಶ್ರೇಷ್ಠ ಪತ್ರಿಕಾ ವಿತರಕ” ಪುರಸ್ಕಾರ ಪ್ರಧಾನ ಮಾಡಲಾಯಿತು. ಪತ್ರಿಕಾ ದಿನಾಚರಣೆ ಪ್ರಯುಕ್ತ ನಡೆದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಿಸಲಾಯಿತು. ಅಲ್ಲದೆ ಪತ್ರಕರ್ತರಿಗೆ ಗುರುತಿನ ಚೀಟಿಯನ್ನು ವಿತರಿಸಲಾಯಿತು.

ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಬಾಲಕೃಷ್ಣ ಕೊಯಿಲ ಅಧ್ಯಕ್ಷತೆ ವಹಿಸಿದ್ದರು. ಎಸ್‌.ಎಸ್‌.ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ ನಾಯಕ್ ಬಹುಮಾನ ವಿತರಿಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಹಿರಿಯ ಪತ್ರಕರ್ತರಾದ ವಾಲ್ಟರ್ ನಂದಳಿಕೆ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಶ್ರೀನಿವಾಸ ನಾಯಕ್ ಇಂದಾಜೆ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಪುಷ್ಪರಾಜ್ ಬಿ.ಎನ್, ಎಸ್.ಎಸ್.ಪಿ.ಯು ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಎನ್.ಎಸ್, ಎಸ್.ಎಸ್.ಪಿ.ಯು ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಗುಣವರ್ಧನ ಕೆದಿಲ ಮುಖ್ಯ ಅತಿಥಿಗಳಾಗಿದ್ದರು. ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ರತ್ನಾಕರ ಸುಬ್ರಹ್ಮಣ್ಯ, ಕಾರ್ಯದರ್ಶಿ ಶಿವರಾಮ ಕಜೆಮೂಲೆ, ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್ ಚೆನ್ನಾವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಕಾರ್ಯದರ್ಶಿ ಶಿವರಾಮ ಕಜೆಮೂಲೆ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಚೆನ್ನಾವರ ಸ್ವಾಗತಿಸಿ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷರಾದ ರತ್ನಾಕರ ಸುಬ್ರಹ್ಮಣ್ಯ ವಂದಿಸಿದರು. ಪತ್ರಕರ್ತ ನಾಗರಾಜ್ ಎನ್.ಕೆ ಕಾರ್ಯಕ್ರಮ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading