ಮಳೆಮಾಪಕಗಳ ದುರಸ್ತಿಗೆ ಬಿಜೆಪಿ ಆಗ್ರಹ : ಸರಕಾರ ತುರ್ತು ಕ್ರಮ ಕೈಗೊಳ್ಳದಿದ್ದರೇ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ

ಸುಳ್ಯ, ಜು. 3: ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಳೆಮಾಪಕಗಳು ಸರಿಯಾಗಿ ಕಾರ್ಯನಿರ್ವಹಿಸದಿರುವುದರಿಂದ ಬೆಳೆವಿಮೆ ಯೋಜನೆಯಡಿ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಮುಖಂಡರು, ಕೂಡಲೇ ಎಲ್ಲಾ ಮಳೆಮಾಪಕಗಳನ್ನು ದುರಸ್ತಿಗೊಳಿಸಿ ಅಥವಾ ಹೊಸದಾಗಿ ಅಳವಡಿಸಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

. . . . . . . . .

ಸುಳ್ಯದ ಪತ್ರಿಕಾಭವನದಲ್ಲಿ ಜು. 3ರಂದು ಬಿಜೆಪಿ ಮಂಡಲ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಟಿಯಲ್ಲಿ ತಾಲೂಕು ಹಾಗೂ ಜಿಲ್ಲೆಯಾದ್ಯಂತ ಮಳೆಮಾಪಕಗಳು ಸರಿಯಾಗಿ ಕಾರ್ಯನಿರ್ವಹಿಸದಿರುವ ಕುರಿತು ಮುಖಂಡರು ಮಾಹಿತಿ ನೀಡಿದರು.

. . . . . . .

2024-25ನೇ ಸಾಲಿನ ಬೆಳೆವಿಮೆ ಪರಿಹಾರ ವಿತರಣೆಯಲ್ಲಿ ಮಳೆಮಾಪಕಗಳು ಕೆಟ್ಟುಹೋಗಿರುವುದು ಹಾಗೂ ವಿಮಾ ಕಂಪನಿಗಳೊಂದಿಗೆ ಸಮರ್ಪಕ ಸಂವಹನದ ಕೊರತೆಯಿಂದ ಅನೇಕ ರೈತರಿಗೆ ಪರಿಹಾರ ದೊರೆಯದೇ ಅನ್ಯಾಯವಾಗಿದೆ ಎಂದು ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ್ ಕಂದಡ್ಕ ಆರೋಪಿಸಿದರು.

2025-26ನೇ ಸಾಲಿನ ಬೆಳೆವಿಮೆ ಕಂತನ್ನೂ ರೈತರು ಈಗಾಗಲೇ ಪಾವತಿಸುತ್ತಿದ್ದು, ಮಳೆಮಾಪಕಗಳು ಇನ್ನೂ ದುರಸ್ತಿಯಾಗದಿರುವುದರಿಂದ ಈ ವರ್ಷವೂ ರೈತರಿಗೆ ವಿಮೆ ಪರಿಹಾರ ಸಿಗದೇ ಅನ್ಯಾಯವಾಗುವ ಆತಂಕ ಎದುರಾಗಿದೆ ಎಂದು ತಿಳಿಸಿದರು.

ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ, ಕಳೆದ ವರ್ಷವೇ ಸಮಸ್ಯೆ ಬೆಳಕಿಗೆ ಬಂದಿದ್ದರೂ ಈವರೆಗೆ ಮಳೆಮಾಪಕಗಳ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳದಿರುವುದು ಖಂಡನೀಯ. ಸುಳ್ಯ ತಾಲೂಕಿನ 24 ಮಳೆಮಾಪಕಗಳ ಪೈಕಿ 16 ಕಾರ್ಯನಿರ್ವಹಿಸುತ್ತಿಲ್ಲ. ಒಂದು ಗ್ರಾ.ಪಂ. ವ್ಯಾಪ್ತಿಯಲ್ಲಿ ಇನ್ನೂ ಮಳೆಮಾಪಕ ಅಳವಡಿಕೆಯಾಗಿಲ್ಲ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 274 ಮಳೆಮಾಪಕಗಳಿರಬೇಕಾಗಿದ್ದು, ಕೇವಲ 108 ಮಾತ್ರ ಸುಸ್ಥಿತಿಯಲ್ಲಿವೆ. 72 ಮಳೆಮಾಪಕಗಳು ಕಾರ್ಯನಿರ್ವಹಿಸುತ್ತಿಲ್ಲ. 94 ಮಳೆಮಾಪಕಗಳು ಹಾಳಾಗಿರುವುದು, ಕಳ್ಳತನವಾಗಿರುವುದು ಅಥವಾ ಸ್ಥಳಾಂತರ ಬಾಕಿ ಇರುವ ಕಾರಣದಿಂದ ಬಳಕೆಗೆ ಲಭ್ಯವಿಲ್ಲ ಎಂದು ಮಾಹಿತಿ ನೀಡಿದರು.

ಮಳೆಮಾಪಕಗಳ ನಿರ್ವಹಣೆಯನ್ನು ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದರೂ ಅದರ ಮೇಲ್ವಿಚಾರಣೆಯ ಹೊಣೆ ರಾಜ್ಯ ಸರ್ಕಾರದ್ದಾಗಿದೆ. ರೈತರ ಹಿತಾಸಕ್ತಿಯ ಬಗ್ಗೆ ಸರ್ಕಾರದ ನಿರ್ಲಕ್ಷ್ಯಕ್ಕೆ ಇದುವೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ರೈತರಿಗೆ ವರದಾನವಾಗಿದ್ದ ಬೆಳೆವಿಮೆ ಯೋಜನೆಯ ಪರಿಣಾಮಕಾರಿತ್ವವನ್ನು ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ಮೂಡಿದೆ. ಈ ವರ್ಷದ ಬೆಳೆವಿಮಾ ಕಂತು ಪಾವತಿಸಲು ಈಗಾಗಲೇ ಸುತ್ತೋಲೆ ಹೊರಡಿಸಲಾಗಿದ್ದು, ಸಾಲಗಾರ ರೈತರಿಗೆ ಕಡ್ಡಾಯಗೊಳಿಸಲಾಗಿದೆ. ಕಳೆದ ವರ್ಷ ಕಂತು ಪಾವತಿಸಿದರೂ ಪರಿಹಾರ ಸಿಗದ ಸ್ಥಿತಿ ಉಂಟಾಗಿದ್ದರೆ, ಈ ವರ್ಷವೂ ಅದೇ ಪರಿಸ್ಥಿತಿ ಮರುಕಳಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

ಜು. 30 ವಿಮೆ ಪಾವತಿಗೆ ಕೊನೆ ದಿನಾಂಕವಾಗಿದೆ. ಆದ್ದರಿಂದ ಜಿಲ್ಲೆಯ ಎಲ್ಲಾ ಮಳೆಮಾಪಕಗಳನ್ನು ತಕ್ಷಣ ದುರಸ್ತಿಗೊಳಿಸಿ ಅಥವಾ ಹೊಸದಾಗಿ ಅಳವಡಿಸಿ ಸುಸ್ಥಿತಿಯಲ್ಲಿಡಬೇಕು. ಇಲ್ಲವಾದಲ್ಲಿ ಬಿಜೆಪಿ ನೇತೃತ್ವದಲ್ಲಿ ರೈತರು ಗ್ರಾ. ಪಂ. ಎದುರು ಪ್ರತಿಭಟನೆ ನಡೆಸುವುದಾಗಿ ಎಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಬಿಜೆಪಿ ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ. ಕುಸುಮಾಧರ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಬೆಳ್ಳಾರೆ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಭಟ್ ಕುರುಂಬುಡೇಲು, ಸುಳ್ಯ ಸಿಎ ಬ್ಯಾಂಕ್‌ ಅಧ್ಯಕ್ಷ ವಿಕ್ರಮ್ ಅಡ್ಪಂಗಾಯ, ಮಡಪ್ಪಾಡಿ ಸಹಕಾರಿ ಸಂಘದ ಅಧ್ಯಕ್ಷ ವಿನಯಕುಮಾ‌ರ್ ಮುಳುಗಾಡು ಉಪಸ್ಥಿತರಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading