“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ(ಜೂ.22)ದಿಂದ ಶನಿವಾರ(ಜೂ.27)ದವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಸಮಗ್ರ ನೋಟ – ಸ್ಥಿರತೆಯ ಹಾದಿಯಲ್ಲಿ ಅಡಿಕೆ ; ಕೊಬ್ಬರಿ, ಕಾಳುಮೆಣಸು ಭರ್ಜರಿ ಜಿಗಿತ ; ರಬ್ಬರ್‌ಗೆ ತೀವ್ರ ಪೆಟ್ಟು..!

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ದಿನನಿತ್ಯವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ಪ್ರತಿದಿನದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜೂನ್ 22 ಸೋಮವಾರದಿಂದ ಜೂನ್ 27 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದಿರುವ ಏರಿಳಿತಗಳೇನು..!? ಎನ್ನುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿಸ್ತೃತವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 22 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 335 ರಿಂದ ಗರಿಷ್ಠ 382 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 265 ರಿಂದ ಗರಿಷ್ಠ 285 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 245 ರಿಂದ ಗರಿಷ್ಠ 270 ರೂಪಾಯಿ ಇತ್ತು. ಜೂನ್ 23 ಮಂಗಳವಾರದಂದು ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೊಸ ಅಡಿಕೆ, ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳು ಯಾವುದೇ ಬದಲಾವಣೆ ಇಲ್ಲದೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಆದರೆ ಉಪ ಉತ್ಪನ್ನಗಳಾದ ಫಟೋರಾ, ಉಳ್ಳಿಗಡ್ಡೆ ಮತ್ತು ಕರಿಗೋಟು ದರಗಳಲ್ಲಿ ಗಮನಾರ್ಹ ಕುಸಿತ ದಾಖಲಾಗಿದ್ದು, ಫಟೋರಾ ಗರಿಷ್ಠ ಬೆಲೆಯಲ್ಲಿ 2 ರೂಪಾಯಿ ಇಳಿಕೆಯಾಗಿ 380 ರೂಪಾಯಿಗೆ ತಲುಪಿದರೆ ಉಳ್ಳಿಗಡ್ಡೆ ಧಾರಣೆಯು ಕನಿಷ್ಠ ಹಾಗೂ ಗರಿಷ್ಠ ಎರಡರಲ್ಲೂ 5 ರೂಪಾಯಿ ಕುಸಿದು ಕನಿಷ್ಠ 260 ರಿಂದ ಗರಿಷ್ಠ 280ರ ಮಟ್ಟಕ್ಕೆ ತಲುಪಿತ್ತು. ಕರಿಗೋಟು ಬೆಲೆಯಲ್ಲೂ ಕನಿಷ್ಠ ದರದಲ್ಲಿ 10 ರೂಪಾಯಿ ಹಾಗೂ ಕನಿಷ್ಠ ದರದಲ್ಲಿ 5 ರೂಪಾಯಿಗಳಷ್ಟು ಇಳಿಮುಖವಾಗಿ ಕನಿಷ್ಠ 235 ರಿಂದ ಗರಿಷ್ಠ 265ರ ಮಟ್ಟಕ್ಕೆ ತಲುಪಿತ್ತು. ಜೂನ್ 24 ಬುಧವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಶಾಂತ ವಾತಾವರಣ ಕಂಡುಬಂದಿದ್ದು, ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಸೇರಿದಂತೆ ಎಲ್ಲಾ ಪ್ರಮುಖ ಹಾಗೂ ಉಪ ಉತ್ಪನ್ನಗಳ ಬೆಲೆಗಳಲ್ಲಿ ಯಾವುದೇ ರೀತಿಯ ಏರಿಳಿತಗಳು ಸಂಭವಿಸದೇ ವಹಿವಾಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಜೂನ್ 25 ಗುರುವಾರದಂದು ಕೂಡ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆಯ ಟ್ರೆಂಡ್ ಮುಂದುವರಿದಿದ್ದು, ಜೂನ್ 26 ಶುಕ್ರವಾರದಂದು ಕೂಡ ಸ್ಥಿರತೆಯ ವಾತಾವರಣ ಕಂಡುಬಂದಿತ್ತು. ಇನ್ನು ಈ ವಾರದ ಕೊನೆಯ ದಿನವಾದ ಜೂನ್ 27 ಶನಿವಾರದಂದು ಕೂಡ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆಯ ವಾತಾವರಣ ಮುಂದುವರಿದಿದ್ದು, ವಾರಾಂತ್ಯದಲ್ಲಿ ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 335 ರಿಂದ ಗರಿಷ್ಠ 380 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 260 ರಿಂದ ಗರಿಷ್ಠ 280 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 235 ರಿಂದ ಗರಿಷ್ಠ 265 ರೂಪಾಯಿಗಳಿಗೆ ತಲುಪಿತ್ತು.

ಇನ್ನು ಇತರೆ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 22 ಸೋಮವಾರದಂದು ಕಾಳುಮೆಣಸು ಕನಿಷ್ಠ 575 ರಿಂದ ಗರಿಷ್ಠ 670 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 120 ರಿಂದ ಗರಿಷ್ಠ 140 ರೂಪಾಯಿ ಇತ್ತು. ಜೂನ್ 23 ಮಂಗಳವಾರದಂದು ಕ್ಯಾಂಪ್ಕೋ ಇತರೆ ಪ್ರಮುಖ ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ವಹಿವಾಟು ಸಂಪೂರ್ಣ ಶಾಂತವಾಗಿದ್ದು, ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಜೂನ್ 24 ಬುಧವಾರದಂದು ಕೂಡ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಯಾವುದೇ ಏರಿಳಿತಗಳು ಸಂಭವಿಸದೇ ಸಂಪೂರ್ಣ ಸ್ಥಿರವಾಗಿತ್ತು. ಜೂನ್ 25 ಗುರುವಾರದಂದು ಕಾಳುಮೆಣಸು ಮತ್ತು ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಭರ್ಜರಿ ಚೇತರಿಕೆ ಕಂಡುಬಂದಿದ್ದು, ಕಾಳುಮೆಣಸು ಪ್ರತೀ ಕೆಜಿಗೆ 5 ರೂಪಾಯಿಗಳಷ್ಟು ಏರಿಕೆ ಕಂಡು ಗರಿಷ್ಠ 675 ರೂಪಾಯಿಗೆ ತಲುಪಿ ಕನಿಷ್ಠ ದರ 575 ರೂಪಾಯಿಯಲ್ಲೇ ಮುಂದುವರೆದಿತ್ತು. ಕೊಬ್ಬರಿ ಧಾರಣೆಯೂ ಕೂಡ ಪ್ರತೀ ಕೆಜಿಗೆ 5 ರೂಪಾಯಿಗಳಷ್ಟು ಏರಿಕೆ ಕಂಡು 145 ರೂಪಾಯಿಗೆ ತಲುಪಿತ್ತು. ಆದರೆ ಕೊಕ್ಕೋ ಧಾರಣೆ ಮಾತ್ರ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಜೂನ್ 26 ಶುಕ್ರವಾರದಂದು ಕಾಳುಮೆಣಸು ಧಾರಣೆಯಲ್ಲಿ ಭರ್ಜರಿ ಜಿಗಿತ ಮುಂದುವರೆದಿದ್ದು, ಕಾಳುಮೆಣಸಿನ ಕನಿಷ್ಠ ದರದಲ್ಲಿ ಪ್ರತೀ ಕೆಜಿಗೆ 15 ರೂಪಾಯಿ ಹಾಗೂ ಗರಿಷ್ಠ ದರದಲ್ಲಿ 5 ರೂಪಾಯಿಗಳಷ್ಟು ಏರಿಕೆ ದಾಖಲಾಗಿ ಕನಿಷ್ಠ 590 ರಿಂದ ಗರಿಷ್ಠ 680 ರೂಪಾಯಿಗೆ ತಲುಪಿತ್ತು. ಉಳಿದಂತೆ ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಇನ್ನು ವಾರದ ಕೊನೆಯ ದಿನವಾದ ಜೂನ್ 27 ಶನಿವಾರದಂದು ಕೊಬ್ಬರಿ ಧಾರಣೆಯಲ್ಲಿ ಉತ್ತಮ ಚೇತರಿಕೆ ದಾಖಲಾಗಿದ್ದು, ಕೊಬ್ಬರಿಯ ಗರಿಷ್ಠ ದರವು 5 ರೂಪಾಯಿಗಳಷ್ಟು ಏರಿಕೆ ಕಂಡುಬಂದಿದ್ದು, ಉಳಿದಂತೆ ಕಾಳುಮೆಣಸು ಹಾಗೂ ಕೊಕ್ಕೋ ಧಾರಣೆಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ವಾರಾಂತ್ಯದಲ್ಲಿ ಕಾಳುಮೆಣಸು ಕನಿಷ್ಠ 590 ರಿಂದ ಗರಿಷ್ಠ 680 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 70 ರಿಂದ ಗರಿಷ್ಠ 100 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 120 ರಿಂದ ಗರಿಷ್ಠ 150 ರೂಪಾಯಿಗಳಿಗೆ ಬಂದು ತಲುಪಿತ್ತು.

ಇನ್ನು ಕೊನೆಯದಾಗಿ ರಬ್ಬರ್ ಧಾರಣೆಯಲ್ಲಿ ಈ ವಾರ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 22 ಸೋಮವಾರದಂದು ಗ್ರೇಡ್ ರಬ್ಬರ್ 268.5 ರೂಪಾಯಿ, ಲಾಟ್ ರಬ್ಬರ್ 228 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 154 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 145 ರೂಪಾಯಿ ಇತ್ತು. ಜೂನ್ 23 ಮಂಗಳವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಲಾಟ್ ರಬ್ಬರ್ ಬೆಲೆಯಲ್ಲಿ 1 ರೂಪಾಯಿ ಇಳಿಕೆಯಾಗಿ 227 ರೂಪಾಯಿಗೆ ತಲುಪಿತ್ತು. ಆದರೆ ಉಳಿದೆಲ್ಲಾ ವಿಭಾಗಗಳ ರಬ್ಬರ್ ಧಾರಣೆಗಳು ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಜೂನ್ 24 ಬುಧವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಕೊಂಚ ಇಳಿಮುಖ ಪ್ರವೃತ್ತಿ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಬೆಲೆಯಲ್ಲಿ ಪ್ರತಿ ಕೆಜಿಗೆ 50 ಪೈಸೆ ಇಳಿಕೆಯಾಗಿ 268 ರೂಪಾಯಿಗೆ ತಲುಪಿದರೆ ಉಳಿದೆಲ್ಲಾ ವಿಭಾಗಗಳ ರಬ್ಬರ್ ಧಾರಣೆಗಳು ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದವು. ಜೂನ್ 25 ಗುರುವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಇಳಿಮುಖ ಪ್ರವೃತ್ತಿ ಮುಂದುವರಿದಿದ್ದು, ಗ್ರೇಡ್ ರಬ್ಬರ್ ಬೆಲೆಯಲ್ಲಿ ಮತ್ತೆ 50 ಪೈಸೆ ಇಳಿಕೆಯಾಗಿ 267.5 ರೂಪಾಯಿಗೆ ತಲುಪಿತ್ತು. ಆದರೆ ಉಳಿದೆಲ್ಲಾ ವಿಭಾಗಗಳ ರಬ್ಬರ್ ದರಗಳು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದವು. ಜೂನ್ 26 ಶುಕ್ರವಾರದಂದು ಕೂಡ ಗ್ರೇಡ್ ರಬ್ಬರ್ ಬೆಲೆಯಲ್ಲಿ ಇಳಿಮುಖ ಪ್ರವೃತ್ತಿ ಮುಂದುವರಿದಿದ್ದು, ಪ್ರತಿ ಕೆಜಿಗೆ 1.50 ರೂಪಾಯಿ ಇಳಿಕೆ ಕಂಡು 266 ರೂಪಾಯಿಗೆ ಬಂದು ತಲುಪಿತ್ತು. ಆದರೆ ಉಳಿದೆಲ್ಲಾ ವಿಭಾಗಗಳ ರಬ್ಬರ್ ಧಾರಣೆಗಳು ಯಥಾಸ್ಥಿತಿಯನ್ನು ಕಾಯ್ದುಕೊಂಡಿದ್ದವು. ಇನ್ನು ವಾರದ ಕೊನೆಯ ದಿನವಾದ ಜೂನ್ 27 ಶನಿವಾರದಂದು ಕ್ಯಾಂಪ್ಕೋ ರಬ್ಬರ್ ಮಾರುಕಟ್ಟೆಯಲ್ಲಿ ಭಾರೀ ಇಳಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ಮಾತ್ರವಲ್ಲದೇ ಲಾಟ್ ಹಾಗೂ ಸ್ಕ್ರ್ಯಾಪ್ ಸೇರಿದಂತೆ ಎಲ್ಲಾ ವಿಭಾಗಗಳ ರಬ್ಬರ್ ಧಾರಣೆಗಳಲ್ಲೂ ಕುಸಿತ ಕಂಡುಬಂದಿತ್ತು. ಗ್ರೇಡ್ ರಬ್ಬರ್ ಬೆಲೆಯಲ್ಲಿ ಪ್ರತಿ ಕೆಜಿಗೆ 3 ರೂಪಾಯಿಗಳಷ್ಟು ಭಾರೀ ಕುಸಿತ ಕಂಡುಬಂದು 263 ರೂಪಾಯಿಗೆ ತಲುಪಿದರೆ ಲಾಟ್ ರಬ್ಬರ್ ಕೂಡ 3 ರೂಪಾಯಿಗಳಷ್ಟು ಇಳಿಕೆಯಾಗಿ 224 ರೂಪಾಯಿಗೆ ಬಂದು ತಲುಪಿತ್ತು. ಸ್ಕ್ರ್ಯಾಪ್ ರಬ್ಬರ್ ವಿಭಾಗದಲ್ಲೂ ಕುಸಿತ ಕಂಡುಬಂದಿದ್ದು, ಪ್ರಥಮ ದರ್ಜೆ ಸ್ಕ್ರ್ಯಾಪ್ ಪ್ರತಿ ಕೆಜಿಗೆ 1 ರೂಪಾಯಿ ಇಳಿಕೆಯಾಗಿ 153 ರೂಪಾಯಿಗೆ ತಲುಪಿದರೆ ದ್ವಿತೀಯ ದರ್ಜೆ ಸ್ಕ್ರ್ಯಾಪ್ ಕೂಡ ಪ್ರತಿ ಕೆಜಿಗೆ 1 ರೂಪಾಯಿ ಇಳಿಕೆಯಾಗಿ 144 ರೂಪಾಯಿಗೆ ತಲುಪಿತ್ತು. ವಾರಾಂತ್ಯದಲ್ಲಿ ಗ್ರೇಡ್ ರಬ್ಬರ್ 263 ರೂಪಾಯಿ, ಲಾಟ್ ರಬ್ಬರ್ 224 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 153 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 144 ರೂಪಾಯಿಗಳಿಗೆ ಬಂದು ತಲುಪಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ವಾರದ ಪ್ರಾರಂಭದಲ್ಲಿ ಉಪ ಉತ್ಪನ್ನಗಳಲ್ಲಿ ಕುಸಿತ ಕಾಣುವುದರೊಂದಿಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರೂ ನಂತರ ವಾರಪೂರ್ತಿ ಎಲ್ಲಾ ವಿಭಾಗಗಳ ಅಡಿಕೆ ಧಾರಣೆಗಳೂ ಕೂಡ ಸಂಪೂರ್ಣ ಸ್ಥಿರತೆಯತ್ತ ಮುಖ ಮಾಡಿದ್ದವು. ಇನ್ನು ಕೊಕ್ಕೋ ಧಾರಣೆ ವಾರಪೂರ್ತಿ ಸಂಪೂರ್ಣ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೆ ಕೊಬ್ಬರಿ ಧಾರಣೆ ವಾರದ ಪ್ರಾರಂಭದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೂ ವಾರಾಂತ್ಯದಲ್ಲಿ ಏರಿಕೆಯ ಹಾದಿಯತ್ತ ಸಾಗಿತ್ತು. ಇನ್ನು ಕಾಳುಮೆಣಸು ಧಾರಣೆಯು ವಾರದ ಆರಂಭದಲ್ಲಿ ಸ್ಥಿರತೆಯನ್ನು ಕಾಯ್ದುಕೊಂಡಿದ್ದರೂ ವಾರದ ಮಧ್ಯದಲ್ಲಿ ಏರಿಕೆಯತ್ತ ಸಾಗಿ ವಾರಾಂತ್ಯದಲ್ಲಿ ಸ್ಥಿರತೆಯತ್ತ ಮುಖ ಮಾಡಿತ್ತು. ಇನ್ನು ಕೊನೆಯದಾಗಿ ರಬ್ಬರ್ ಧಾರಣೆಯಲ್ಲಿ ವಾರಪೂರ್ತಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಾರಪೂರ್ತಿ ಇಳಿಕೆ ಹಾಗೂ ಸ್ಥಿರತೆಯ ಆಟ ಮುಂದುವರಿಸಿತ್ತು, ಆದರೆ ವಾರಾಂತ್ಯದಲ್ಲಿ ಎಲ್ಲಾ ವಿಭಾಗಗಳ ರಬ್ಬರ್ ಧಾರಣೆಗಳಲ್ಲೂ ಭಾರೀ ಕುಸಿತ ಕಂಡುಬಂದಿತ್ತು.

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಕಳೆದ ವಾರದ(ಜೂನ್ 22 ರಿಂದ ಜೂನ್ 27) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಗಳ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ (ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading