“ಮಾರುಕಟ್ಟೆ ರೌಂಡ್ ಅಪ್” – ಸೋಮವಾರ ಜೂನ್ 01 ರಿಂದ ಶನಿವಾರ ಜೂನ್ 06 ರವರೆಗಿನ “ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ”ಯ ಒಂದು ಸಮಗ್ರ ನೋಟ – ರಬ್ಬರ್ ಬೆಲೆಯಲ್ಲಿ ಭರ್ಜರಿ ಜಿಗಿತ, ಅಡಿಕೆ ಬೆಲೆಯಲ್ಲಿ ಭಾರಿ ಏರಿಳಿತ, ಕಾಳುಮೆಣಸು ಕೃಷಿಕರಿಗೆ ಬೆಲೆ ಇಳಿಕೆಯ ಬಿಸಿ..!

ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ ನಾವು ಪ್ರತೀದಿನವೂ ಕೂಡ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪ್ರಮುಖ ಕೃಷಿ ಉತ್ಪನ್ನಗಳ ದಿನನಿತ್ಯದ ಮಾರುಕಟ್ಟೆ ಧಾರಣೆಯ ವಿವರಗಳನ್ನು ಪಡೆದುಕೊಂಡು ನಮ್ಮ “ಅಮರ ಸುಳ್ಯ ಸುದ್ದಿ ವಾರಪತ್ರಿಕೆ”ಯ ವೆಬ್ ಸೈಟ್ ನಲ್ಲಿ ಪ್ರಕಟಿಸುತ್ತಾ ಬರುತ್ತಿದ್ದೇವೆ. ಈ ವಾರ ಅಂದರೆ ಜೂನ್ 01 ಸೋಮವಾರದಿಂದ ಜೂ.06 ಶನಿವಾರದವರೆಗೆ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು, ರಬ್ಬರ್, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳೇನು…!? ಎಂಬುವುದನ್ನು ಈ ವಾರದ “ಮಾರುಕಟ್ಟೆ ರೌಂಡ್ ಅಪ್” ವರದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಮೊದಲಿಗೆ ನಾವು ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುತ್ತಾ ಹೋಗುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 01 ಸೋಮವಾರದಂದು ಹೊಸ ಅಡಿಕೆ ಕನಿಷ್ಠ 415 ರಿಂದ ಗರಿಷ್ಠ 450 ರೂಪಾಯಿ, ಹಳೆ ಅಡಿಕೆ ಕನಿಷ್ಠ 430 ರಿಂದ ಗರಿಷ್ಠ 535 ರೂಪಾಯಿ, ಡಬಲ್ ಚೋಲ್ ಕನಿಷ್ಠ 430 ರಿಂದ ಗರಿಷ್ಠ 535 ರೂಪಾಯಿ, ಫಟೋರಾ ಕನಿಷ್ಠ 340 ರಿಂದ ಗರಿಷ್ಠ 390 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 270 ರಿಂದ ಗರಿಷ್ಠ 290 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 255 ರಿಂದ ಗರಿಷ್ಠ 285 ರೂಪಾಯಿ ಇತ್ತು. ಜೂನ್ 02 ಮಂಗಳವಾರದಂದು ಹೊಸ ಅಡಿಕೆ, ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಅಡಿಕೆಯ ದರಗಳಲ್ಲಿ ಗಮನಾರ್ಹ ಏರಿಕೆ ದಾಖಲಾಗಿತ್ತು. ಆದರೆ ಉಪ ಉತ್ಪನ್ನವಾದ ಕರಿಗೋಟು ಧಾರಣೆಯಲ್ಲಿ ಸಣ್ಣ ಮಟ್ಟದ ಕುಸಿತ ಕಂಡುಬಂದಿತ್ತು. ಜೂ.01 ರಂದು ಗರಿಷ್ಠ 450ರಷ್ಟಿದ್ದ ಹೊಸ ಅಡಿಕೆ ಧಾರಣೆ ಜೂ.02ಕ್ಕೆ 455ಕ್ಕೆ ಜಿಗಿದಿದ್ದು, ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳು ಸಹ ತಲಾ ₹5 ರಷ್ಟು ಹೆಚ್ಚಳ ಕಂಡು ತಮ್ಮ ಗರಿಷ್ಠ ಬೆಲೆ ₹540ರ ಅತ್ಯುತ್ತಮ ಮಟ್ಟವನ್ನು ತಲುಪಿದ್ದವು. ಫಟೋರಾ ಹಾಗೂ ಉಳ್ಳಿಗಡ್ಡೆ ದರಗಳು ಯಾವುದೇ ಬದಲಾವಣೆಯಿಲ್ಲದೇ ಸ್ಥಿರವಾಗಿ ಉಳಿದಿದ್ದರೆ ಕರಿಗೋಟು ಧಾರಣೆಯು ಕನಿಷ್ಠ ಮತ್ತು ಗರಿಷ್ಠ ಎರಡೂ ವಿಭಾಗಗಳಲ್ಲೂ ₹5 ರಷ್ಟು ಇಳಿಮುಖಗೊಂಡು ₹250 ರಿಂದ ₹280ರ ಮಟ್ಟಕ್ಕೆ ತಲುಪಿದ್ದವು. ಜೂನ್ 03 ಬುಧವಾರದಂದು ಪ್ರಮುಖ ಅಡಿಕೆ ವಿಭಾಗಗಳ ಕನಿಷ್ಠ ದರಗಳಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದ್ದರೆ, ಹೊಸ ಅಡಿಕೆಯ ಗರಿಷ್ಠ ದರದಲ್ಲಿ ಮತ್ತಷ್ಟು ಏರಿಕೆ ಕಂಡುಬಂದಿತ್ತು. ಇನ್ನುಳಿದಂತೆ ಉಪ ಉತ್ಪನ್ನಗಳಾದ ಉಳ್ಳಿಗಡ್ಡೆ ಹಾಗೂ ಕರಿಗೋಟು ಧಾರಣೆಗಳು ಇಳಿಮುಖವಾಗಿದ್ದವು. ಜೂ.02ರಂದು ಗರಿಷ್ಠ ₹455 ರಷ್ಟಿದ್ದ ಹೊಸ ಅಡಿಕೆ ಜೂ.03ರ ಹೊತ್ತಿಗೆ ₹460ಕ್ಕೆ ತಲುಪಿದ್ದು, ಆದರೆ ಇದರ ಕನಿಷ್ಠ ದರ ₹415 ರಿಂದ ಒಮ್ಮೆಲೇ ₹390ಕ್ಕೆ ಕುಸಿತ ಕಂಡಿತ್ತು. ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಗಳೂ ಕೂಡ ತಮ್ಮ ಗರಿಷ್ಠ ದರ ₹540ರಲ್ಲೇ ಮುಂದುವರಿದು ಸ್ಥಿರವಾಗಿದ್ದರೆ ಇವೆರಡರ ಕನಿಷ್ಠ ದರಗಳಲ್ಲಿ ₹40ರಷ್ಟು ಭಾರೀ ಕುಸಿತ ದಾಖಲಾಗಿ ₹430 ರಿಂದ ₹390ಕ್ಕೆ ಇಳಿದಿತ್ತು. ಫಟೋರಾ ಧಾರಣೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ, ಆದರೆ ಉಳ್ಳಿಗಡ್ಡೆ ಮತ್ತು ಕರಿಗೋಟು ಎರಡರ ಗರಿಷ್ಠ ದರಗಳು ತಲಾ ₹5ರಷ್ಟು ಇಳಿಮುಖವಾಗಿದ್ದು, ಕ್ರಮವಾಗಿ ಉಳ್ಳಿಗಡ್ಡೆ ₹285 ಹಾಗೂ ಕರಿಗೋಟು ₹275ಕ್ಕೆ ಬಂದು ನಿಂತಿದ್ದವು. ಜೂನ್ 04 ಗುರುವಾರದಂದು ಪ್ರಮುಖ ಅಡಿಕೆ ವಿಭಾಗಗಳಾದ ಹೊಸ ಅಡಿಕೆ, ಹಳೆ ಅಡಿಕೆ ಮತ್ತು ಡಬಲ್ ಚೋಲ್ ಧಾರಣೆಗಳ ಗರಿಷ್ಠ ದರದಲ್ಲಿ ₹10 ರಷ್ಟು ಭಾರೀ ಏರಿಕೆ ದಾಖಲಾಗಿತ್ತು. ಆದರೆ ಉಪ ಉತ್ಪನ್ನಗಳಾದ ಉಳ್ಳಿಗಡ್ಡೆ ಮತ್ತು ಕರಿಗೋಟು ಕನಿಷ್ಠ ದರಗಳಲ್ಲಿ ಸಣ್ಣ ಮಟ್ಟದ ಕುಸಿತ ಕಂಡಿದ್ದವು. ಜೂ.03ರಂದು ಗರಿಷ್ಠ ₹460ರಷ್ಟಿದ್ದ ಹೊಸ ಅಡಿಕೆ ಜೂ.04 ರಂದು ₹10 ಏರಿಕೆ ಕಂಡು ₹470ಕ್ಕೆ ತಲುಪಿದ್ದರೆ ಹಳೆ ಅಡಿಕೆ ಹಾಗೂ ಡಬಲ್ ಚೋಲ್ ಧಾರಣೆಗಳು ಸಹ ತಲಾ ₹10 ರಷ್ಟು ಭರ್ಜರಿ ಮುನ್ನಡೆ ದಾಖಲಿಸಿ ತಮ್ಮ ಗರಿಷ್ಠ ದರ ₹550ರ ಭರ್ಜರಿ ಮಟ್ಟವನ್ನು ಮುಟ್ಟಿದ್ದವು, ಆದರೆ ಕನಿಷ್ಠ ದರ ₹390 ರಲ್ಲೇ ಸ್ಥಿರವಾಗಿದ್ದವು. ಉಪ ಉತ್ಪನ್ನಗಳಾದ ಫಟೋರಾ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ. ಆದರೆ ಉಳ್ಳಿಗಡ್ಡೆ ಮತ್ತು ಕರಿಗೋಟು ಎರಡರ ಗರಿಷ್ಠ ದರಗಳು ಸ್ಥಿರವಾಗಿದ್ದರೂ ಕನಿಷ್ಠ ದರಗಳಲ್ಲಿ ತಲಾ ₹5ರಷ್ಟು ಇಳಿಮುಖ ಕಂಡುಬಂದಿದ್ದು, ಅಂತಿಮವಾಗಿ ಉಳ್ಳಿಗಡ್ಡೆ ₹265 ಹಾಗೂ ಕರಿಗೋಟು ಕನಿಷ್ಠ ₹245ರ ಮಟ್ಟಕ್ಕೆ ತಲುಪಿದ್ದವು. ಜೂನ್ 05 ಶುಕ್ರವಾರದಂದು ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಯಾವುದೇ ಬದಲಾವಣೆಗಳಿಲ್ಲದೇ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಜೂ.04ರ ಭರ್ಜರಿ ಏರಿಕೆಯ ನಂತರ ಮುಖ್ಯ ಅಡಿಕೆ ಹಾಗೂ ಉಪ ಉತ್ಪನ್ನಗಳೆರಡೂ ಅದೇ ಧಾರಣೆಗಳನ್ನು ಕಾಯ್ದುಕೊಂಡಿದ್ದವು. ಇನ್ನು ವಾರದ ಕೊನೆಯ ದಿನವಾದ ಜೂನ್ 06 ಶನಿವಾರದಂದು ಕೂಡ ಕ್ಯಾಂಪ್ಕೋ ಅಡಿಕೆ ಮಾರುಕಟ್ಟೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಸತತ ಎರಡನೇ ದಿನವೂ ಸ್ಥಿರತೆ ಮುಂದುವರಿದಿತ್ತು. ಜೂ.05ರ ದರಗಳಿಗೆ ಹೋಲಿಸಿದರೆ ಜೂ.06ರಂದು ಕೂಡ ಮುಖ್ಯ ಅಡಿಕೆಗಳಾದ ಹೊಸ ಅಡಿಕೆ, ಹಳೆ ಅಡಿಕೆ, ಡಬಲ್ ಚೋಲ್ ಹಾಗೂ ಉಪ ಉತ್ಪನ್ನಗಳ ಧಾರಣೆಗಳಲ್ಲಿ ಯಾವುದೇ ಏರಿಳಿತಗಳು ಸಂಭವಿಸದೇ ವಹಿವಾಟು ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಅಂತಿಮವಾಗಿ ವಾರದ ಕೊನೆಯಲ್ಲಿ ಅಂದರೆ ಜೂನ್ 06 ಶನಿವಾರದಂದು ಹೊಸ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 470 ರೂಪಾಯಿ, ಹಳೆ ಅಡಿಕೆ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಡಬಲ್ ಚೋಲ್ ಕನಿಷ್ಠ 390 ರಿಂದ ಗರಿಷ್ಠ 550 ರೂಪಾಯಿ, ಫಟೋರಾ ಕನಿಷ್ಠ 340 ರಿಂದ ಗರಿಷ್ಠ 390 ರೂಪಾಯಿ, ಉಳ್ಳಿಗಡ್ಡೆ ಕನಿಷ್ಠ 265 ರಿಂದ ಗರಿಷ್ಠ 285 ರೂಪಾಯಿ ಹಾಗೂ ಕರಿಗೋಟು ಕನಿಷ್ಠ 245 ರಿಂದ ಗರಿಷ್ಠ 275 ರೂಪಾಯಿಗೆ ಬಂದು ತಲುಪಿತ್ತು.

ಇನ್ನು ಇತರ ಪ್ರಮುಖ ಕೃಷಿ ಉತ್ಪನ್ನಗಳಾದ ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಕಂಡುಬಂದ ಏರಿಳಿತಗಳನ್ನು ನೋಡುವುದಾದರೆ ಈ ವಾರದ ಪ್ರಾರಂಭದಲ್ಲಿ ಅಂದರೆ ಜೂನ್ 01 ಸೋಮವಾರದಂದು ಕಾಳುಮೆಣಸು ಕನಿಷ್ಠ 585 ರಿಂದ ಗರಿಷ್ಠ 680 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 125 ರಿಂದ ಗರಿಷ್ಠ 145 ರೂಪಾಯಿ ಇತ್ತು. ಜೂನ್ 02 ಮಂಗಳವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಬೆಳೆಗಳ ಧಾರಣೆಗಳಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿತ್ತು. ಜೂನ್ 03 ಬುಧವಾರದಂದು ಕಾಳುಮೆಣಸು ಹಾಗೂ ಕೊಬ್ಬರಿ ಧಾರಣೆಗಳಲ್ಲಿ ಏಕಕಾಲಕ್ಕೆ ಇಳಿಮುಖ ಪ್ರವೃತ್ತಿ ಕಂಡುಬಂದಿದ್ದು, ಕೊಕ್ಕೋ ಧಾರಣೆ ಮಾತ್ರ ಯಥಾಸ್ಥಿತಿಯನ್ನು ಕಾಯ್ದುಕೊಂಡಿತ್ತು. ಜೂ.02ರಂದು ಗರಿಷ್ಠ ₹680ರಷ್ಟಿದ್ದ ಕಾಳುಮೆಣಸು ಜೂ.03ರಂದು ₹5 ಇಳಿಮುಖವಾಗಿ ₹675ಕ್ಕೆ ತಲುಪಿದ್ದು, ಇದರ ಕನಿಷ್ಠ ದರವೂ ₹585ರಿಂದ ₹580ಕ್ಕೆ ಇಳಿಕೆಯಾಗಿತ್ತು. ಕೊಬ್ಬರಿ ಧಾರಣೆಯೂ ಸಹ ಗರಿಷ್ಠ ವಿಭಾಗದಲ್ಲಿ ₹3ರಷ್ಟು ಕುಸಿತ ಕಂಡು ₹142ಕ್ಕೆ ತಲುಪಿದರೆ ಕನಿಷ್ಠ ದರ ಮಾತ್ರ ₹125ರ ಮಟ್ಟದಲ್ಲೇ ಮುಂದುವರಿದಿತ್ತು. ಜೂನ್ 04 ಗುರುವಾರದಂದು ಕಾಳುಮೆಣಸು ಧಾರಣೆಯಲ್ಲಿ ಇಳಿಮುಖ ಪ್ರವೃತ್ತಿ ಕಂಡುಬಂದಿದ್ದು, ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳು ಯಾವುದೇ ಬದಲಾವಣೆ ಇಲ್ಲದೇ ಜೂ.03ರ ಧಾರಣೆಯಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಜೂ.03ರಂದು ಗರಿಷ್ಠ ₹675ರಷ್ಟಿದ್ದ ಕಾಳುಮೆಣಸು ಧಾರಣೆ ₹5ರಷ್ಟು ಇಳಿಮುಖ ಕಂಡು ₹670ಕ್ಕೆ ತಲುಪಿದ್ದು, ಕನಿಷ್ಠ ದರವೂ ಸಹ ₹580 ರಿಂದ ₹575ಕ್ಕೆ ಕುಸಿದಿತ್ತು. ಜೂನ್ 05 ಶುಕ್ರವಾರದಂದು ಕಾಳುಮೆಣಸು ಧಾರಣೆಯಲ್ಲಿ ಮತ್ತೆ ಇಳಿಮುಖ ಪ್ರವೃತ್ತಿ ಕಂಡುಬಂದಿದ್ದು, ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳು ಯಾವುದೇ ಬದಲಾವಣೆ ಇಲ್ಲದೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಜೂ.04ರಂದು ಗರಿಷ್ಠ ₹670ರಷ್ಟಿದ್ದ ಕಾಳುಮೆಣಸು ಧಾರಣೆ ಜೂ.05ರಂದು ₹5 ಕುಸಿತ ಕಂಡು ₹665ಕ್ಕೆ ಬಂದು ತಲುಪಿತ್ತು. ಕನಿಷ್ಠ ದರವೂ ಸಹ ₹575ರಿಂದ ₹570ಕ್ಕೆ ಇಳಿಕೆಯಾಗಿತ್ತು. ಇನ್ನು ವಾರದ ಕೊನೆಯ ದಿನವಾದ ಜೂನ್ 06 ಶನಿವಾರದಂದು ಕಾಳುಮೆಣಸು, ಕೊಕ್ಕೋ ಹಾಗೂ ಕೊಬ್ಬರಿ ಧಾರಣೆಗಳಲ್ಲಿ ಯಾವುದೇ ಏರಿಳಿತಗಳು ಸಂಭವಿಸದೇ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಕಳೆದೆರಡು ದಿನಗಳಿಂದ ಸತತವಾಗಿ ಇಳಿಮುಖವಾಗುತ್ತಿದ್ದ ಕಾಳುಮೆಣಸು ಧಾರಣೆ ಸ್ಥಿಸ್ಥಿರತೆಯ ಹಾದಿಗೆ ಮರಳಿದರೆ ಕೊಬ್ಬರಿ ಹಾಗೂ ಕೊಕ್ಕೋ ಧಾರಣೆಗಳಲ್ಲಿ ಕೂಡ ಯಾವುದೇ ಬದಲಾವಣೆಗಳು ಕಂಡುಬಂದಿರಲಿಲ್ಲ. ಅಂತಿಮವಾಗಿ ವಾರದ ಕೊನೆಯಲ್ಲಿ ಅಂದರೆ ಜೂನ್ 06 ಶನಿವಾರದಂದು ಕಾಳುಮೆಣಸು ಕನಿಷ್ಠ 570 ರಿಂದ ಗರಿಷ್ಠ 665 ರೂಪಾಯಿ, ಹಸಿ ಕೊಕ್ಕೋ ಕನಿಷ್ಠ 75 ರಿಂದ ಗರಿಷ್ಠ 105 ರೂಪಾಯಿ, ಒಣ ಕೊಕ್ಕೋ ಕನಿಷ್ಠ 290 ರಿಂದ ಗರಿಷ್ಠ 320 ರೂಪಾಯಿ ಹಾಗೂ ಕೊಬ್ಬರಿ ಕನಿಷ್ಠ 125 ರಿಂದ ಗರಿಷ್ಠ 142 ರೂಪಾಯಿಗೆ ಬಂದು ತಲುಪಿತ್ತು.

ಇನ್ನು ಕೊನೆಯದಾಗಿ ಈ ವಾರದ ರಬ್ಬರ್ ಧಾರಣೆಯಲ್ಲಿ ಉಂಟಾದ ಏರಿಳಿತಗಳನ್ನು ನೋಡುವುದಾದರೆ ವಾರದ ಆರಂಭದಲ್ಲಿ ಅಂದರೆ ಜೂನ್ 01 ಸೋಮವಾರದಂದು ಗ್ರೇಡ್ ರಬ್ಬರ್ 252.50 ರೂಪಾಯಿ, ಲಾಟ್ ರಬ್ಬರ್ 209 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 145 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 135 ರೂಪಾಯಿ ಇತ್ತು. ಜೂನ್ 02 ಮಂಗಳವಾರದಂದು ರಬ್ಬರ್ ಧಾರಣೆಯಲ್ಲಿ ಭರ್ಜರಿ ಜಿಗಿತ ಕಂಡುಬಂದಿದ್ದು, ಜೂ.01 ರಂದು ₹252.50 ರಷ್ಟಿದ್ದ ಗ್ರೇಡ್ ರಬ್ಬರ್ ಜೂ.02ರಂದು 2.50 ರೂಪಾಯಿ ಏರಿಕೆ ಕಂಡು ₹255ಕ್ಕೆ ತಲುಪಿದರೆ ಲಾಟ್ ರಬ್ಬರ್ ಕೂಡ ₹2ರಷ್ಟು ಏರಿಕೆ ಕಂಡು ₹211ರ ಗಡಿಗೆ ಬಂದು ನಿಂತಿತ್ತು. ಅದೇ ರೀತಿ ಸ್ಕ್ರ್ಯಾಪ್ ರಬ್ಬರ್ ದರಗಳಲ್ಲೂ ಕೂಡ ಸಕಾರಾತ್ಮಕ ಚಲನೆ ಕಂಡುಬಂದಿದ್ದು, ಪ್ರಥಮ ದರ್ಜೆ ಕೆ.ಜಿಗೆ ₹1 ಹೆಚ್ಚಳವಾಗಿ ₹146 ಹಾಗೂ ದ್ವಿತೀಯ ದರ್ಜೆ ಕೆ.ಜಿಗೆ ₹2 ಜಿಗಿದು 137 ರೂಪಾಯಿಗೆ ತಲುಪಿದ್ದವು. ಜೂನ್ 03 ಬುಧವಾರದಂದು ಕೂಡ ರಬ್ಬರ್ ಧಾರಣೆಯಲ್ಲಿ ಮತ್ತೆ ಭರ್ಜರಿ ಚೇತರಿಕೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ₹2 ಏರಿಕೆ ಕಂಡು ₹257ಕ್ಕೆ ತಲುಪಿದರೆ ಲಾಟ್ ರಬ್ಬರ್ ₹2.50 ಏರಿಕೆ ಕಂಡು 213.50 ರೂಪಾಯಿಗಳಿಗೆ ತಲುಪಿತ್ತು. ಅದೇ ರೀತಿ ಸ್ಕ್ರ್ಯಾಪ್ ಪ್ರಥಮ ದರ್ಜೆ ₹2 ರೂಪಾಯಿ ಹೆಚ್ಚಳಗೊಂಡು ₹148 ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ ₹2 ರೂಪಾಯಿ ಏರಿಕೆ ಕಂಡು ₹139 ರೂಪಾಯಿಗಳಿಗೆ ತಲುಪಿತ್ತು. ಜೂನ್ 04 ಗುರುವಾರದಂದು ಕೂಡ ಮತ್ತೆ ರಬ್ಬರ್ ಧಾರಣೆಯಲ್ಲಿ ಭರ್ಜರಿ ಮುನ್ನಡೆ ಕಂಡುಬಂದಿದ್ದು, ಗ್ರೇಡ್ ರಬ್ಬರ್ ₹1 ರೂಪಾಯಿ ಏರಿಕೆ ಕಂಡು ₹258ಕ್ಕೆ ತಲುಪಿದರೆ ಲಾಟ್ ರಬ್ಬರ್ 50 ಪೈಸೆ ಏರಿಕೆ ಕಂಡು 214ರ ಗಡಿಗೆ ತಲುಪಿತ್ತು. ಹಾಗೆಯೇ ಸ್ಕ್ರ್ಯಾಪ್ ವಿಭಾಗದಲ್ಲೂ ಏರಿಕೆ ಕಂಡುಬಂದಿದ್ದು, ಸ್ಕ್ರ್ಯಾಪ್ ಪ್ರಥಮ ದರ್ಜೆ ಕೆ.ಜಿಗೆ 50 ಪೈಸೆ ಏರಿಕೆ ಕಂಡು ₹148.50ಕ್ಕೆ ತಲುಪಿದರೆ ಸ್ಕ್ರ್ಯಾಪ್ ದ್ವಿತೀಯ ದರ್ಜೆ ಜೂ.03ರ ದರದಲ್ಲೇ ಸ್ಥಿರವಾಗಿತ್ತು. ಜೂನ್ 05 ಶುಕ್ರವಾರದಂದು ಸತತ ಮೂರು ದಿನಗಳ ಜಿಗಿತದ ಬಳಿಕ ರಬ್ಬರ್ ಧಾರಣೆಯಲ್ಲಿ ಸಂಪೂರ್ಣ ಸ್ಥಿರತೆ ಕಂಡುಬಂದಿದ್ದು, ಗ್ರೇಡ್, ಲಾಟ್ ಹಾಗೂ ಸ್ಕ್ರ್ಯಾಪ್ ರಬ್ಬರ್ ದರಗಳು ಜೂ.04ರ ದರದಲ್ಲೇ ಸ್ಥಿರತೆಯನ್ನು ಕಾಯ್ದುಕೊಂಡಿದ್ದವು. ಇನ್ನು ವಾರದ ಕೊನೆಯ ದಿನವಾದ ಜೂನ್ 06 ಶನಿವಾರದಂದು ರಬ್ಬರ್ ಧಾರಣೆಯಲ್ಲಿ ಭರ್ಜರಿ ಮುನ್ನಡೆ ಕಂಡುಬಂದಿದ್ದು, ಜೂ.05ರ ಸ್ಥಿರತೆಯ ನಂತರ ಧಾರಣೆ ಮತ್ತೆ ಏರಿಕೆ ಕಂಡಿದ್ದು, ಜೂ.05ರಂದು ₹214 ರಷ್ಟಿದ್ದ ಲಾಟ್ ರಬ್ಬರ್ ಧಾರಣೆ ಜೂ.06ರಂದು ₹3.50 ಏರಿಕೆ ಕಂಡು ₹217.50ಕ್ಕೆ ತಲುಪಿದರೆ ಗ್ರೇಡ್ ರಬ್ಬರ್ ಕೂಡ ₹1.50 ಏರಿಕೆ ಕಂಡು 259.50 ರೂಪಾಯಿಗೆ ತಲುಪಿತ್ತು. ಸ್ಕ್ರ್ಯಾಪ್ ಪ್ರಥಮ ದರ್ಜೆ ₹1.50 ಏರಿಕೆ ಕಂಡು ₹150ರ ಗಡಿ ತಲುಪಿದರೆ ದ್ವಿತೀಯ ದರ್ಜೆ ₹2 ಹೆಚ್ಚಳವಾಗಿ ₹141 ರೂಪಾಯಿಗೆ ಬಂದು ತಲುಪಿತ್ತು. ಅಂತಿಮವಾಗಿ ವಾರದ ಕೊನೆಯಲ್ಲಿ ಅಂದರೆ ಜೂನ್ 06 ಶನಿವಾರದಂದು ಗ್ರೇಡ್ ರಬ್ಬರ್ 259.50 ರೂಪಾಯಿ, ಲಾಟ್ ರಬ್ಬರ್ 217.50 ರೂಪಾಯಿ, ಸ್ಕ್ರ್ಯಾಪ್ ಪ್ರಥಮ ದರ್ಜೆ 150 ರೂಪಾಯಿ ಹಾಗೂ ಸ್ಕ್ರ್ಯಾಪ್ ದ್ವಿತೀಯ ದರ್ಜೆ 141 ರೂಪಾಯಿಗೆ ಬಂದು ನಿಂತಿತ್ತು.

ಒಟ್ಟಿನಲ್ಲಿ ಈ ವಾರದ ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ ಅಡಿಕೆಯು ವಾರಪೂರ್ತಿ ಏರಿಳಿತದ ಹಾದಿಯಲ್ಲಿ ಸಾಗಿದ್ದು, ವಾರದ ಕೊನೆಯಲ್ಲಿ ಸಂಪೂರ್ಣ ಸ್ಥಿರತೆಯ ಕಡೆಗೆ ವಾಲಿತ್ತು. ಕಾಳುಮೆಣಸು ವಾರಪೂರ್ತಿ ಇಳಿಮುಖ ಪ್ರವೃತ್ತಿಯನ್ನು ಕಂಡರೆ ಕೊಬ್ಬರಿ ಒಂದೊಮ್ಮೆ ಕುಸಿತದ ಹಾದಿಯನ್ನು ಹಿಡಿದು ವಾರಪೂರ್ತಿ ಸ್ಥಿರತೆಯನ್ನು ಕಾಯ್ದುಕೊಂಡಿತ್ತು. ಕೊಕ್ಕೋ ಧಾರಣೆಯು ಎಂದಿನಂತೆ ವಾರಪೂರ್ತಿ ಸ್ಥಿರತೆಯಲ್ಲೇ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದರೆ ರಬ್ಬರ್ ಧಾರಣೆಯು ವಾರಪೂರ್ತಿ ಭರ್ಜರಿ ಏರಿಕೆಯ ಹಾದಿಯಲ್ಲಿ ಸಾಗಿತ್ತು. (ಮಾಹಿತಿ ಸಂಗ್ರಹ ಮತ್ತು ವರದಿ : ಉಲ್ಲಾಸ್ ಕಜ್ಜೋಡಿ, ವರದಿಗಾರರು, ಅಮರ ಸುಳ್ಯ ಸುದ್ದಿ ವಾರಪತ್ರಿಕೆ)

ಕೃಷಿಕರ ಗಮನಕ್ಕೆ : ಈ ಲೇಖನದಲ್ಲಿ ಪ್ರಕಟಿಸಲಾದ ಮಾರುಕಟ್ಟೆ ಧಾರಣೆಗಳು ಸುಳ್ಯ ತಾಲೂಕಿನ ಕೃಷಿಕರಿಗೆ ಸಹಾಯಕವಾಗಲಿ ಎನ್ನುವ ಸದುದ್ದೇಶದಿಂದ “ಕ್ಯಾಂಪ್ಕೋ ನಿ. ಮಂಗಳೂರು(ಸುಳ್ಯ ಶಾಖೆ)” ಇವರಿಂದ ಪಡೆದುಕೊಂಡ ಕಳೆದ ವಾರದ(ಜೂನ್ 01 ರಿಂದ ಜೂನ್ 06) ಕ್ಯಾಂಪ್ಕೋ ಮಾರುಕಟ್ಟೆ ಧಾರಣೆಯ ಅಂಕಿ-ಅಂಶಗಳಾಗಿವೆ. ಮಾರುಕಟ್ಟೆ ಧಾರಣೆಯು ಪ್ರತೀದಿನದ ಬೇಡಿಕೆ ಹಾಗೂ ಪೂರೈಕೆಗೆ ಅನುಗುಣವಾಗಿ ಕ್ಷಣಕ್ಷಣಕ್ಕೂ ಬದಲಾಗುತ್ತಿರುತ್ತದೆ. ಇಲ್ಲಿ ನೀಡಲಾದ ಮಾಹಿತಿಯು ಕೇವಲ ಕೃಷಿಕರ ಅರಿವಿಗಾಗಿ ಮಾತ್ರವಾಗಿದ್ದು, ಇದು ಭವಿಷ್ಯದ ದರಗಳ ಮುನ್ಸೂಚನೆಯಲ್ಲ. ಉತ್ಪನ್ನಗಳ ಗುಣಮಟ್ಟ, ತೇವಾಂಶ ಹಾಗೂ ಮಾರುಕಟ್ಟೆ ಅವಕಕ್ಕೆ ಅನುಗುಣವಾಗಿ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಮಂಡಿಗಳಲ್ಲಿ ದರಗಳು ಅಲ್ಪಮಟ್ಟಿಗೆ ವ್ಯತ್ಯಾಸವಿರಬಹುದು. ನಿಖರ ಮಾಹಿತಿಗಾಗಿ ಕೃಷಿಕರು ತಮ್ಮ ಸಮೀಪದ ಕ್ಯಾಂಪ್ಕೋ ಶಾಖೆ, ಮಾರುಕಟ್ಟೆ ಕೇಂದ್ರ ಅಥವಾ ಪರಿಚಿತ ವರ್ತಕರನ್ನು ಸಂಪರ್ಕಿಸಬಹುದಾಗಿದೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading