ದಕ್ಷಿಣ ಕನ್ನಡದಲ್ಲಿ ಬಂದೂಕು ಲೈಸನ್ಸ್ ನವೀಕರಣಕ್ಕೆ ತೀವ್ರ ತೊಂದರೆ ಅನುಭಸುತ್ತಿರುವ ಕೃಷಿಕರು – ತುರ್ತು ಸ್ಪಂದನೆಗೆ ಡಿಜಿಪಿ, ಜಿಲ್ಲಾಡಳಿತಕ್ಕೆ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರ ಬರೆದು ಒತ್ತಾಯ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೃಷಿಕರು ವನ್ಯಜೀವಿಗಳ ಉಪಟಳದಿಂದ ತಮ್ಮ ಬೆಳೆ ರಕ್ಷಣೆಗೆ ಬಳಸುವ ಕೋವಿ/ಬಂದೂಕು ಪರವಾನಗಿ ನವೀಕರಣಕ್ಕೆ ಎದುರಿಸುತ್ತಿರುವ ತೀವ್ರ ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕೆಂದು ಕೋರಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. “ಇತ್ತೀಚಿನ ದಿನಗಳಲ್ಲಿ ಕೃಷಿಕರು ಕಾನೂನು ಪ್ರಕಾರ ಪಡೆದಿರುವ ಬಂದೂಕು ಪರವಾನಗಿಯ ನವೀಕರಣ ಅರ್ಜಿಗಳನ್ನು ಕಠಿಣ ನಿಯಮಗಳ ನೆಪವೊಡ್ಡಿ ಅಧಿಕಾರಿಗಳು ವ್ಯವಸ್ಥಿತವಾಗಿ ತಿರಸ್ಕರಿಸುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಇದರಿಂದ ಕೃಷಿಕರು ಅದರಲ್ಲೂ ಕಾಡಿನಂಚಿನಲ್ಲಿರುವವರು ನಾನಾ ರೀತಿಯ ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ವಾಡಿಕೆಯಂತೆ, ಈ ಬೆಳೆ ರಕ್ಷಣಾ ಪರವಾನಗಿಗಳನ್ನು ವಾರ್ಷಿಕ ನವೀಕರಣ ಪ್ರಕ್ರಿಯೆಗೆ ಒಳಪಡಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬಂದೂಕು ನವೀಕರಣ ಪ್ರಕ್ರಿಯೆಗಳಿಗೆ ತಡೆಯೊಡ್ಡುತ್ತಿರುವುದು ರೈತರನ್ನು ಅಸಹಾಯಕರನ್ನಾಗಿಸುತ್ತಿದೆ. ಹೀಗಾಗಿ ಈ ಸಮಸ್ಯೆಗೆ ತಕ್ಷಣವೇ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು” ಸಂಸದರು ಪತ್ರದಲ್ಲಿ ಒತ್ತಾಯಿಸಿದ್ದಾರೆ. “ನಮ್ಮ ಭಾಗದ ರೈತರು ಕಷ್ಟಪಟ್ಟು ದುಡಿದ ಬೆಳೆಗಳನ್ನು ಕಾಡುಪ್ರಾಣಿಗಳಿಂದ ರಕ್ಷಿಸಲು ಹಲವು ದಶಕಗಳಿಂದ ಈ ಕೋವಿ ಪರವಾನಗಿ ಸೌಲಭ್ಯವನ್ನು ಅವಲಂಬಿಸಿದ್ದು, ಕಳೆದೊಂದು ವರ್ಷದಲ್ಲಿ ‘ಕೃಷಿ ಭೂಮಿಗೆ ವನ್ಯಜೀವಿಗಳು ನುಗ್ಗಿಲ್ಲ ಅಥವಾ ಹಾನಿ ಮಾಡಿಲ್ಲ’ ಎಂಬ ಕಾರಣ ನೀಡಿ ನೊಂದ ರೈತರ ಅರ್ಜಿಗಳನ್ನು ತಿರಸ್ಕರಿಸಲಾಗುತ್ತಿರುವ ಬಗ್ಗೆ ಸಂತ್ರಸ್ತರು ನನ್ನ ಗಮನಕ್ಕೆ ತಂದಿದ್ದಾರೆ. ಆದರೆ, ರೈತರ ಬಳಿ ಪರವಾನಗಿ ಹೊಂದಿದ ಬಂದೂಕು ಇರುವುದೇ ವನ್ಯಜೀವಿಗಳು ಕೃಷಿ ಭೂಮಿಗೆ ನುಗ್ಗದಂತೆ ತಡೆಯುವ ಪ್ರಮುಖ ಪ್ರತಿಬಂಧಕ ಶಕ್ತಿಯಾಗಿರುತ್ತದೆ. ಕಾಡುಪ್ರಾಣಿಗಳ ದಾಳಿಯು ತೀರಾ ಅನಿರೀಕ್ಷಿತವಾಗಿದ್ದು, ಅದನ್ನು ಮುಂಚಿತವಾಗಿ ಊಹಿಸುವುದು ಅಸಾಧ್ಯ. ಇಂತಹ ಪರಿಸ್ಥಿತಿಯಲ್ಲಿ ಬಂದೂಕು ಪರವಾನಗಿ ಇಲ್ಲದೆ ರೈತನು ಅಸಹಾಯಕನಾಗಿ ಕೈಕಟ್ಟಿ ಕುಳಿತರೆ, ಕಣ್ಣೆದುರೇ ಇಡೀ ಕೃಷಿ ನಾಶವಾಗಿ ಆತನ ಜೀವನೋಪಾಯವೇ ಬೀದಿಗೆ ಬೀಳುವ ಆತಂಕ ಎದುರಾಗುತ್ತದೆ” ಎಂಬುವುದನ್ನು ಪತ್ರದಲ್ಲಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿದ್ದಾರೆ. “ಕಾನೂನು ಪಾಲಿಸುವ ಮತ್ತು ಯಾವುದೇ ಅಪರಾಧ ಹಿನ್ನೆಲೆ ಇಲ್ಲದ ಕೃಷಿಕರು ಕೇವಲ ತಮ್ಮ ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಮಾತ್ರ ಬಂದೂಕು ಹೊಂದಿರುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಿರುವಾಗ ರೈತರ ಮೇಲೆ ಕಠಿಣ ನಿಬಂಧನೆಗಳನ್ನು ಹೇರದೆ, ಜಿಲ್ಲಾಡಳಿತವು ವಾಸ್ತವಿಕ ನೆಲೆಯಲ್ಲಿ ಪ್ರಸ್ತುತ ಜಾರಿಯಲ್ಲಿರುವ ಕಠಿಣ ನಿಯಮಗಳನ್ನು ಮರುಪರಿಶೀಲಿಸುವ ಜೊತೆಗೆ ಸರಳೀಕೃತಗೊಳಿಸಬೇಕು. ಗನ್ ಲೈಸನ್ಸ್ ನಿಯಮಗಳನ್ನು ಪಾಲಿಸುತ್ತಿರುವ ಅರ್ಹ ರೈತರ ಅರ್ಜಿಗಳನ್ನು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ನವೀಕರಿಸಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಕ್ಷಣ ಆದೇಶಿಸಬೇಕು” ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಜಿಲ್ಲಾಧಿಕಾರಿಗಳನ್ನು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಜೊತೆಗೆ ರೈತರ ಈ ಗಂಭೀರ ಸಮಸ್ಯೆಯನ್ನು ಡಿಜಿಪಿ, ಪಶ್ಚಿಮ ವಲಯ ಐಜಿಪಿ, ದ.ಕ. ಎಸ್ಪಿ ಹಾಗೂ ಮಂಗಳೂರು ನಗರ ಪೊಲೀಸ್ ಆಯುಕ್ತರ ಗಮನಕ್ಕೂ ತಂದಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading