Ad Widget

ಗುತ್ತಿಗಾರು  – ಬೃಹತ್ ಹಿಂದು ಸಂಗಮ ಕಾರ್ಯಕ್ರಮ : “ಆರ್ ಎಸ್.ಎಸ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ” – ನಾಗರಾಜ್ ಭದ್ರಾವತಿ : “ದೇಶದ ಐಕ್ಯತೆಗೆ ನಮ್ಮ ಕುಟುಂಬ ಜೀವನ  ವ್ಯವಸ್ಥೆಯೇ ಕಾರಣ” – ಎಂ.ಬಿ.ಸದಾಶಿವ

“ಆರ್ ಎಸ್.ಎಸ್ ವ್ಯಕ್ತಿ ನಿರ್ಮಾಣದ ಮೂಲಕ ಹಿಂದೂ ಸಮಾಜದ ಸಂಘಟನೆಯೊಂದಿಗೆ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದೆ ಎಂದು” ಮುಖ್ಯ ಭಾಷಣಕಾರರಾಗಿ ಆಗಮಿಸಿದ ಸಂಘದ ಕರ್ನಾಟಕ ಘೋಷ್ ಪ್ರಮುಖ್ ಆಗಿ ಪ್ರಸ್ತುತ ವಿಕ್ರಮ ವಾರಪತ್ರಿಕೆಯ ಸಹ ಸಂಪಾದಕ ನ.ನಾಗರಾಜ್ ಭದ್ರಾವತಿ ಹೇಳಿದರು.

ಅವರು ಗುತ್ತಿಗಾರಿನಲ್ಲಿ ಜ.18 ರಂದು ನಡೆದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು. “ಮೇಲು-ಕೀಳು ಎನ್ನುವ ಅಹಂಕಾರ ಬಿಟ್ಟು ಎಲ್ಲರನ್ನು ನಮ್ಮವರು ಎಂದು ನೋಡಬೇಕು. ಇದರಿಂದಾಗಿಯೇ ಪರಕೀಯರು ನಮ್ಮನ್ನು ಆಳುವಂತಾಯಿತು.  ನೂರು ವರ್ಷದಲ್ಲಿ ಆರ್.ಎಸ್.ಎಸ್ ಏನು ಮಾಡಿದೆ ಎನ್ನುವ ಸಂಶಯ ಕೆಲವರಲ್ಲಿದೆ. ಆರ್ ಎಸ್.ಎಸ್ ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡಿದೆ. ವ್ಯಕ್ತಿ ನಿರ್ಮಾಣದಿಂದ ಸಂಘಟನೆ, ಜತೆಗೆ ಸಮಾಜ ಬೆಳೆಯಿತು. ಹಾಗೂ ಇದರಿಂದ ರಾಷ್ಟ್ರ ಕಟ್ಟುವ ಕೆಲಸವಾಗಿದೆ, ಸೇವಾ ಕಾರ್ಯವನ್ನು ಬೆಳೆಸಿದೆ. 
ಹಿಂದೂ ಸಂಗಮದಿಂದ ಹಿಂದೂ ಸಮಾಜಕ್ಕೆ ವಿಶ್ವಾಸ ಮೂಡಿದೆ. ಕಲಿಯುಗದಲ್ಲಿ ನಾವು ಸಂಘಟಿತರಾಗಿ ಹಿಂದೂ ಸಮಾಜವನ್ನು ರಕ್ಷಿಸಬೇಕಿದೆ. ಸಂಘಕ್ಕೆ ಬಂದ ವ್ಯಕ್ತಿಯಿಂದ ಸಮಾಜದಲ್ಲಿ ಹತ್ತಾರು ಬದಲಾವಣೆಯನ್ನು ಮಾಡಲು ಸಾಧ್ಯವಾಗಿದೆ.  ಸಮಾಜವನ್ನು ಆಗಾಗ ಎಚ್ಚರಿಸುವ ಉದ್ದೇಶದಿಂದ ಪಥಸಂಚಲನ, ಹಿಂದೂ ಸಂಗಮ  ಮಾಡುತ್ತಾ ಬಂದಿದೆ. ದೇಶದಲ್ಲಿ ಒಂದು ಪರಿವರ್ತನೆ ಆಗುತ್ತಿದೆ ಅದು ಇನ್ನಷ್ಟೂ ವೇಗವಾಗಿ ಆಗಬೇಕು.  ವೇಗವರ್ಧಕವಾಗಿ ಈ ಹಿಂದೂ ಸಂಗಮ ನಡೆದಿದೆ. ಮುಂದೆ ಎಲ್ಲರನ್ನು ಸಮಾನವಾಗಿ ನೋಡುವ ರಾಮರಾಜ್ಯ ಆಗಬೇಕು” ಎಂದರು.‌

“ದೇಶದ ಐಕ್ಯತೆಗೆ ಕುಟುಂಬ ಜೀವನ ಕಾರಣ” – ಎಂ.ಬಿ.ಸದಾಶಿವ : ಹಿಂದೂ ಸಂಗಮದ ತಾಲೂಕು ನಿರ್ವಹಣಾ ಸಮಿತಿ ಅಧ್ಯಕ್ಷ ಎಂ.ಬಿ.ಸದಾಶಿವ ಮಾತನಾಡಿ “ಹಿಂದೂ ಸಂಗಮದ ಹೊಸ ಮನ್ವಂತರಕ್ಕೆ ಇಂದು ಇಲ್ಲಿ ಸಾಕ್ಷಿಯಾಗಿದೆ. ಎಲ್ಲಾ ಜನರನ್ನು, ಮನಸ್ಸನ್ನು ಬೆಸೆಯುವ ಮೂಲಕ ಹಿಂದೂ ಧರ್ಮದ ಅಭಿಮಾನವನ್ನು ಜನರಿಗೆ ತಲುಪಿಸಿದೆ. ಸಂಘವು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪಂಚ ಸೂತ್ರದ ಸಮಾಜವನ್ನು ಸಂಘಟಿಸಲು ತೀರ್ಮಾನಿಸಿದೆ. ಸಮಾನತೆ ನಮ್ಮೆಲ್ಲರ ಜೀವನ ವಿಧಾನ ಎಂಬ ಸಂಕಲ್ಪವಾಗಲಿ, ಪ್ಲಾಸ್ಟಿಕ್ ನಿರ್ಮಾಲನೆ ಪರಿಸರ ರಕ್ಷಣೆ, ಕರ್ತವ್ಯ ಪ್ರಜ್ಞೆ  ಹಾಗೂ ಕುಟುಂಬ ಜೀವನದ ಮೌಲ್ಯಗಳನ್ನು ಪಾಲಿಸಬೇಕಿದೆ. ಆದರೇ ಇತ್ತೀಚಿನ ದಿನಗಳಲ್ಲಿ ವಿಚ್ಛೇದನಗಳು ಹೆಚ್ಚಾಗುತ್ತಿದೆ.  
ನಮ್ಮ ಸಮಾಜದಲ್ಲಿ ಕೌಟುಂಬಿಕ ವ್ಯವಸ್ಥೆ ಛಿಧ್ರಗೊಳ್ಳುತ್ತಿರುವಾಗ ನಾವು ಈ ಬಗ್ಗೆ  ಎನಾದರೂ ಯೋಚನೆ ಮಾಡಲೆಬೇಕು ಎಂಬ ಸಂಕಲ್ಪ ಮಾಡಬೇಕಿದೆ. ಇದನ್ನು ನೂರು ವರ್ಷದ ಅನುಭವದ ಸಂಸ್ಥೆಯಿಂದ ಮಾತ್ರ ಮಾಡಲು ಸಾಧ್ಯ. ಕೌಟುಂಬಿಕ ಮೌಲ್ಯಗಳನ್ನು ಉಳಿಸಿಕೊಳ್ಳಬೇಕು” ಎಂದರು. “ಇದು ಒಂದು ದಿನದ ಕಾರ್ಯಕ್ರಮದವಾಗದೇ, ಇದರ ಮೌಲ್ಯಗಳನ್ನು  ಜೀವನದುದ್ದಕ್ಕೂ ಅಳವಡಿಸಿಕೊಂಡಾಗ ಮಾತ್ರ ಈ ಸಂಗಮ ಸಾರ್ಥಕವಾಗುತ್ತದೆ” ಎಂದರು.‌
“ನನ್ನನ್ನು ಅನೇಕರು ಕೇಳಿದರೂ ಯಾವುದೋ ವೇದಿಕೆಗೋ, ರಾಜಕೀಯ ಕಾರಣಕ್ಕೋ ಈ ಸಂಗಮದಲ್ಲಿ ಸೇರಿಕೊಂಡಿದ್ದೀರಿ ಎಂದು. ಆದರೇ ನಾನು ಒಬ್ಬ ಹಿಂದು ನನ್ನ ಧರ್ಮ ನನ್ನ ಹೆಮ್ಮೆ.‌ ನಾನು  ಧರ್ಮ ನಿರಪೇಕ್ಷಕತೆಯನ್ನು ಭಾವಿಸುವವನಲ್ಲ, ಇನ್ನೊಂದು ಧರ್ಮವನ್ನು ಟೀಕಿಸುವವನಲ್ಲ ಎಲ್ಲರೊಂದಿಗೂ ಸರ್ವಧರ್ಮ ಸಮಭಾವದಿಂದ ಬದುಕುವವನು. ನಾನು ಒಂದು ದೇವಸ್ಥಾನದ  ಆಡಳಿತ ಮೊಕ್ತೇಸರನಾಗಿ ಕೆಲಸ ಮಾಡ್ತೇನೆ. ಒಬ್ಬ ದೇವಸ್ಥಾನದ ಆಡಳಿತ ಮೊಕ್ತೇಸರ ಹಿಂದೂ ಸಂಗಮದಲ್ಲಿ ಭಾಗವಹಿಸದೇ ಇನ್ನೂ ಯಾವ ಸಂಗಮದಲ್ಕಿ ಭಾಗವಹಿಸಬೇಕು” ಎಂದರು.
ವೇದಿಕೆಯಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಿ.ಕೆ.ಬೆಳ್ಯಪ್ಪ ಗೌಡ, ನಿವೃತ್ತ ಶಿಕ್ಷಕ ಶಿವರಾಮ ಶಾಸ್ತ್ರಿ ಆಚಳ್ಳಿ, ಕಲಾವಿದ ರಮೆಶ್ ಮೆಟ್ಟಿನಡ್ಕ, ಹಿಂದೂ ಸಂಗಮದ ನಿರ್ವಹಣಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ, ಸಾಮಾಜಿಕ ಕಾರ್ಯಕರ್ತೆ ಚಂದ್ರಮತಿ ಪೂಂಬಾಡಿ, ನಾಟಿವೈದ್ಯೆ ಸೀತಮ್ಮ ದೇವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ಸುಳ್ಯ ತಾಲೂಕು ಕಾರ್ಯವಾಹಕ ಚಂದ್ರ ಶೇಖರ ತಳೂರು, ರಾಷ್ಟ್ರೀಯ ಸ್ವಯಂ ಸೇವಕಾ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹಕ ನ.ಸೀತಾರಾಮ, ಹಿಂದೂ ಸಂಗಮ ಸಮಿತಿಯ ಯಶೋಧ ರಾಮಚಂದ್ರ ಹಾಗೂ ಸಾವಿರಕ್ಕೂ ಮಿಕ್ಕಿ ಹಿಂದೂ ಬಾಂಧವರು ಉಪಸ್ಥಿತರಿದ್ದರು.

ಗುತ್ತಿಗಾರು ಮುತ್ತಪ್ಪ ದೈವಸ್ಥಾನದ ಬಳಿಯಿಂದ ಕುಣಿತ ಭಜನೆ, ಪೂರ್ಣಕುಂಭದೊಂದಿಗೆ ಶೋಭಯಾತ್ರೆ ನಡೆಯಿತು. ದೀಕ್ಷಿತ್ ಪೈಕ ಶಂಖನಾದ ಮೊಳಗಿಸಿದರು. ಜಯಪ್ರಕಾಶ್ ಮೊಗ್ರ ಸ್ವಾಗತಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading