Ad Widget

ಐವರ್ನಾಡು : “ಗ್ರಾಮ ಪಂಚಾಯತ್ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025” ಸಮಾರೋಪ ಸಮಾರಂಭ ; “ಅಂಕಗಳು ಯಾವತ್ತೂ ಶಾಶ್ವತವಲ್ಲ, ಭವಿಷ್ಯಕ್ಕಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು” : ಅಭಿಲಾಷಾ ಮೋಟ್ನೂರು

ಐವರ್ನಾಡು ಗ್ರಾಮ ಪಂಚಾಯತ್ ಹಾಗೂ ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ಐವರ್ನಾಡು ಇವುಗಳ ಸಂಯುಕ್ತಾಶ್ರಯದಲ್ಲಿ ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2025” ಕಾರ್ಯಕ್ರಮವು ನ.22 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಐವರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಹೇಮಾವತಿ ಅವರು ಮಾತನಾಡುತ್ತಾ “ಮಕ್ಕಳು ಕಲಿಕೆಯಲ್ಲಿ ಹಾಗೂ ಇತರೆ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಲು ಪುಸ್ತಕದ ಜ್ಞಾನ ಅತ್ಯವಶ್ಯಕ. ಈ ಜ್ಞಾನವನ್ನು ಪಡೆಯಬೇಕಾದರೆ ನಾವು ಗ್ರಂಥಾಲಯಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು” ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸುಳ್ಯ ತಾಲೂಕು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರ ಸಂಘದ ಅಧ್ಯಕ್ಷರು ಹಾಗೂ ಗುತ್ತಿಗಾರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಅಭಿಲಾಷಾ ಮೋಟ್ನೂರು ರವರು ಮಾತನಾಡುತ್ತಾ “ಅಂಕಗಳು ಯಾವತ್ತೂ ಶಾಶ್ವತವಲ್ಲ, ಭವಿಷ್ಯಕ್ಕಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು. ಪ್ರತೀದಿನ ಪುಸ್ತಕಗಳನ್ನು ಓದುತ್ತಾ ಬಂದರೆ ನಮ್ಮಲ್ಲಿ ನಾವು ಬದಲಾವಣೆಗಳನ್ನು ಕಾಣಬಹುದು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮೂಲಕ ಪ್ರತೀ ತಿಂಗಳು ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿ ನಡೆಯುವಂತಹ “ಜಾಗೃತಿ ಅರಿವು ಅಭಿಯಾನ”ದ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚೆಚ್ಚು ಭಾಗವಹಿಸಬೇಕು. ಗ್ರಂಥಾಲಯದ ಅರಿವು ಕೇಂದ್ರಗಳಲ್ಲಿ ಪುಸ್ತಕಗಳ ಜೊತೆಗೆ ಅಧ್ಯಯನ ಫೌಂಡೇಶನ್, ಅಜೀಮ್ ಪ್ರೇಮ್ ಜೀ ಫೌಂಡೇಶನ್, ಅರ್ಲಿ ಬರ್ಡ್, ಸಿ.ಎಂ.ಸಿ.ಎ ಸಂಸ್ಥೆ, ದರ್ಶಿನಿ ಸಹಾಯಕ ಸಾಧನೆಗಳು, ಶಿಕ್ಷಣ ಫೌಂಡೇಶನ್ ಹಾಗೂ ಭಾರತೀಯ ಖಗೋಳ ಬೌತ ಸಂಸ್ಥೆ ಬೆಂಗಳೂರು ಸೇರಿದಂತೆ ಮುಂತಾದವರ ಮುಖಾಂತರ ಹಲವಾರು ಚಟುವಟಿಕೆಗಳು ಸಂಪೂರ್ಣ ಉಚಿತವಾಗಿ ಲಭ್ಯವಿದೆ. ವಿದ್ಯಾರ್ಥಿಗಳು ಇವುಗಳ ಸದುಪಯೋಗವನ್ನು ಪಡೆದುಕೊಂಡು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕು” ಎಂದರು.
ಶಾಲೆಯ ಸಹಶಿಕ್ಷಕರಾದ ಅರವಿಂದ್ ರವರು ಮಾತನಾಡುತ್ತಾ “ನಮ್ಮ ಜೀವನವನ್ನು ಗುರಿಯಾಗಿಸಿಕೊಂಡು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿರದೇ ಗ್ರಂಥಾಲಯಗಳಲ್ಲಿರುವ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಲ್ಲಿ ನಾವು ಜೀವನದಲ್ಲಿ ಯಶಸ್ಸನ್ನು ಸಾಧಿಸಬಹುದು ಹಾಗೂ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು” ಎಂದರು.
ಸಹಶಿಕ್ಷಕರಾದ ಗುಣಶ್ರೀ ರವರು ಮಾತನಾಡುತ್ತಾ “ವಿಜ್ಞಾನ ಎಂದರೇನು, ಗ್ರಂಥಾಲಯದಲ್ಲಿ ವಿಜ್ಞಾನದ ಜ್ಞಾನವನ್ನು ಹೇಗೆ ಬೆಳೆಸಿಕೊಳ್ಳಬೇಕು, ವಿಜ್ಞಾನದ ಪ್ರಯೋಗಗಳನ್ನು ಹೇಗೆ ಮಾಡಬಹುದು” ಎಂಬ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.
ಗ್ರಂಥಾಲಯ ಸಲಹಾ ಸಮಿತಿ ಸದಸ್ಯರು ಹಾಗೂ ನಿವೃತ್ತ ಮುಖ್ಯ ಶಿಕ್ಷಕರಾದ ವೀರಪ್ಪ ಗೌಡ ಮೊಟ್ಟೆಮನೆ ಇವರು ಮಾತನಾಡುತ್ತಾ “ನಮ್ಮಲ್ಲಿ ಏಕಾಗ್ರತೆ ಬರಬೇಕಾದರೆ ನಾವು ದೇವರನ್ನು ನಂಬಬೇಕು. ದೇವರ ಭಯವೇ ಜ್ಞಾನದ ಆರಂಭ” ಎಂದು ಹೇಳುತ್ತಾ ದೇಶ ಸುತ್ತಿ ನೋಡು-ಕೋಶ ಓದಿ ನೋಡು ಎಂಬ ಗಾದೆ ಮಾತಿನ ಮೂಲಕ ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳ ಮಹತ್ವವನ್ನು ತಿಳಿಸುವುದರೊಂದಿಗೆ ಗ್ರಂಥಾಲಯದ ಬಗ್ಗೆ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ “ಚಿತ್ರಕಲೆ” ಹಾಗೂ “ಗ್ರಂಥಾಲಯಗಳ ಮಹತ್ವ” ಎಂಬ ವಿಷಯದ ಬಗ್ಗೆ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಹಾಗೂ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾಧಾನಕರ ಬಹುಮಾನಗಳನ್ನು ಗ್ರಾಮ ಪಂಚಾಯತ್ ವತಿಯಿಂದ ವಿತರಿಸಲಾಯಿತು. ಸುಮಾರು 45 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ನಂತರ ವೇದಿಕೆಯಲ್ಲಿ ಉಪಸ್ಥಿತರಿದ್ದವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು 110 ವಿದ್ಯಾರ್ಥಿಗಳು ಹಾಗೂ ಶಾಲೆಯ ಶಿಕ್ಷಕರುಗಳಾದ ಶ್ರೀಮತಿ ಸರಿತಾ ಹಾಗೂ ಶ್ರೀಮತಿ ಹೇಮಲತಾ ಉಪಸ್ಥಿತರಿದ್ದರು. ಅಡುಗೆ ಸಿಬ್ಬಂದಿಗಳು ಸಹಕರಿಸಿದರು.
ವಿದ್ಯಾರ್ಥಿಗಳಾದ ಪ್ರಾಪ್ತಿ, ಶ್ರಾವಣಿ, ಪ್ರತಾ ಪ್ರಾರ್ಥನೆಯನ್ನು ನೆರವೇರಿಸಿದರು.
ಗ್ರಂಥಾಲಯ ಮೇಲ್ವಿಚಾರಕರಾದ ಶ್ರೀಮತಿ ಲೀಲಾವತಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಸಮರ್ಪಿಸಿ ಸಿಹಿ ತಿಂಡಿ ವಿತರಿಸಿದರು.
ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading