Ad Widget

ಕುಕ್ಕೆ ಸುಬ್ರಹ್ಮಣ್ಯ : ಶ್ರೀ ದೇವಳಕ್ಕೆ ವಿದ್ಯಾರ್ಥಿಗಳಿಂದ ಬೃಹತ್ ಹಸಿರು ಕಾಣಿಕೆ ಸಮರ್ಪಣೆ- ಎಸ್‌.ಎಸ್‌‌.ಪಿ.ಯು ಕಾಲೇಜಿನಿಂದ 1290 ಕೆಜಿ ಅಕ್ಕಿ, 1850 ತೆಂಗಿನಕಾಯಿ, 1650 ಕೆಜಿ ತರಕಾರಿ, 261 ಕೆಜಿ ಬೆಲ್ಲ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರೋತ್ಸವದ ಪ್ರಯುಕ್ತ ಶ್ರೀ ದೇವಳದ ಆಡಳಿತಕ್ಕೊಳಪಟ್ಟ ಎಸ್‌.ಎಸ್‌.ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಹಸಿರು ಕಾಣಿಕೆಯನ್ನು ಶನಿವಾರ ಶ್ರೀ ದೇವಳಕ್ಕೆ ಅರ್ಪಿಸಿದರು.
ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಒದಗಿಸಿದ ಸುವಸ್ತುಗಳನ್ನು ಸಿಂಗರಿಸಿದ ವಾಹನಗಳಲ್ಲಿ ದೇವಳಕ್ಕೆ ಕೊಂಡೊಯ್ಯಲಾಯಿತು.
ವಿದ್ಯಾರ್ಥಿಗಳ ಸೇವೆ : 1290 ಕೆಜಿ(12 ಕ್ವಿಂಟಾಲ್ 90 ಕೆಜಿ) ಸೋನಾಮಸೂರಿ ಅಕ್ಕಿ, 1650 ಕೆಜಿ(16 ಕ್ವಿಂಟಾಲ್ 50 ಕೆಜಿ) ತರಕಾರಿ, 1850 ತೆಂಗಿನಕಾಯಿ, 261 ಕೆಜಿ ಬೆಲ್ಲ, 200 ಕೆಜಿ ಸಕ್ಕರೆ, 700 ಹಣ್ಣು ಅಡಿಕೆ,1.5 ಕೆಜಿ ಏಲಕ್ಕಿ, ದನದ ತುಪ್ಪ, ಹಿಂಗಾರ, ಜೇನು ತುಪ್ಪ, ಏಲಕ್ಕಿ, ಬಾಳೆಹಣ್ಣು, ಬಾಳೆಗೊನೆ, ಬಾಳೆ ಎಲೆ, ಕಾಳು ಮೆಣಸು, ಸೀಯಾಳ ಸಮರ್ಪಿಸಲಾಯಿತು. ಸೌತೆ, ಕುಂಬಳಕಾಯಿ, ಸೀಮೆ ಬದನೆ, ಆಲುಗೆಡ್ಡೆ, ಸಿಹಿ ಕುಂಬಳ, ಚೀನಿಕಾಯಿ, ಟೊಮೇಟೋ, ಹೀರೆಕಾಯಿ, ಅಲಸಂಡೆ, ಸುವರ್ಣಗೆಡ್ಡೆ, ಸೋರೆಕಾಯಿ, ಬದನೆ, ಕ್ಯಾರೆಟ್, ಸಹಿಗೆಣಸು ಸೇರಿದಂತೆ 1650 ಕೆಜಿ ತರಕಾರಿಗಳನ್ನು ಶ್ರೀ ದೇವರಿಗೆ ಅರ್ಪಿಸಲಾಯಿತು.
ವಿದ್ಯಾರ್ಥಿಗಳ ಸೇವೆ : ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಮನೆಯಿಂದ ತಂದ ಸುವಸ್ತುಗಳನ್ನು ಶ್ರೀ ದೇವರಿಗೆ ಅರ್ಪಿಸಿದರು. ಅಲ್ಲದೆ ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ ಕೂಡಾ ಸೇವೆ ನೆರವೇರಿಸಿದರು. ವಿದ್ಯಾರ್ಥಿಗಳು ತಾವು ತಂದ ವಸ್ತುಗಳನ್ನು ತಮ್ಮ ತರಗತಿಯಲ್ಲಿ ಒಟ್ಟಾಗಿ ಇರಿಸಿದರು. ಬಳಿಕ ಎಲ್ಲವನ್ನೂ ಒಟ್ಟಾಗಿ ರಂಗ ಮಂದಿರಕ್ಕೆ ತಂದು ಇರಿಸಲಾಯಿತು. ಅಲ್ಲದೆ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ವರ್ಗ, ಹಿರಿಯ ವಿದ್ಯಾರ್ಥಿ ಗಗನ್ ಮತ್ತು ತಂಡ ನೀಡಿದ ಧನ ಕಾಣಿಕೆಯಲ್ಲಿ ಅಕ್ಕಿ, ಬೆಲ್ಲ, ಸಕ್ಕರೆ, ತರಕಾರಿ ಖರೀದಿಸಿ ಕಾಲೇಜಿಗೆ ತರಲಾಯಿತು.
ಪ್ರಾರ್ಥನೆ : ರಂಗ ಮಂದಿರದಲ್ಲಿ ಎಲ್ಲಾ ಸುವಸ್ತುಗಳನ್ನು ಒಟ್ಟಾಗಿ ಇರಿಸಲಾಯಿತು. ಕಾಲೇಜಿನ ಪ್ರಾಚಾರ್ಯ ಸೋಮಶೇಖರ್ ನಾಯಕ್ ದೀಪ ಬೆಳಗಿ ದೇವತಾ ಪ್ರಾರ್ಥನೆ ಮಾಡಿದರು. ಅಲ್ಲದೆ ಸುವಸ್ತುಗಳಿಗೆ ಹಿರಿಯ ಸಹಶಿಕ್ಷಕ ಎಂ.ಕೃಷ್ಣ ಭಟ್ ಪೂಜೆ ನೆರವೇರಿಸಿದರು. ನಂತರ ಅಲಂಕರಿಸಿದ ವಾಹನದಲ್ಲಿ ಹಸಿರು ಕಾಣಿಕೆಯನ್ನು ಶ್ರೀ ದೇವಳಕ್ಕೆ ಕೊಂಡೊಯ್ಯಲಾಯಿತು. ಈ ಸಂದರ್ಭ ಪ್ರೌಢಶಾಲಾ ಮುಖ್ಯಗುರು ನಂದಾ ಹರೀಶ್, ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಸೇರಿದಂತೆ ಉಪನ್ಯಾಸಕರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಉಪನ್ಯಾಸಕರಾದ ಮನೋಜ್ ಕುಮಾರ್.ಬಿ.ಎಸ್ ಮತ್ತು ರತ್ನಾಕರ ಸುಬ್ರಹ್ಮಣ್ಯ ಹಸಿರು ಕಾಣಿಕೆ ವ್ಯವಸ್ಥೆಯ ಜವಬ್ದಾರಿ ವಹಿಸಿಕೊಂಡಿದ್ದರು.
ದೇವಳಕ್ಕೆ ಹಸ್ತಾಂತರ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಅವರು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರಿಗೆ ಹಸಿರು ಕಾಣಿಕೆಯನ್ನು ಹಿಂಗಾರ ನೀಡುವ ಮೂಲಕ ಹಸ್ತಾಂತರಿಸಿ ಶ್ರೀ ದೇವಳಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೌಮ್ಯಾ ಭರತ್, ಪ್ರವೀಣ ರೈ ಮರುವಂಜ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಲೋಲಾಕ್ಷ ಕೈಕಂಬ, ಪವನ್.ಎಂ.ಡಿ, ಶ್ರೀ ದೇವಳದ ಶ್ರೀಮಂತ ಜೋಳದಪ್ಪಗೆ, ಎನ್.ಸಿ.ಸುಬ್ಬಪ್ಪ, ಶಂಕರಣ್ಣ, ಮಂಜುನಾಥ್ ಉಪಸ್ಥಿತರಿದ್ದರು.

“ವಿದ್ಯಾರ್ಥಿಗಳು ಸಲ್ಲಿಸಿದ ಈ ಬೃಹತ್ ಹಸಿರು ಕಾಣಿಕೆ ಸೇವೆಯು ದೇವರಿಗೆ ಪ್ರೀತಿಪಾತ್ರವಾಗುತ್ತದೆ. ಭವಿಷ್ಯದ ಪ್ರಗತಿಗೆ ಇವರ ಈ ಸೇವೆ ಪೂರಕವಾಗಲಿ ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿಗಳಿಗೆ ಸದಾ ಕುಕ್ಕೆ ಸುಬ್ರಹ್ಮಣ್ಯನ ಆಶೀರ್ವಾದ ಇರಲಿ” : ಹರೀಶ್.ಎಸ್.ಇಂಜಾಡಿ, ಅಧ್ಯಕ್ಷರು ವ್ಯವಸ್ಥಾಪನಾ ಸಮಿತಿ

“ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು, ಬೋಧಕ ಬೋದಕೇತರರು ಸಲ್ಲಿಸಿದ ಈ ಸೇವೆಯು ಭಗವಂತನ ಕೃಪೆಗೆ ಪಾತ್ರವಾಗಲಿ. ವಿದ್ಯಾಸಂಸ್ಥೆಯ ಅಭಿವೃದ್ಧಿ ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಲಿ” : ಅರವಿಂದ ಅಯ್ಯಪ್ಪ ಸುತಗುಂಡಿ, ಕಾರ್ಯನಿರ್ವಹಣಾಧಿಕಾರಿಗಳು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading