Ad Widget

ಸುಬ್ರಹ್ಮಣ್ಯ : ಚಂಪಾಷಷ್ಠಿ ಮಹೋತ್ಸವ ಪೂರ್ವಭಾವಿ ಸಭೆ – “ಬ್ರಹ್ಮರಥೋತ್ಸವ ಎಳೆಯುವ ಸಂದರ್ಭದಲ್ಲಿ ಯಾವುದೇ ಗೊಂದಲಗಳು ಉಂಟಾಗದಂತೆ ಕ್ರಮ ಕೈಗೊಳ್ಳಬೇಕು” : ದ.ಕ ಜಿಲ್ಲಾಧಿಕಾರಿ ದರ್ಶನ್.ಹೆಚ್.ವಿ – “ಹೆಚ್ಚುವರಿ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿ ಅದು ಶಾಶ್ವತವಾಗಿ ಇರುವಂತೆ ಕ್ರಮ ಕೈಗೊಳ್ಳಬೇಕು” : ದ.ಕ ಜಿಲ್ಲಾ ಎಸ್.ಪಿ ಡಾ. ಅರುಣ್.ಕೆ

ಸುಬ್ರಹ್ಮಣ್ಯ ನ.05 : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಚಂಪಾಷಷ್ಠಿ ಮಹೋತ್ಸವ ರಥೋತ್ಸವ ಪೂರ್ವಭಾವಿ ಸಭೆ ಬುಧವಾರ ದೇವಸ್ಥಾನದ ಆಡಳಿತ ಕಚೇರಿ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ದರ್ಶನ್.ಹೆಚ್.ವಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಚಂಪಾಷಷ್ಠಿ ಮಹೋತ್ಸವದ ಬಗ್ಗೆ ಚರ್ಚೆ ನಡೆಯಿತು. ಜಿಲ್ಲಾಧಿಕಾರಿಗಳಾದ ದರ್ಶನ್ ಮಾತನಾಡಿ “ಬ್ರಹ್ಮರಥೋತ್ಸವ ಎಳೆಯುವ ವೇಳೆ ಯಾವುದೇ ಗೊಂದಲ ಉಂಟಾಗದಂತೆ ಕ್ರಮಕೈಗೊಳ್ಳಬೇಕು. ಮುಖ್ಯವಾಗಿ ರಥ ಎಳೆಯಲು ಪಾಸ್ ವಿತರಿಸಲು ಮಾನದಂಡ  ಮಾಡಿಕೊಂಡು ಅದರ ಪ್ರಕಾರವೇ ಪಾಸ್ ವಿತರಿಸಿ, ಎಷ್ಟು ಮಂದಿಗೆ ಪಾಸ್ ವಿತರಿಸುತ್ತೀರಿ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ಅದರಂತೆ ಪೂರ್ವ ಕ್ರಮ ಕೈಗೊಳ್ಳಿ” ಎಂದು ನಿರ್ದೇಶನ ನೀಡಿದರು.

ಹೆಚ್ಚುವರಿ ಸಿಸಿ ಕ್ಯಾಮೆರಾ ಇರಲಿ : ಎಸ್ಪಿ ಡಾ.ಅರುಣ್ ಮಾತನಾಡಿ “ಚಂಪಾಷಷ್ಠಿ ಮಹೋತ್ಸವ ಹಿನ್ನಲೆಯಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಈಗಾಗಲೇ ಸಿಸಿ ಕ್ಯಾಮೆರಾಗಳು ಇದ್ದರೂ ಪೊಲೀಸ್ ಇಲಾಖೆಯ ನಿರ್ದೇಶನದಂತೆ ಹೆಚ್ಚುವರಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಇದು ಶಾಶ್ವತವಾಗಿ ಇರುವಂತೆ ಕ್ರಮಕೈಗೊಳ್ಳಬೇಕು. ಸಿಸಿ ಕ್ಯಾಮೆರಾ ಅಳವಡಿಕೆಯಿಂದ ಭದ್ರತೆ, ಸುರಕ್ಷತೆಗೆ ಪೂರಕವಾಗಲಿದೆ” ಎಂದರು. “ಪಾರ್ಕಿಂಗ್ ಸಂಬಂಧಿಸಿದಂತೆ ಜಾಗಗಳನ್ನು ಗುರುತಿಸಿ ಅಲ್ಲೇ ವಾಹನ ನಿಲುಗಡೆಗೆ ಸಿಬ್ಬಂದಿ ನಿಯೋಜಿಸಬೇಕು, ಸ್ವಯಂ ಸೇವಕರ ಸಹಕಾರ ಮಾಡಬೇಕು” ಎಂದು ತಿಳಿಸಿದರು.

ಉರುಳು ಸೇವೆಗೆ ವ್ಯವಸ್ಥೆ : “ಬೀದಿ ಉರುಳು ಸೇವೆ ಸಂದರ್ಭದಲ್ಲಿ ಭಕ್ತರಿಗೆ ಪೂರಕ ವ್ಯವಸ್ಥೆ ಮಾಡುವಂತೆ” ಜಿಲ್ಲಾಧಿಕಾರಿ ಸೂಚಿಸಿದರು. ಎಡೆಸ್ನಾನ ಸೇವೆ ಬಗ್ಗೆಯೂ ಮಾಹಿತಿ ನೀಡಲಾಯಿತು. ಈ ವೇಳೆ ಎಸ್ಪಿ ಡಾ.ಅರುಣ್ ಅವರು ಹೈಕೋರ್ಟ್ ನಿರ್ದೇಶನದಂತೆ ಸೇವೆ ನಡೆಸಬೇಕು ಎಂದು ತಿಳಿಸಿದರು.
ಸ್ವಚ್ಚತೆ, ಸ್ವಯಂ ಸೇವಕರು, ಭೋಜನ ಪ್ರಸಾದ ವಿತರಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲಾಯಿತು. ಪ್ರಮುಖರು ಸಲಹೆ ಸೂಚನೆಗಳನ್ನು ನೀಡಿದರು.

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು.ಭಾಗೀರಥಿ ಮುರುಳ್ಯ, ಎಸ್ಪಿ ಡಾ.ಅರುಣ್, ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್, ಡಿವೈಎಸ್ಪಿ ಅರುಣ್ ನಾಗೇಗೌಡ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಕಲ್ಲಾಜೆ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾಧ ಅರವಿಂದ ಅಯ್ಯಪ್ಪ ಸುತಗುಂಡಿ, ಕಡಬ ತಹಶೀಲ್ದಾರ್ ಪ್ರಭಾಕರ ಖಜೂರೆ, ದೇವಸ್ಥಾನದ ವ್ಯಪಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸಮಿತಿ ಸದಸ್ಯರಾದ ಅಶೋಕ್ ನೆಕ್ರಾಜೆ, ಶ್ರೀಮತಿ ಲೀಲಾ ಮನಮೋಹನ್, ಅನಿಲ್ ಕುಮಾರ್, ಸೌಮ್ಯ ಭರತ್, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಮಲ್ಲಿಕಾ ಪಾಕ್ಕಳ, ಮಾಸ್ಟರ್ ಪ್ಲಾನ್ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ, ಪವನ್ ಎಂ.ಡಿ ಸೇರಿದಂತೆ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು, ಗ್ರಾಮ ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಅರವಿಂದ ಅಯ್ಯಪ್ಪ ಸುತಗುಂಡಿ ಸ್ವಾಗತಿಸಿ, ಹರೀಶ್ ಇಂಜಾಡಿ ವಂದಿಸಿದರು.

ಅಧ್ಯಕ್ಷತೆ ಗೊಂದಲ – ಚರ್ಚೆ : ಸಭೆಯ ಅಧ್ಯಕ್ಷತೆ ಯಾರಾಗಬೇಕು ಎಂದು ಸಭೆ ಅಂತ್ಯಕ್ಕೆ ಚರ್ಚೆ ನಡೆಯಿತು. ಸಭೆ ನೋಟೀಸ್ ನಲ್ಲಿ ಸುಳ್ಯ ವಿಧಾನ ಸಭಾ ಶಾಸಕರಾದ ಕು.ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿರುವುದಾಗಿ ನೊಟೀಸು ನೀಡಲಾಗಿತ್ತು. ಆದರೆ ಸಭೆಯ ಆರಂಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಅವರ ನೇತೃತ್ವದಲ್ಲಿ ಸಭೆಯಲ್ಲಿ ನಡೆಯಲಿರುವುದಾಗಿ  ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸಭೆಗೆ ತಿಳಿಸಿದರು. ಸಭೆಯ ಅಂತ್ಯದಲ್ಲಿ ಶಾಸಕರು “ಮಾತನಾಡುವ ಸಮಯ ಬಂದಾಗ ಎಲ್ಲರೂ ತಮ್ಮ ಹಕ್ಕು ಮಾತನಾಡುತ್ತೀರಿ. ಈ ಸಭೆಯಲ್ಲಿ ಸಭೆ ಅಧ್ಯಕ್ಷತೆ ಯಾರಿಗೆ” ಎಂದು ಪ್ರಶ್ನಿಸಿದರು. ಈ ವೇಳೆ ಇದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಗಳು “ಪೂರ್ವಭಾವಿ ಸಭೆಗೆ ಪ್ರೋಟೋಕಾಲ್ ಇಲ್ಲ. ಇಲ್ಲಿನ ಆಡಳಿತ ನಿರ್ಧಾರವೇ ಅಂತಿಮ” ಎಂದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading