Ad Widget

ಡೀಮ್ಡ್ ಅರಣ್ಯ ಜಮೀನು ಸರ್ವೇಗೆ ರೈತರ ವಿರೋಧ ; “ಅಧಿಕಾರಿ ವರ್ಗದಿಂದ ಕೃಷಿ ವಿರೋಧಿ ನೀತಿ-ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸರ್ವೇ ನಿಲ್ಲಿಸಬೇಕು” : ಕಿಶೋರ್ ಶಿರಾಡಿ

“ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡದೆ ಡೀಮ್ಡ್ ಅರಣ್ಯ ಜಮೀನಿನ ಜಂಟಿ ಸರ್ವೇಗೆ ಮುಂದಾಗಿರುವ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯ ಸರ್ವೇ ಇಲಾಖೆಯ ಅಧಿಕಾರಿಗಳ ಧೋರಣೆ ರೈತ ವಿರೋಧಿಯಾಗಿದೆ” ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದರು.
ಸುಬ್ರಹ್ಮಣ್ಯದಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು “ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳಿಗೆ ಮಾಹಿತಿ ನೀಡದೇ ಅಧಿಕಾರಿಗಳು ಸರ್ವೇ ನಡೆಸಲು ಸುತ್ತೋಲೆ ಹೊರಡಿಸಿರುವುದನ್ನು ನಾವು ವಿರೋಧಿಸುತ್ತೇವೆ. ಈ ರೀತಿಯ ಸರ್ವೇ ವ್ಯವಸ್ಥೆ ರೈತರಿಗೆ ಮಾರಕವಾಗಿದೆ. ತಕ್ಷಣ ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಈ ವ್ಯವಸ್ಥೆಯನ್ನು ನಿಲ್ಲಿಸಬೇಕು” ಎಂದರು.
“ಪ್ಲಾಟಿಂಗ್ ಅಗದ ರೈತರ ಭೂಮಿಯನ್ನು ಪ್ಲಾಟಿಂಗ್ ಮಾಡಿಕೊಡಬೇಕು. ಹಲವು ವರ್ಷಗಳಿಂದ ಕೃಷಿ ಮಾಡಿಕೊಂಡು ನಿವೇಶನ ಹೊಂದಿರುವ ರೈತರಿಗೆ ಹಕ್ಕುಪತ್ರ ನೀಡಬೇಕು. ಡೀಮ್ಡ್ ಅರಣ್ಯ ಪ್ರದೇಶದಲ್ಲಿರುವ ರೈತರಿಗೆ ತೊಂದರೆ ನೀಡುವ ಸಾಧ್ಯತೆ ದಟ್ಟವಾಗಿದೆ. ರೈತರಿಗೆ ತೊಂದರೆ ಅಗುವ ಈ ವ್ಯವಸ್ಥೆಯನ್ನು ನಾವು ವಿರೋಧಿಸುತ್ತೇವೆ” ಎಂದು ಅವರು ಹೇಳಿದರು.
“ಅಧಿಕಾರಿಗಳು ಕೃಷಿ ವಿರೋಧಿ ನೀತಿಯನ್ನು ಈ ರೀತಿಯಾಗಿ ಅಳವಡಿಸಿಕೊಳ್ಳುತ್ತಿದ್ದಾರೆ. ರೈತರಿಗೆ ತೊಂದರೆ ನೀಡಿ ಕೃಷಿ ಮಾಡದಂತೆ ಮಾಡುವ ವ್ಯವಸ್ಥೆ ಇದಾಗಿದೆ. ಜಿಲ್ಲಾಡಳಿತ ಎಚ್ಚೆತ್ತುಕೊಂಡು ಸರ್ವೇ ನಿಲ್ಲಿಸಬೇಕು. ಶಾಸಕರು ಸೇರಿದಂತೆ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಸರ್ವೇ ಮಾಡಬೇಕು. ಈ ಬಗ್ಗೆ ವಿಶೇಷ ಗ್ರಾಮಸಭೆ ಕರೆದು ಸಾರ್ವಜನಿಕರಿಗೆ ಮತ್ತು ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡಬೇಕು” ಎಂದು ಆಗ್ರಹಿಸಿದರು.
“ಡೀಮ್ಡ್ ಫಾರೆಸ್ಟ್ ಜಮೀನುಗಳ ಸಮೀಕ್ಷೆ ನಡೆಸಲು ಜಂಟಿ ಪರಿಶೀಲನಾ ತಂಡಗಳನ್ನು ರಚಿಸಿ ಗ್ರಾಮಮಟ್ಟದಲ್ಲಿ ಕ್ಷೇತ್ರ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿದೆ. ತಾಲ್ಲೂಕು ಜಂಟಿ ಪರಿಶೀಲನಾ ಸಮಿತಿ ರಚಿಸಿ ಡೀಮ್ಡ್ ಫಾರೆಸ್ಟ್ ಜಮೀನುಗಳನ್ನು ಸಮೀಕ್ಷೆ ನಡೆಸಲು ಜಂಟಿ ಪರಿಶೀಲನಾ ತಂಡಗಳನ್ನು ರಚಿಸಿ ಗ್ರಾಮ ಮಟ್ಟದಲ್ಲಿ ಕ್ಷೇತ್ರ ಪರಿಶೀಲನೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾಗಿದೆ. ಸೆ.20ರಿಂದ ಅ.21ರೊಳಗೆ ವಾಸ್ತವ್ಯದ ಮನೆ, ಕೃಷಿ, ಸಾರ್ವಜನಿಕ ಕಟ್ಟಡಗಳಿರುವ ಬಗ್ಗೆ, ಸಾರ್ವಜನಿಕ ಉದ್ದೇಶಗಳಿಗೆ ಜಮೀನು ಕಾದಿರಿಸುವ ಮತ್ತು ಸಾರ್ವಜನಿಕ ಉದ್ದೇಶಕ್ಕೆ ಕಾಯ್ದಿರಿಸಲು ಲಭ್ಯವಿರುವ ಜಮೀನುಗಳ ವಾಸ್ತವದ ಸ್ಥಿತಿಗತಿಯ ಬಗ್ಗೆ ನಕ್ಷೆಯಲ್ಲಿ ಗುರುತಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಲಾಗಿದೆ” ಎಂದು ಕಿಶೋರ್ ಶಿರಾಡಿ ಅವರು ಹೇಳಿದರು.
“ಮೂಲಭೂತ ಸೌಕರ್ಯಗಳನ್ನು ಒದಗಿಸಲು ಡೀಮ್ಡ್ ಫಾರೆಸ್ಟ್ ಅನ್ನು ಕಾಯ್ದಿರಿಸಬೇಕು. ವ್ಯವಸ್ಥಿತವಾಗಿ ಸರ್ವೇ ಮಾಡಬೇಕು. ತಪ್ಪಿದರೆ ಈ ಯೋಜನೆ ವಿರುದ್ಧ ರೈತರೆಲ್ಲರನ್ನೂ ಸೇರಿಸಿಕೊಂಡು ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಹೋರಾಟ ಮಾಡಲಾಗುವುದು” ಎಂದು ಕಿಶೋರ್ ಶಿರಾಡಿ ಅವರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಪ್ರಮುಖರಾದ ಜಯಪ್ರಕಾಶ್ ಕೂಜುಗೋಡು, ರಮಾನಂದ ಎಣ್ಣೆಮಜಲು, ಮನೀಶ್ ಪದೇಲ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ಗಿರೀಶ್ ಅಚಾರ್ಯ ಪೈಲಾಜೆ, ದಿಲೀಪ್ ಉಪ್ಪಳಿಕೆ ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading