Ad Widget

“ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ” : ಎಸ್.ಐ. ಕಾರ್ತಿಕ್

ಸುಬ್ರಹ್ಮಣ್ಯದಲ್ಲಿ ವಸತಿಗೃಹ ಮಾಲಕ-ನಿರ್ವಾಹಕರ ಸಭೆ

ಸುಬ್ರಹ್ಮಣ್ಯ ಆಗಸ್ಟ್ 6 : “ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ದೇವರ ದರ್ಶನ ಹಾಗೂ ಹರಕೆ ತೀರಿಸಲು ಬರುತ್ತಾರೆ, ಭಕ್ತಾದಿಗಳಿಗೆ ರಾತ್ರಿ ತಂಗಲು ಈ ದೇವಳದ ವಸತಿಗೃಹಗಳು ಕಡಿಮೆ ಇರುವುದರಿಂದ ಖಾಸಗಿ ವಸತಿಗೃಹಗಳು ಕೊಠಡಿ ನೀಡಿ ತಂಗಲು ವ್ಯವಸ್ಥೆ ಕಲ್ಪಿಸಿರುವುದು ಸರ್ವೇಸಾಮಾನ್ಯ. ಆದರೆ ಖಾಸಗಿ ಅನಧಿಕೃತ ವಸತಿಗೃಹಗಳು ಭಕ್ತಾದಿಗಳಿಗೆ ಕಿರುಕುಳ ನೀಡುವುದು, ಸೌಜನ್ಯತೆಯಿಂದ ವರ್ತಿಸದೇ ಇರುವುದು ಕಂಡುಬಂದ ಹಿನ್ನೆಲೆಯಲ್ಲಿ ಅಂತಹ ವಸತಿಗೃಹಗಳ ಮಾಲಕರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ನಾವು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳಕ್ಕೆ ಬರುವ ಭಕ್ತಾದಿಗಳ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡುತ್ತೇವೆ” ಎಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಉಪನಿರೀಕ್ಷಕರಾದ ಕಾರ್ತಿಕ್ ರವರು ಹೇಳಿದರು.
ಅವರು ಬುಧವಾರ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಖಾಸಗಿ ವಸತಿಗೃಹಗಳ ಮಾಲಕರು ಹಾಗೂ ನಿರ್ವಾಹಕರ ಸಭೆಯಲ್ಲಿ ಮಾಹಿತಿ ನೀಡುತ್ತಾ ಮಾತನಾಡಿದರು. ಇದಲ್ಲದೆ ಎಸ್.ಐ ಅವರು ವಸತಿಗೃಹಗಳ ಮಾಲಕರಿಗೆ ಕಡ್ಡಾಯವಾಗಿ ಕೆಲವು ಸೂಚನೆಗಳನ್ನು ನೀಡಿದ್ದು,
1) ವಸತಿಗೃಹದಲ್ಲಿ ತಂಗುವ ಭಕ್ತಾದಿಗಳೊಂದಿಗೆ ಸೌಜನ್ಯದಿಂದ ವರ್ತಿಸಬೇಕು, ಅನುಚಿತವಾಗಿ ನಡೆದುಕೊಳ್ಳಬಾರದು.
2) ಭಕ್ತಾದಿಗಳು ಏಕಾಂಗಿಯಾಗಿ ಅಥವಾ ಒಬ್ಬರೇ ಕ್ಷೇತ್ರಕ್ಕೆ ಬಂದಲ್ಲಿ ಅವರ ಸಂಪೂರ್ಣ ಮಾಹಿತಿ ಪಡೆದುಕೊಳ್ಳದೇ ಕೊಠಡಿ ನೀಡಬಾರದು.
3) ವಾಡಿಕೆಯಲ್ಲಿ ಇರುವುದಕ್ಕಿಂತ ಅಧಿಕ ಬಾಡಿಗೆ ವಸೂಲಿ ಮಾಡಬಾರದು.
4) ವಸತಿಗೃಹಗಳ ಮಾಲಕರು ಲೈಸೆನ್ಸ್ ಬಿಲ್ ಪುಸ್ತಕ, ರಿಜಿಸ್ಟರ್ ಪುಸ್ತಕ, ಆಧಾರ್ ಕಾರ್ಡ್, ಸಿ.ಸಿ ಕ್ಯಾಮೆರಾ ಅಳವಡಿಸಿರಬೇಕು.
5) ಕೊಠಡಿ ನೀಡುವ ಬಗ್ಗೆ ದಲ್ಲಾಳಿ ಕೆಲಸ ಯಾರು ಮಾಡಬಾರದು.
6) ಮಹಿಳಾ ಭಕ್ತಾದಿಗಳಿಗೆ ಕಿರುಕುಳ ನೀಡುವುದು, ಅಶ್ಲೀಲ ಮೆಸೇಜ್ ಗಳನ್ನು ಕಳಿಸುವುದನ್ನು ಮಾಡಬಾರದು.
7) ಶ್ರೀ ದೇವಳದ ವಸತಿಗೃಹದ ಎದುರುಗಡೆ ರೂಂ ಕರೆಯಬಾರದು.
8) ಪ್ರತಿ ಖಾಸಗಿ ವಸತಿಗೃಹ ದವರು ಅವರ ಸ್ಥಳದಲ್ಲಿಯೇ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು.
9) ವಸತಿಗೃಹದಲ್ಲಿ ಏನೇ ಸಮಸ್ಯೆಗಳು ಬಂದರೂ ಪೊಲೀಸ್ ಸ್ಟೇಷನ್ ಗೆ ಮಾಹಿತಿ ತಿಳಿಸಿ ಅಥವಾ ಕಂಪ್ಲೇಂಟ್ ನೀಡಬೇಕು.
10) ಈ ಮೇಲಿನ ಸೂಚನೆಗಳನ್ನು ಪಾಲಿಸದೆ ಇದ್ದ ವಸತಿಗೃಹದ ಮಾಲಕರನ್ನೇ ಪ್ರಥಮ ಆರೋಪಿಯನ್ನಾಗಿ ಮಾಡಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಸುಬ್ರಹ್ಮಣ್ಯದ ಖಾಸಗಿ ವಸತಿಗೃಹಗಳ ಮಾಲಕರು, ನಿರ್ವಾಹಕರು ಹಾಗೂ ಸಹಾಯಕರು ಹಾಜರಿದ್ದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಜಾತ ಕಲ್ಲಾಜೆ ಸಭಾಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷರಾದ ರಾಜೇಶ್ ಎನ್.ಎಸ್, ಸದಸ್ಯರಾದ ದಿಲೀಪ್ ಉಪ್ಪಳಿಕೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನಕ್ರಾಜೆ, ಸೌಮ್ಯ ಭರತ್, ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಗ್ರಾಮಪಂಚಾಯತ್ ಮಾಜಿ ಸದಸ್ಯರಾದ ಶಿವರಾಮ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಹೇಶ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯದರ್ಶಿ ಮೋನಪ್ಪ.ಡಿ ಧನ್ಯವಾದ ಸಮರ್ಪಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading