Ad Widget

ಅಮರ ಸುದ್ದಿ ಸ್ಪೆಷಲ್ ರಿಪೋರ್ಟ್

ಹೆಚ್ಚುತ್ತಿವೆ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು…!

ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವುದನ್ನು ತಡೆಗಟ್ಟಲು ಗ್ರಾಮ ಪಂಚಾಯತ್ ಗಳು ಹಾಗೂ ಸ್ಥಳೀಯರು ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬಹುದು…!?

ಇಲ್ಲಿದೆ ಉತ್ತರ…

✍️ಉಲ್ಲಾಸ್ ಕಜ್ಜೋಡಿ

ಇತ್ತೀಚಿನ ದಿನಗಳಲ್ಲಿ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು ಹೆಚ್ಚುತ್ತಲೇ ಹೋಗುತ್ತಿವೆ. ಈಗೀಗ ನಮಗೆ ರಸ್ತೆ ಬದಿಗಳಲ್ಲಿ ಎಲ್ಲೆಂದರಲ್ಲಿ ನಾಯಿಗಳು, ಬೆಕ್ಕುಗಳು, ಚಿಕ್ಕಚಿಕ್ಕ ಮರಿಗಳು ಹಾಗೂ ಕೆಲವೊಮ್ಮೆ ದನ-ಕರುಗಳು ಕೂಡ ಕಾಣಸಿಗುತ್ತವೆ. ಅದರಲ್ಲಿ ಕೆಲವು ದನ-ಕರುಗಳು ಮೇಯಲು ಬಿಟ್ಟಿದ್ದೂ ಇರಬಹುದು, ಹಾಗೆಂದು ಎಲ್ಲಾ ದನ-ಕರುಗಳನ್ನು ಮೇಯಲು ಬಿಟ್ಟಿದ್ದು ಎಂದು ಹೇಳಲಾಗುವುದಿಲ್ಲ…
ಈ ನಾಯಿ, ಬೆಕ್ಕು, ದನ-ಕರುಗಳನ್ನು ಯಾಕಾಗಿ ರಸ್ತೆ ಬದಿಯಲ್ಲಿ ತಂದು ಬಿಟ್ಟಿರಬಹುದು ಎಂದು ನಾವು ಯೋಚಿಸಿದಾಗ ನಮಗೆ ಸಿಗುವ ಉತ್ತರ “ಸಾಕಲು ಕಷ್ಟವಾಗುತ್ತದೆ” ಎಂಬ ಮಾತು. ಸಾಕಲು ಕಷ್ಟವಾಗುತ್ತದೆ ಎಂದಾದರೆ ಸಾಕುಪ್ರಾಣಿಗಳನ್ನು ಮನೆಗೆ ತೆಗೆದುಕೊಂಡು ಬರುವುದಾದರೂ ಏಕೆ..? ತಂದ ನಂತರ ಅವುಗಳು ಮರಿ ಹಾಕಿದಾಗ ಸಾಕಲು ಕಷ್ಟವಾಗುತ್ತದೆ ಎಂದು ಅವುಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವುದಾದರೂ ಏಕೆ..? ಸಾಕುಪ್ರಾಣಿಗಳನ್ನು ಸಾಕುವುದು ಕಷ್ಟ, ಅವುಗಳು ಮರಿ ಹಾಕಿದಾಗ ಅವುಗಳನ್ನು ನೋಡಿಕೊಳ್ಳುವುದು ಕಷ್ಟ ಎಂದಾದರೆ ಅವುಗಳನ್ನು ಮನೆಗೆ ತರಲೇಬಾರದು. ಏಕೆಂದರೆ ಇನ್ನೆಲ್ಲೋ, ಯಾರದ್ದೋ ಮನೆಯಲ್ಲಿ ನೆಮ್ಮದಿಯಾಗಿದ್ದ ಅವುಗಳನ್ನು ನಾವುಗಳು ನಮ್ಮ ಮನೆಗೆ ತೆಗೆದುಕೊಂಡು ಬಂದು ಮುಂದೊಂದು ದಿನ ಸಾಕಲು ಕಷ್ಟ ಎಂಬ ಸಬೂಬು ಹೇಳಿ ರಸ್ತೆ ಬದಿಯಲ್ಲಿ ಬಿಟ್ಟು ಅಲ್ಲಿ ಅವುಗಳು ಹೊಟ್ಟೆಗೆ ಆಹಾರವಿಲ್ಲದೆಯೋ ಅಥವಾ ವಾಹನಗಳ ಅಡಿಗೆ ಸಿಲುಕಿಯೋ ಸಾವನ್ನಪ್ಪುವ ಬದಲು ಅವುಗಳು ಮುಂಚೆ ಎಲ್ಲಿದ್ದವೋ ಅಲ್ಲೇ ಖುಷಿಯಾಗಿರಲಿ ಬಿಡಿ…
ಮನುಷ್ಯರು ಎನಿಸಿಕೊಂಡ ನಾವುಗಳು ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಮೊದಲು ಒಂದು ಮಾತನ್ನು ಯೋಚಿಸಬೇಕು ಅದೇನೆಂದರೆ “ಆ ಸಾಕುಪ್ರಾಣಿಗಳೂ ಕೂಡ ನಮ್ಮಂತೆಯೇ ಒಂದು ಜೀವ, ಅವುಗಳಿಗೂ ಕೂಡ ನೋವು-ಹಸಿವು ಎಲ್ಲವೂ ಇರುತ್ತದೆ.” ಸಾಕುಪ್ರಾಣಿಗಳು ನಮ್ಮಿಂದ ಹೆಚ್ಚೇನೂ ಬಯಸುವುದಿಲ್ಲ, “ಅವು ನಮ್ಮಿಂದ ಬಯಸುವುದು ಒಂದಿಷ್ಟು ಪ್ರೀತಿ ಹಾಗೂ ಮೂರು ಹೊತ್ತು ಆಹಾರವಷ್ಟೇ.” “ನಾವು ನೀಡುವ ಆ ಒಂದು ಹಿಡಿ ಪ್ರೀತಿ ಹಾಗೂ ಮೂರು ಹಿಡಿ ಆಹಾರಕ್ಕೆ ಅವುಗಳು ನಮಗೆ ಜೀವನಪೂರ್ತಿ ಬೆಟ್ಟದಷ್ಟು ಪ್ರೀತಿಯನ್ನು ನೀಡುತ್ತವೆ.” ಅವುಗಳಿಗೆ ನಮ್ಮಿಂದ ಇಷ್ಟನ್ನು ಕೊಡಲಾಗುವುದಿಲ್ಲ ಎಂದಮೇಲೆ ನಾವು ಮನುಷ್ಯರಾಗಿ ಹುಟ್ಟಿ ಪ್ರಯೋಜನವಾದರೂ ಏನು ಅಲ್ಲವೇ…!?
ಆದರೆ ವಾಸ್ತವ ಏನೆಂದರೆ ಯಾರೆಷ್ಟೇ ಹೇಳಿದರೂ ಕೂಡ ಕೆಲವು ವ್ಯಕ್ತಿಗಳು ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಬುದ್ಧಿಯನ್ನು ಎಂದಿಗೂ ಬಿಡುವುದಿಲ್ಲ. ಇದನ್ನು ತಡೆಗಟ್ಟಲು ಇರುವ ಮಾರ್ಗವೇನೆಂದರೆ ಮೊದಲನೆಯದಾಗಿ ಪ್ರತೀ ಗ್ರಾಮ ಪಂಚಾಯತ್ ಗಳು ಕೂಡ ತಿಂಗಳಿಗೊಮ್ಮೆ ತಮ್ಮ ವ್ಯಾಪ್ತಿಯ ಪ್ರತೀ ಮನೆಗಳಿಗೆ ತೆರಳಿ ಮನೆಯವರ ಹೆಸರು, ಸಂಪರ್ಕ ಸಂಖ್ಯೆ ಹಾಗೂ ಆ ಮನೆಯಲ್ಲಿ ಎಷ್ಟು ಸಾಕುಪ್ರಾಣಿಗಳು ಇವೆ..?
ಅವುಗಳಲ್ಲಿ ದೊಡ್ಡ ಪ್ರಾಣಿಗಳು ಎಷ್ಟಿವೆ..?
ಮರಿಗಳು ಎಷ್ಟಿವೆ..?
ಗಂಡು ಮರಿಗಳು ಎಷ್ಟಿವೆ..?
ಹೆಣ್ಣು ಮರಿಗಳು ಎಷ್ಟಿವೆ..? ಎಂಬಿತ್ಯಾದಿ ವಿವರಗಳನ್ನು ಬರೆದುಕೊಂಡು ಪ್ರಾಣಿಗಣತಿ ಮಾಡಿ ಅವುಗಳ ಫೋಟೋ ತೆಗೆದು ದಾಖಲಿಸಬೇಕು. ನಂತರ ಪ್ರತೀ ತಿಂಗಳೂ ಕೂಡ ತಮ್ಮ ವ್ಯಾಪ್ತಿಯ ಪ್ರತೀ ಮನೆಗಳಿಗೆ ತೆರಳಿ ಮೊದಲ ತಿಂಗಳು ಮಾಡಿದ ದಾಖಲಾತಿಗನುಗುಣವಾಗಿ ಪ್ರತೀ ಮನೆಗಳಲ್ಲಿ ಎಲ್ಲಾ ಪ್ರಾಣಿಗಳು ಇವೆಯೇ..? ಎಂದು ನೋಡಿ ಒಂದು ವೇಳೆ ಒಂದು ಸಾಕುಪ್ರಾಣಿ ಹೆಚ್ಚಾದರೆ ಅದರ ವಿವರವನ್ನು ಮತ್ತೆ ದಾಖಲಿಸಿಕೊಳ್ಳಬೇಕು. ಒಂದು ವೇಳೆ ಕಳೆದ ತಿಂಗಳಿಗಿಂತ ಈ ತಿಂಗಳು ಒಂದು ಸಾಕುಪ್ರಾಣಿ ಕಡಿಮೆಯಾದರೆ ಅದಕ್ಕೆ ಆ ಮನೆಯವರು ಸರಿಯಾದ ಕಾರಣವನ್ನು ನೀಡುವಂತೆ ಕೇಳಿ ಒಂದು ವೇಳೆ ಕಾರಣ ಸರಿಯಾಗಿ ಅಥವಾ ನಿಜವಾಗಿ ಇಲ್ಲದಿದ್ದರೆ ಆ ವ್ಯಕ್ತಿಗೆ ದಂಡ ವಿಧಿಸಬೇಕು. ಹಾಗೂ ಒಂದು ವೇಳೆ ಆ ವ್ಯಕ್ತಿ ಸಾಕುಪ್ರಾಣಿಯನ್ನು ರಸ್ತೆ ಬದಿಯಲ್ಲಿ ಬಿಟ್ಟಿದ್ದರೆ ಅದನ್ನು ಮತ್ತೆ ಹುಡುಕಿ ತಂದು ಅದೇ ವ್ಯಕ್ತಿ ಸಾಕುವಂತೆ ಮಾಡಬೇಕು. ಹಾಗೂ ಪ್ರತೀ ಗ್ರಾಮ ಸಭೆಗಳಲ್ಲಿ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ಬಿಡದಂತೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಹಾಗೂ ಅದೇ ರೀತಿ ಪ್ರತೀ ಊರಿನ ಸ್ಥಳೀಯರು ಕೂಡ ತಮ್ಮ ಕಣ್ಣೆದುರಿನಲ್ಲಿ ಯಾರಾದರೂ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವುದು ಕಂಡುಬಂದರೆ ಅಥವಾ ತಿಳಿದುಬಂದರೆ ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯತ್ ಗೆ ಮಾಹಿತಿ ನೀಡಬೇಕು. ಈ ರೀತಿಯಾಗಿ ಪ್ರತಿಯೊಂದು ಗ್ರಾಮ ಪಂಚಾಯತ್ ಗಳಲ್ಲೂ ಕೂಡ ಈ ರೀತಿಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಂಡಾಗ ಸಾಕುಪ್ರಾಣಿಗಳನ್ನು ರಸ್ತೆ ಬದಿಯಲ್ಲಿ ತಂದು ಬಿಡುವ ಪ್ರಕರಣಗಳು ಕಡಿಮೆಯಾಗುವ ಸಾಧ್ಯತೆ ಇದೆ.✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading