Ad Widget

ಪುಸ್ತಕ ಪರಿಚಯ : ಉಲ್ಲಾಸ್ ಕಜ್ಜೋಡಿ ಯವರ “ಜೀವನಯಾನ” ಕವನ ಸಂಕಲನ

“ಜೀವನಯಾನ” ಕವನ ಸಂಕಲನದ ಮೂಲಕ ಸಾರಸ್ವತ ಲೋಕಕ್ಕೆ ಬರುತ್ತಿರುವ ‘ಉಲ್ಲಾಸ್ ಕಜ್ಜೋಡಿ’ ತುಂಬು ಜೀವನೋತ್ಸಾಹದ ಯುವಕ. ದಿವ್ಯಾಂಗಚೇತನರಾದ ಉಲ್ಲಾಸ್ ಈಗ ನಮಗೆಲ್ಲಾ ಆದರ್ಶವಾಗಿ ತಮ್ಮ ಸಂವೇದನಾಶೀಲ ಕವಿತೆಗಳ ಮೂಲಕ ಎಲ್ಲರನ್ನೂ ಎದುರಾಗಿದ್ದಾರೆ. “ಜೀವನಯಾನ” ಎಂಬ ಶೀರ್ಷಿಕೆಗೆ ತಕ್ಕಂತೆ ತನ್ನ ಜೀವನಪಯಣದ ತಲ್ಲಣಗಳನ್ನೇ ಕವಿತೆಗಳನ್ನಾಗಿಸಿ ನಮ್ಮನ್ನೆಲ್ಲ ಬೆರಗುಗೊಳಿಸಿದ್ದಾರೆ.
“ಕ್ಷಣಿಕ ಬದುಕುವ ಹೂವಿಗಿರದ ಸ್ವಾರ್ಥ ಅದೆಷ್ಟೋ ವರ್ಷ ಬದುಕುವ ಮನುಷ್ಯನಿಗೇಕೆ?” ಎಂದು ಮನುಷ್ಯನ ಸಣ್ಣತನದ ಕುರಿತು ಮುಗುಮ್ಮಾಗಿ ಪ್ರಶ್ನಿಸುತ್ತಾರೆ. ಮನುಷ್ಯತ್ವ, ಪ್ರೀತಿ, ನೀತಿ, ಸಹಾಯ ಇವನ್ನೆಲ್ಲಾ ಮರೆತಿರುವ ಮನುಜನ ಬಗ್ಗೆ ಅತ್ಯಂತ ಖೇದವಿರುವ ಮನಸ್ಸು ಉಲ್ಲಾಸರದ್ದು.
“ಹೆಸರಿಗಷ್ಟೇ ಮನುಷ್ಯ ಎಂದೆನಿಸಿಕೊಂಡರೆ ಸಾಕೇ?” ಎಂಬ ವಿಚಾರವಂತ ಕವಿತೆಯಲ್ಲಿ “ಮಾನವೀಯ ಮೌಲ್ಯಗಳಿಗಿಂತ ದೊಡ್ಡ ಆಸ್ತಿ ಬೇಕೆ?” ಎಂದು ಪ್ರಶ್ನಿಸುತ್ತಾರೆ. ಶಿಥಿಲಗೊಂಡಿರುವ ನಮ್ಮ ಮಾನವೀಯ ಮೌಲ್ಯಗಳು ಮತ್ತು ಮಾನವ ಸಂಬಂಧದ ಬಗ್ಗೆ ಹೆಚ್ಚಿನ ಕವಿತೆಗಳಲ್ಲಿ ಧ್ವನಿಯೆತ್ತುತ್ತಾರೆ.
ಮನದ ಮೌನದ ಭಾವನೆಗಳನ್ನು ಅಕ್ಷರ ರೂಪಕ್ಕಿಳಿಸಿ ಹಗುರಾಗುವ ಮನಸ್ಸಿನ ಭಾವಜೀವಿ ಉಲ್ಲಾಸ್. ಮೌನ ಮತ್ತು ಕವಿತೆಯ ನಡುವಿನ ಮಾತುಗಳು ಇಲ್ಲಿ ಅಕ್ಷರಗಳಾಗಿವೆ. ಬಹುಶಃ ಮಾತನಾಡಲು ಸ್ನೇಹಿತರು ಸಿಗದ ಇಂತಹ ಹೊತ್ತಿನಲ್ಲಿ ಸೃಷ್ಟಿಯಾದ “ಜೀವನದಲ್ಲಿ ಏಕಾಂಗಿಯೆಂದು ನೀ ಕೊರಗಬೇಡ, ಏಕಾಂತದಲ್ಲೇ ಖುಷಿಯಿದೆ ಎಂಬುದನ್ನು ಮರೆಯಬೇಡ” ಎನ್ನುತ್ತಾ ಹಗುರಾಗುತ್ತಾರೆ.
ಪಿಯುಸಿ ವರೆಗೆ ಓದಿದ ಉಲ್ಲಾಸ್ ರವರು ತದನಂತರ ಅನಿವಾರ್ಯ ಕಾರಣಗಳಿಂದ ಮನೆಯಲ್ಲಿಯೇ ಉಳಿದು ಓದು ಮತ್ತು ಬರಹವನ್ನೇ ಸ್ನೇಹಿತರನ್ನಾಗಿಸಿಕೊಂಡಿದ್ದಾರೆ. ವಿದ್ಯಾಬ್ಯಾಸಕ್ಕೆಂದು ಹೋಗುತ್ತಿದ್ದಾಗ ಸ್ನೇಹಿತರಿದ್ದರು, ನೋವು-ನಲಿವುಗಳನ್ನು ಹಂಚಿಕೊಳ್ಳುತ್ತಿದ್ದರು. “ವಿದ್ಯಾರ್ಥಿ ಜೀವನ” ಎಂಬ ಕವಿತೆಯಲ್ಲಿ “ಸ್ವಾರ್ಥವಿಲ್ಲದೇ ಪ್ರೀತಿ ತೋರಿದ ಸ್ನೇಹವದು ಸೂತ್ರ ತಪ್ಪಿದೆ ಇಂದು, ಒಲ್ಲದ ಮನಸ್ಸಿನಿಂದಲೇ ದೂರವಾಗುತ್ತಿದೆ ಇಂದು” ಎಂದೆನ್ನುತ್ತಾ ಹಗುರಾಗುತ್ತಿದೆ ಇವರ ಕವಿ ಮನಸ್ಸು.
ಈಗಿನ ಧಾವಂತ ಬದುಕಿನ ತಲ್ಲಣಗಳು ಹೆಚ್ಚಿನೆಲ್ಲಾ ಕವಿತೆಗಳಲ್ಲಿ ನಮಗೆ ಗೋಚರಿಸುತ್ತವೆ. ಬದುಕಿನ ಬಗ್ಗೆ ಅಂದುಕೊಂಡದ್ದನ್ನು ಸರಳವಾಗಿ, ನೇರವಾಗಿ, ಅಚ್ಚುಕಟ್ಟಾಗಿ ಇಲ್ಲಿನ ಕವಿತೆಗಳಲ್ಲಿ ಪಡಿಮೂಡಿಸಿದ್ದಾರೆ. “ಒಂದು ದೃಢ ಮನಸ್ಸಿನಿಂದ ಮಾತ್ರ ಚಿಂತನಯೋಗ್ಯ ಸಾಲುಗಳು ಸಾಧ್ಯ” ಎಂಬುದು ಇಲ್ಲಿನ ಕವಿತೆಗಳಲ್ಲಿ ನಮಗೆ ಸಾಬೀತಾಗುತ್ತದೆ. ಮೊದಲ ಸಂಕಲನವಾದ್ದರಿಂದ ವಾಚ್ಯ ಜಾಸ್ತಿ ಇದ್ದರೂ ಚಿಂತಿಸಿದ ಚಿಂತನೆಗಳೆಲ್ಲವೂ ಮಾಗಿದ ದೋರಣೆಗಳಾಗಿವೆ. “ಬದುಕಿನಲ್ಲಿ ತಾಳ್ಮೆಯಿರಲಿ” ಕವಿತೆಯಲ್ಲಿ “ಸಾವು ಹೇಳಿ-ಕೇಳಿ ಬರುವುದಿಲ್ಲ, ಜೊತೆಗಿರುವಾಗಲೇ ಎಲ್ಲರನ್ನೂ ಪ್ರೀತಿಸಿ, ಮತ್ತೆ ದುಃಖಿಸಿದರೆ ಪ್ರಯೋಜನವಿಲ್ಲ” ಕವಿತೆ ಅಪ್ಯಾಯಮಾನವಾಗಿದೆ. “ಜೀವನದ ಸಂತೆಯಲ್ಲಿ ಕನಸುಗಳು ಮಾರಾಟವಾಗಿವೆ, ಕಷ್ಟ-ನೋವು, ಅನಿವಾರ್ಯತೆಗಳಿಗಾಗಿ ಕನಸುಗಳು ಮಾರಾಟವಾಗಿವೆ” ಎಂಬ ಸಾಲುಗಳು ಓದುಗರನ್ನು ಚಿಂತಿಸುವಂತೆ ಮಾಡುತ್ತವೆ. ಉಲ್ಲಾಸ್ ರವರ ಕವಿತೆಗಳ ಸಿದ್ದಾಂತಗಳು ಪ್ರೀತಿ, ಕರುಣೆ, ಅನುಕಂಪ, ನಗು ಮತ್ತು ಮಾನವೀಯತೆಗಳಿಂದ ತುಂಬಿದೆ. ತಮ್ಮ ಜೀವನದಲ್ಲಿ ಎದುರಾಗುವ ಎಲ್ಲಾ ಘಟನೆಗಳನ್ನು ಧನಾತ್ಮಕವಾಗಿ ನೋಡುವ ಇವರ ಗುಣ ಖಂಡಿತ ಎಲ್ಲರಿಗೂ ಬರುವಂತದ್ದಲ್ಲ. ಇಂತಹ ಧನಾತ್ಮಕ ಚಿಂತನೆಗಳಿಂದ ಕೂಡಿದ ಮನಸ್ಸಿರುವುದರಿಂದಲೇ ಇವರಿಗೆ ಬರವಣಿಗೆ ಸಾಧ್ಯವಾಯಿತು ಮತ್ತು ಮೊದಲ ಸಂಕಲನ ಹೊರತರುವಂತಾಯಿತು ಎಂಬುದು ನನ್ನಸಿಕೆ. ಒಂದು ಸಣ್ಣ ನೋವಿನೆಳೆಯ ಸಾಲು, ನಿರಾಶೆ, ಹತಾಶೆಯ ಸಾಲು ಕವಿತೆಯಲ್ಲಿ ನುಸುಳಿದರೆ ಅಲ್ಲಿಗೆ ಅವರ ಆ ಭಾವನೆ ಹಗುರಾಗಿ ಹೋಯಿತು ಎಂಬುದು ಕವಿತೆಯನ್ನು ಓದುವಾಗ ನಮಗನಿಸುತ್ತದೆ. ಇಂತಹ ಕವಿತೆಗಳಿಗೆ ನಾವು-ನೀವೆಲ್ಲರೂ ಧನ್ಯರಾಗಿರಬೇಕು. ಸಂಕಲನದ ‘ನಗು’ ಕವಿತೆಯಲ್ಲಿ ಈ ನಗುವಿನಿಂದಲೇ ನಾನು ಪ್ರತೀದಿನ ಖುಷಿಯಾಗಿರುತ್ತೇನೆ ಎಂದು ಹೇಳುತ್ತಾ, ದೂರವಾದ ನಗುವನ್ನು ನಾನು ಹುಡುಕಿ ಬರಮಾಡಿಕೊಳ್ಳುತ್ತೇನೆ ಎನ್ನುವ ಸೃಜನಾತ್ಮಕ ಹೇಳಿಕೆ ಇವರ ಧನಾತ್ಮಕ ಚಿಂತನೆಗೆ ಹಿಡಿದ ಕನ್ನಡಿ. ಪ್ರತೀ ಕವಿತೆಗಳನ್ನು ಓದುವಾಗ ಬದುಕಿನ ಮತ್ತು ಅವರ ಬದುಕಿನ ಹಲವಾರು ವಿಚಾರಗಳು ಅನಾವರಣಗೊಳ್ಳುತ್ತಾ ಹೋಗುತ್ತದೆ. ಇವರ ಪದ್ಯಕ್ಕೆ ಗದ್ಯದ ಸ್ಪರ್ಶವೂ ಇದೆ. ಹಾಗಾಗಿ ಮನಸ್ಸಿನೆಲ್ಲಾ ಮಿಳಿತಗಳಿಗೆ, ತುಡಿತಗಳಿಗೆ ಕಾವ್ಯದ ಭಾಷೆಯನ್ನು ಹೊಸೆಯುವ ಬದಲು ಗದ್ಯವನ್ನು ಅನುನಯಿಸಬಹುದಿತ್ತು ಎಂದು ಒಂದು ಕ್ಷಣ ಅನಿಸಿದರೂ ಕವಿಯ ಮನಸ್ಸನ್ನು ಓದುಗರಾದ ನಾವು ಅರ್ಥಮಾಡಿಕೊಳ್ಳಬೇಕು. ಏಕೆಂದರೆ ಕವಿಯ ದೋರಣೆ ಏನೆಂಬುದು ನಮಗಿಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಅತಿಯಾದ ಪ್ರಾಸವಿಲ್ಲದಿದ್ದರೂ, ಪ್ರಾಸದಿಂದ ಓದಿದಂತೆ ಪ್ರಭಾವಿಸಲ್ಪಡುತ್ತದೆ. ಸಂಯಮದಿಂದ ಕಾವ್ಯ ಕಟ್ಟಬೇಕು ಎಂಬುದು ಉಲ್ಲಾಸ್ ರ ನಿಲುವಾಗಿರಬೇಕೆಂದು ನಮಗನಿಸುವ ಮಟ್ಟಿಗೆ ಇಲ್ಲಿ ಪದ್ಯಗಳು ರಚಿಸಲ್ಪಟ್ಟಿವೆ. ಆಶಾವಾದದ ಅಂಶಗಳು ಹೆಚ್ಚಿರುವುದರಿಂದ ಇದು ಕಾವ್ಯಕ್ಕೆ ಸರಿ ಎಂದೆನಿಸಿಬಿಡುತ್ತದೆ. ಈ ಎಲ್ಲಾ ಕಾರಣಗಳಿಂದ ಇವರ ನಿಲುವು ಕಾವ್ಯಕ್ಕೆ ಸೂಕ್ತ ಎಂಬ ಆಲೋಚನೆಯು ಓದುಗರಿಗೆ ಬರುತ್ತದೆ.
“ಜೀವನದಲ್ಲಿ ಏಕಾಂಗಿಯೆಂದು ನೀ ಕೊರಗಬೇಡ, ಏಕಾಂತದಲ್ಲೂ ಖುಷಿಯಿದೆ ಎಂಬುವುದನ್ನು ಮರೆಯಬೇಡ, ಬದುಕಿನಲ್ಲಿ ಕಷ್ಟಗಳೇ ಬರುವುದು ಎಂದು ನೀ ಕುಗ್ಗಬೇಡ, ಕಷ್ಟ-ನಷ್ಟಗಳ ಆಚೆಗೆ ಸುಂದರವಾದ ಬದುಕಿದೆ ಎಂಬುವುದನ್ನು ಮರೆಯಬೇಡ…” ಹೀಗೆ ಸಾಗುತ್ತಾ “ಇಂದಿನ ಅವಮಾನವೇ ಮುಂದಿನ ಸನ್ಮಾನವಾಗುವುದು ಎಂಬ ಮಾತನ್ನು ಮರೆಯಬೇಡ” ಎನ್ನುತ್ತಾರೆ.
ಇವರ ಕವಿತೆಗಳನ್ನು ಓದುವಾಗ “ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂಬ ಕುವೆಂಪು ವಾಣಿಯ ಸಾಲೊಂದು ನಮ್ಮ ಮನಸ್ಸಿಗೆ ಬಂದು ನೆಲೆಸುತ್ತದೆ. ಎದೆಯ ಭಾವಗಳನ್ನು ಹಾಗೆಯೇ ಅಕ್ಷರಕ್ಕಿಳಿಸಿ ನಿರಾಳವಾದ ಭಾವ ನಮ್ಮನ್ನು ಆವರಿಸಿಕೊಳ್ಳದೇ ಇರುವುದಿಲ್ಲ. ನಿರಾಳತೆ ಎನ್ನುವುದು ಸ್ವಾತಂತ್ರ್ಯವಿದ್ದಂತೆ. ತನ್ನ ಮನಸ್ಸಿನ ನಿರಾಳತೆಯನ್ನು ಕಳೆದುಕೊಳ್ಳಲು ಇವರ ಮಾಧ್ಯಮ ಕವಿತೆ.
“ಸಾಮಾನ್ಯರಲ್ಲಿ ಸಾಮಾನ್ಯನು ಅವನು, ಪ್ರತಿದಿನವೂ-ಪ್ರತಿಕ್ಷಣವೂ ಕಷ್ಟ-ನೋವುಗಳಲ್ಲೇ ಬದುಕ ನಡೆಸುತ್ತಿರುವ ನಾವಿಕನು, ಅವನು ನಮ್ಮ ನಿಮ್ಮೊಳಗೊಬ್ಬನು…” ಸಮಾಜದ ಆಗುಹೋಗುಗಳನ್ನು ನನಗ್ಯಾಕೆ ಎಂಬ ಧೋರಣೆಯಿಂದ ನಿರ್ಲಕ್ಷ್ಯಿಸದೇ ಸಮಾಜಮುಖಿಯಾಗಿ ನಿಂತು ನೋಡುವ ಅಪರೂಪದ ಗುಣ ಇವರ ಕವಿತೆಗಳಿಗೆ ಇರುವುದು ಶ್ಲಾಘನೀಯ. ಕವಿ ಮನಸ್ಸು ಎಂದರೆ ಇದೇ ತಾನೇ…? ಇದಕ್ಕೆ ಇವರ ಪತ್ರಕರ್ತ ವೃತ್ತಿಯೂ ಕಾರಣವಾಗಿರಬಹುದು. ಮನೆಯಿಂದಲೇ ಇವರು “ಅಮರ ಸುದ್ದಿ ವಾರಪತ್ರಿಕೆ” ಯಲ್ಲಿ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬರಹಗಾರರಾದವರು ಸಮಾಜದ ಅಂಕು-ಡೊಂಕುಗಳಿಗೂ ಧ್ವನಿಯಾಗಬೇಕು. ಹೀಗೆ ಮರುಗುವ, ಕಾಳಜಿಯ ಸ್ವಭಾವ, ಸಜ್ಜನಿಕೆಯ ಪ್ರತಿರೂಪ, ಇವರ ಮಗು ಮನಸ್ಸು ಪ್ರತೀ ಕವಿತೆಗಳಲ್ಲೂ ನಮಗೆ ತಿಳಿಯುತ್ತದೆ. “ಇಲ್ಲಿ ಯಾರೂ ಪರಿಪೂರ್ಣರಲ್ಲ”, “ಎಚ್ಚರವಹಿಸಬೇಕು ಮಳೆಗಾಲದಲ್ಲಿ” ಮುಂತಾದ ಕವಿತೆಗಳು ಸಮಾಜಮುಖಿಯಾಗಿವೆ. ಹೀಗೆ ಸಮಸ್ತ ಸಮಾಜದ ಕುರಿತು ಕಾಳಜಿ ಇರುವ ಕವಿ ಮನಸ್ಸು ತನ್ನ ಮನೆಯನ್ನು, ತಂದೆ-ತಾಯಿಯನ್ನು, ಸಹೋದರ-ಸಹೋದರಿಯನ್ನು ಅದೆಷ್ಟು ಆಸ್ಥೆಯಿಂದ ಪ್ರೀತಿಸಬಹುದು ಅಲ್ಲವೇ…?
ಇವರ ಬರಹಗಳ ಓದು ಕೇವಲ ಮನರಂಜನೆಗೆ ಮಾತ್ರ ಸೀಮಿತವಲ್ಲ, ಅದೆಷ್ಟೋ ತಿಳುವಳಿಕೆಗಳು ನಮಗಿಲ್ಲಿ ಸಿಗುತ್ತವೆ. “ಹಿರಿಯರ ಬದುಕಿನ ರೀತಿಯನ್ನು ಇಂದು ನಾವು ಮರೆಯುತ್ತಿದ್ದೇವೆಯೇ…?” ಎಂಬ ಧೀರ್ಘ ಕವಿತೆ ಈ ನಿಟ್ಟಿನಲ್ಲಿ ಉತ್ತಮವಾಗಿದೆ.
ಒಟ್ಟಿನಲ್ಲಿ ಉಲ್ಲಾಸ್ ಕಜ್ಜೋಡಿಯವರಿಗೆ ಬದುಕಿನ ಬಗ್ಗೆ ಅಪಾರ ಅಚ್ಚರಿಯಿದೆ, ಜೊತೆಗೆ ಭರವಸೆಯಿದೆ. ಇಂತಹ ಅಚ್ಚರಿಗಳ ಸಂತೆಯಲ್ಲಿ ಆಯ್ದುಕೊಂಡದ್ದು ಮತ್ತು ಸಾಗಿಬಂದ ನೆನಪುಗಳ ತೊಯ್ದಾಟವೇ ಇಲ್ಲಿನ ಚೆಂದನೆಯ ಕವಿತೆಗಳು. ಪ್ರತೀ ಕವಿತೆಯಲ್ಲೂ ಕವಿಯ ಮನೋಧರ್ಮ ಮಿಳಿತಗೊಂಡು ಅಪೂರ್ವ ಸಂದೇಶವೊಂದನ್ನು ಓದುಗರಿಗೆ ನೀಡುತ್ತದೆ.
“ಇವರಿಗೆ ಕವಿತೆಗಳೆಂದರೆ ಅಂತರಂಗದ ಅಲೆಗಳ ಜೀವನಯಾನ, ಸ್ಫುರಿಸಿದ ಕವಿತೆಯನ್ನು ಚಿಂತಿಸುವಂತೆ ಬರೆಯಲು ಪ್ರೇರೇಪಿಸುವುದೇ ಇವರ ಸಾಹಿತ್ಯದ ಒಲವಿನ ಪ್ರತೀಕ. ಇವರ ಒಲವು ಇವರಿಗೆ ಗೆಲುವಾಗಲಿ, ಇವರ ಬರಹದ ಪ್ರಯಾಣ ನಿರಂತರವಾಗಿರಲಿ. ಸಾಹಿತ್ಯ ಕ್ಷೇತ್ರದಲ್ಲಿ ಗಟ್ಟಿಯಾಗಿ ಹೆಜ್ಜೆಯೂರಿ ಇವರ ಹೆಸರು ಶಾಶ್ವತವಾಗಲಿ, ಬರಹಗಳಿಂದ ಇವರ ಜೀವನೋತ್ಸಾಹ ಇಮ್ಮಡಿಯಾಗಲಿ ಎಂಬುದಾಗಿ ನಿಷ್ಕಲ್ಮಶವಾಗಿ ಹಾರೈಸುತ್ತೇನೆ…✍️ಸಂಗೀತ ರವಿರಾಜ್ ಚೆಂಬು

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading