
ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿಗೆ ಪ್ರವೇಶ ಬಯಸಿ ನೂರಾರು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದರೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗದೆ ನಿರಾಸೆಯಾಗಿದ್ದರು.ಈ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ವ್ಯಾಸಂಗ ಮಾಡಲು ಬಯಸುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕರವಾಗಲು ಮತ್ತು ಸೀಟಿನ ಸಮಸ್ಯೆ ಬಗೆ ಹರಿಸಲು ಕಾಲೇಜಿನಲ್ಲಿ ಹೆಚ್ಚುವರಿ ವಿಭಾಗ ತೆರೆಯುವಂತೆ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದರು.
ಹೆಚ್ಚುವರಿ ವಿಭಾಗಕ್ಕೆ ಮನವಿ:
ಪ್ರಸ್ತುತ ಕಾಲೇಜಿನಲ್ಲಿರುವ ವಿಜ್ಞಾನ, ಗಣಕ ವಿಜ್ಞಾನ, ವಾಣಿಜ್ಯ ಮತ್ತು ಕಲಾ ವಿಭಾಗಕ್ಕೆ ಪ್ರವೇಶ ಬಯಸಿ ಸುಮಾರು 654 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು.ಆದರೆ ಪ್ರತಿ ವಿಭಾಗಕ್ಕೆ 80 ವಿದ್ಯಾರ್ಥಿಗಳಂತೆ ಮೂರು ವಿಭಾಗಕ್ಕೆ 240 ವಿದ್ಯಾರ್ಥಿಗಳಿಗೆ ಮತ್ತು ಕಲಾ ವಿಭಾಗದ ಎರಡು ತರಗತಿಗಳಿಗೆ 160 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಲಭಿಸುತ್ತದೆ.ಆದರೆ ಉಳಿದ ವಿದ್ಯಾರ್ಥಿಗಳು ಶ್ರೀ ದೇವಳದ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡುವುದರಿಂದ ವಂಚಿತರಾಗುತ್ತಾರೆ.ಆದುದರಿಂದ ಕಾಲೇಜಿನಲ್ಲಿ ಎರಡು ಹೆಚ್ಚುವರಿ ವಿಭಾಗ ತೆರೆದು ಗ್ರಾಮೀಣ ಬಡ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲತೆ ಮಾಡಿಕೊಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಮನವಿಗೆ ಸ್ಪಂಧಿಸಿದ ಸಚಿವರು:
ಗ್ರಾಮೀಣ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ಹೆಚ್ಚು ಹೆಚ್ಚು ಸಹಕಾರ ನೀಡುವುದು ಅತ್ಯಗತ್ಯ. ಇದು ಅತ್ಯುತ್ತಮವಾದ ಕಾರ್ಯ ಈ ಉತ್ತಮ ಕಾರ್ಯಕ್ಕೆ ನ್ನ ಸಂಪೂರ್ಣ ಬೆಂಬಲವಿದೆ.ಅತೀ ಶೀಘ್ರವಾಗಿ ವ್ಯವಸ್ಥಾಪನಾ ಸಮಿತಿಯ ಸಭೆ ನಡೆಸಿ ಈ ಬಗ್ಗೆ ನಿರ್ಣಯ ಕೈಗೊಂಡು ಸರಕಾರಕ್ಕೆ ರವಾನಿಸಿ ತಕ್ಷಣವೇ ಇದಕ್ಕೆ ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮನವಿ ಸ್ವೀಕರಿಸಿದ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ತಾನು ಬಯಸಿದ ಶಿಕ್ಷಣ ದೊರಕಬೇಕು: ಹರೀಶ್ ಇಂಜಾಡಿ
ಹತ್ತಾರು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ನೀಡುತ್ತಾ ಬರುತ್ತಿರುವ ನಮ್ಮ ಸಂಸ್ಥೆಯಲ್ಲಿ ಇದೀಗ ಪ್ರವೇಶ ಬಯಸಿ ಬಂದವರ ಸಂಖ್ಯೆ ಅತ್ಯಧಿಕವಾಗಿದೆ. ಕಾಲೇಜಿನಲ್ಲಿ ಅತ್ಯುತ್ತಮವಾದ ಗುಣಮಟ್ಟದ ಶಿಕ್ಷಣ ನೀಡುವುದರೊಂದಿಗೆ ಹೆಚ್ಚಿನ ಫಲಿತಾಂಶ ಬಂದಿರುವುದು ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತ್ಯುತ್ತಮ ಶಿಕ್ಷಣದಿಂದ ಅಧಿಕ ಅಂಕ ಪಡೆದು ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾದುದರಿಂದ ಸೀಟುಗಳ ಕೊರತೆ ಉಂಟಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗೂ ಕೂಡಾ ತಾನು ಬಯಸಿದ ಶಿಕ್ಷಣವು ಪದವಿಪೂರ್ವ ಕಾಲೇಜಿನಲ್ಲಿ ದೊರಕಬೇಕು.ಕುಕ್ಕೆಯಲ್ಲಿ ಅನ್ನದಾನ ಶ್ರೇಷ್ಠವಿದ್ದಂತೆ ವಿದ್ಯಾದಾನಕ್ಕೂ ಹೆಚ್ಚಿನ ಮಹತ್ವ ನೀಡುವುದು ನಮ್ಮ ಉದ್ದೇಶ. ಇದರೊಂದಿಗೆ ನಾನು ಒಬ್ಬ ಶಿಕ್ಷಕ ದಂಪತಿಗಳ ಪುತ್ರನಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿ ನಮ್ಮ ಕಾಲೇಜಿನಲ್ಲಿ ಪ್ರವೇಶ ಬಯಸಿ ಬಂದ ಯಾರೊಬ್ಬರೂ ಪ್ರವೇಶಾವಕಾಶದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಹೆಚ್ಚುವರಿ ವಿಭಾಗ ತೆರೆಯಲು ಸಚಿವರಲ್ಲಿ ಮನವಿ ಮಾಡಿದ್ದೇವೆ.ಇದಕ್ಕೆ ಸಚಿವರು ಪೂರಕವಾಗಿ ಸ್ಪಂದಿಸಿದ್ದಾರೆ ಎಂದು ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್.ಇಂಜಾಡಿ ತಿಳಿಸಿದರು.
ಮುಜರಾಯಿ ಸಚಿವರ ಭೇಟಿ ಸಂದರ್ಭ ಗೂರೂಜಿ ನಾಗಭೂಷಣ್, ನ್ಯಾಯವಾದಿ ವೆಂಕಪ್ಪ ಗೌಡ ಸುಳ್ಯ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ, ಸ್ಥಳೀಯರಾದ ಭವಿಷ್ ಅಯ್ಯೆಟ್ಟಿ ಉಪಸ್ಥಿತರಿದ್ದರು.