
ಮುಕ್ಕೂರು: ಸಂಘಟನೆಗಳು ಸಮಾಜಮುಖಿ ಚಿಂತನೆಯನ್ನು ಮೈಗೂಡಿಸಿಕೊಂಡಾಗ ಸಮಾಜದಲ್ಲಿ ಆರೋಗ್ಯಪೂರ್ಣ ಪರಿವರ್ತನೆ ಸಾಧ್ಯವಾಗುತ್ತದೆ. ಅದೇ ಆಶಯದೊಂದಿಗೆ ಸುಳ್ಯ ಅಮರ ಸಂಘಟನಾ ಸಮಿತಿ ಮಾದರಿ ಹೆಜ್ಜೆ ಇರಿಸಿರುವುದು ಶ್ಲಾಘನೀಯ ಸಂಗತಿ ಎಂದು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು.
ಮುಕ್ಕೂರು ಅಂಗನವಾಡಿ ಕೇಂದ್ರದ ವಠಾರದಲ್ಲಿ ಸುಳ್ಯ ಅಮರ ಸಂಘಟನಾ ಸಮಿತಿ ವತಿಯಿಂದ ನಿರ್ಮಾಣಗೊಳ್ಳಲಿರುವ ಹೂವಿನ ತೋಟದ ಕಾಮಗಾರಿಯ ಭೂಮಿ ಪೂಜೆ ಸಮಾರಂಭದಲ್ಲಿ ಅವರು ಮಾತನಾಡಿದರು. ಅಮರ ಸಂಘಟನೆಯ ಕಾರ್ಯಕ್ಕೆ ಊರು, ಗ್ರಾ.ಪಂ.ವತಿಯಿಂದಲೂ ಸಹಕಾರ ನೀಡಲಾಗುವುದು. ಯುವಕರು ಸಮಾಜಪರ ಕೆಲಸ ನಿರ್ವಹಿಸಲು ಮುಂದಡಿ ಇಟ್ಟಾಗ ಅದಕ್ಕೆ ನಾವೆಲ್ಲರೂ ಪ್ರೋತ್ಸಾಹ ನೀಡಬೇಕು. ಮುಕ್ಕೂರಿನಲ್ಲಿ ನಿರ್ಮಾಣಗೊಳ್ಳಲಿರುವ ಹೂದೋಟ ತಾಲೂಕಿಗೆ ಮಾದರಿ ಆಗಲಿ ಎಂದರು.
ಭೂಮಿ ಪೂಜೆ ನೆರವೇರಿಸಿದ ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ಗ್ರಾಮೀಣ ಪ್ರದೇಶವಾದ ಮುಕ್ಕೂರಿನ ಅಂಗನವಾಡಿಗೆ ಸುಂದರವಾದ ಹೂವಿನ ತೋಟ ನಿರ್ಮಿಸುವ ಚಿಂತನೆ ಶ್ಲಾಘನೀಯವಾದದು. ಅಮರ ಸಂಘಟನೆಯ ಕಾರ್ಯಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದರು.
ಉದ್ಯಮಿ ಲೋಹಿತ್ ಬಂಗೇರ ಬಾಳಯ ಮಾತನಾಡಿ, ಹೂದೋಟದ ನಿರ್ಮಾಣದ ಬಳಿಕ ಅದರ ನಿರ್ವಹಣೆಯ ನಿಟ್ಟಿನಲ್ಲಿಯು ಊರವರು ಕಾಳಜಿ ವಹಿಸಬೇಕು. ಯುವಕ ಮಂಡಲದ ಶ್ರಮ ದೀರ್ಘ ಕಾಲದ ತನಕ ಉಳಿಯಬೇಕಾದರೆ ಊರವರ ಪಾತ್ರವೂ ಮುಖ್ಯ. ಈ ನಿಟ್ಟಿನಲ್ಲಿ ಎಲ್ಲರ ಬೆಂಬಲ ಇರಲಿ ಎಂದರು.
ಸಭಾಧ್ಯಕ್ಷತೆ ವಹಿಸಿದ್ದ ಅಮರ ಸಂಘಟನಾ ಸಮಿತಿ ಅಧ್ಯಕ್ಷ ಕುಸುಮಾಧರ ಮುಕ್ಕೂರು ಮಾತನಾಡಿ, ಇದು ಬಹುದಿನದ ಕನಸು. ಅಂಗನವಾಡಿ ಕಾರ್ಯಕರ್ತೆ ವರ್ಷದ ಹಿಂದೆಯೇ ಬೇಡಿಕೆ ಇರಿಸಿದ್ದರು. ಇದಕ್ಕೆ ಅಮರ ಸಂಘಟನೆಯವರೂ ಬೆಂಬಲ ನೀಡಿದ ಕಾರಣ ಈ ಯೋಜನೆ ಅನುಷ್ಠಾನಕ್ಕೆ ಮುಂದಡಿ ಇಡಲು ಸಾಧ್ಯವಾಗಿದೆ. ಊರವರೂ ಕೂಡ ಪೂರ್ಣ ಬೆಂಬಲ ನೀಡುವ ಭರವಸೆ ನೀಡಿದ್ದು ಅತೀ ಶೀಘ್ರದಲ್ಲೇ ಕೆಲಸ ಪೂರ್ಣಗೊಳಿಸಲಾಗುವುದು ಎಂದರು.
ಬೆಳ್ಳಾರೆ ಠಾಣಾ ಪೊಲೀಸ್ ಕಾನ್ಸ್ಟೇಬಲ್ ಚೇತನ್, ಪೆರುವಾಜೆ ಗ್ರಾ.ಪಂ.ಸಿಬಂದಿ ಅಕ್ಷತಾ ನಾಗನಕಜೆ, ಸುಳ್ಯ ಅಮರ ಸಂಘಟನಾ ಸಮಿತಿ ಗೌರವಾಧ್ಯಕ್ಷ ಸಾತ್ವಿಕ್ ಮಡಪ್ಪಾಡಿ, ಮುಕ್ಕೂರು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಜಯಂತ ಕುಂಡಡ್ಕ, ಅಂಗನವಾಡಿ ಕಾರ್ಯಕರ್ತೆ ರೂಪ ಶುಭ ಹಾರೈಸಿದರು.
ವೈದ್ಯ ಡಾ|ನರಸಿಂಹ ಶರ್ಮಾ ಕಾನಾವು, ಉದ್ಯಮಿ ಚಂದ್ರಹಾಸ ರೈ ಮುಕ್ಕೂರು, ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮ್ಮಾರು, ಅಂಗನವಾಡಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಕಮಲಾಕ್ಷಿ ಕರ್ಪುತ್ತಾರು ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಅಂಗನವಾಡಿಯ ತುರ್ತು ಅಗತ್ಯ ಕೆಲಸಗಳನ್ನು ಶ್ರಮದಾನದ ಮೂಲಕ ಮಾಡಿದ ದಿವಾಕರ ಬೀರುಸಾಗು ಮತ್ತು ತಂಡವನ್ನು ಹೂಗುಚ್ಛ ನೀಡಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆ ರೂಪ ಪ್ರಾರ್ಥಿಸಿದರು. ಸುಳ್ಯ ಅಮರ ಸಂಘಟನಾ ಸಮಿತಿ ಸ್ಥಾಪಕಾಧ್ಯಕ್ಷ ಪ್ರದೀಪ್ ಬೊಳ್ಳೂರು ಪ್ರಸ್ತಾವನೆಗೈದರು. ನಿರ್ದೇಶಕ ಹರ್ಷಿತ್ ಜಿ.ಜೆ ಸ್ವಾಗತಿಸಿದರು.