
ಕಳೆದ ಮೂರ್ನಾಲ್ಕು ವಾರಗಳಿಂದ ಐನೆಕಿದು ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆ ದಾಳಿಯಿಂದಾಗಿ ನಾಶವಾಗುತ್ತಿರುವ ಕೃಷಿಯನ್ನು ರಕ್ಷಿಸುವಂತೆ ಸಂಬಂಧಪಟ್ಟವರಿಗೆ ಗ್ರಾಮಸ್ಥರು ಮನವಿ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದ್ದು, ಈ ಬಗ್ಗೆ ಮಾತನಾಡಿದ ಸ್ಥಳೀಯರಾದ ಜಯಪ್ರಕಾಶ್ ಕೂಜುಗೋಡು “ಒಂದು ಕಡೆಯಿಂದ ಕೋತಿ, ಕಡವೆ, ಕಾಟಿ, ಹಂದಿ ಇತ್ಯಾದಿ ಕಾಡು ಪ್ರಾಣಿಗಳು ಮಾಡುವ ದಾಳಿಯಿಂದ ಕೃಷಿ ನಾಶವಾಗುತ್ತಿದ್ದು, ಇನ್ನೊಂದು ಕಡೆಯಿಂದ ಹೊಸ ಹೊಸ ರೋಗಗಳಿಂದ ಕೃಷಿ ನಾಶವಾಗುತ್ತಿದ್ದು, ಇದೀಗ ಗಾಯದ ಮೇಲೆ ಬರೆ ಎಳೆದಂತೆ ಕಳೆದ ಮೂರ್ನಾಲ್ಕು ವಾರಗಳಿಂದ ಗ್ರಾಮದಲ್ಲಿ ಬೀಡುಬಿಟ್ಟಿರುವ ಆನೆಗಳ ಸತತ ದಾಳಿಯಿಂದ ಸಂಪೂರ್ಣ ಕೃಷಿ ನಾಶವಾಗುತ್ತಿದ್ದು, ನೀರಿನ ಪೈಪ್ ಗಳು, ಸ್ಪಿಂಕ್ಲರ್ ಪಾಯಿಂಟ್ ಗಳು ಕಾಡುಪ್ರಾಣಿಗಳ ದಾಳಿಯಿಂದ ಹಾಳಾಗುತ್ತಿದ್ದು, ಸಂಜೆಯ ನಂತರ ತೋಟಗಳಿಗೆ ನೀರು ಬಿಡಲು ಹೋಗಲೂ ಜನ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂಜೆಯಾಗುವಾಗಲೇ ರಸ್ತೆ ಬದಿಯಲ್ಲಿ ಆನೆಗಳು ಕಾಣಲು ಸಿಗುವುದರಿಂದ ರಸ್ತೆಯಲ್ಲಿ ಓಡಾಡುವರು ಇತ್ತೀಚೆಗೆ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಮ್ಮ ಗ್ರಾಮದ ಬಹುತೇಕ ಗ್ರಾಮಸ್ಥರು ಕೃಷಿ ಹಾಗೂ ಕೃಷಿ ಕೂಲಿ ಕೆಲಸದಿಂದ ಜೀವನ ನಡೆಸುತ್ತಿರುವುದರಿಂದ ಕಾಡು ಪ್ರಾಣಿಗಳಿಂದ ಉಂಟಾಗುತ್ತಿರುವ ಈ ಸಮಸ್ಯೆಗಳಿಗೆ ಸಂಬಂಧಪಟ್ಟ ಇಲಾಖೆ ಹಾಗೂ ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಂಡು ಗ್ರಾಮಸ್ಥರ ಕಣ್ಣೀರು ಒರೆಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ನಮ್ಮ ಮನವಿಗೆ ಸ್ಪಂದಿಸದಿದ್ದರೆ ಮುಂದಿನ ದಿನಗಳಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಮುಖಾಂತರ ಹೋರಾಟ ಮಾಡುತ್ತೇವೆ” ಎಂದು ಹೇಳಿದ್ದಾರೆ.