Ad Widget

ಬ್ರೆಡ್ಡು, ರಸ್ಕ್, ಬಟರ್! ಮಾರಕ ಎಮಲ್ಸಿ”ಫಯರ್”! ಡೇಂಜರ್!



1970 ರಲ್ಲಿ ಕ್ಯಾಲಿಫೋರ್ನಿಯಾದ ಮಕ್ಕಳತಜ್ಞ ವೈದ್ಯ ಬೆನ್‌ಫೀನ್‌ಗೋಲ್ಡ್ ಹೇಳಿದ- “ಕೃತಕ ಸುವಾಸನಾದ್ರವ್ಯಗಳು ಮತ್ತು ಕೃತಕಬಣ್ಣಗಳು ಎ.ಡಿ.ಹೆಚ್.ಡಿ. (ಮಕ್ಕಳಲ್ಲಿ ಕಂಡುಬರುವ ಎಟೆನ್ಷನ್ ಡೆಫಿಸಿಟ್ ಹೈಪರಾಕ್ಟಿವಿಟಿ ಡಿಸರ‍್ಡರ್) ಉಂಟುಮಾಡಬಹುದು. 2007ರಲ್ಲಿ ಫೀನ್‌ಗೋಲ್ಡ್ ಮರಣದ 25 ವರ್ಷಗಳ ನಂತರ ಒಂದು ಸಂಶೋಧನಾ ಅಧ್ಯಯನ ವರದಿ ಮಾಡಿತು. ಅದನ್ನು ಅಮೆರಿಕಾದ ಫೂಡ್ ಸ್ಟಾಂರ‍್ಡ್ ಏಜೆನ್ಸಿ ಪ್ರಾಯೋಜಿಸಿತ್ತು. 300 ಮಕ್ಕಳನ್ನು ಇಟ್ಟುಕೊಂಡು ಈ ಅಧ್ಯಯನ ಆರು ಬಗೆಯ ಕೃತಕ ಬಣ್ಣಗಳು ( ಇ ಯಿಂದ ಆರಂಭವಾಗುವಂತದ್ದು) ಮತ್ತು ಒಂದು ಬಗೆಯ ಪ್ರಿರ‍್ವೇಟಿವ್ (ಕೆಡದಂತೆ ಇಡುವ ರಾಸಾಯನಿಕ) ಇರುವುದನ್ನು ಸೇವಿಸಿದಂತಹ ಮಕ್ಕಳಲ್ಲಿ
ಹೈಪರಾಕ್ಟಿವಿಟಿ ಕಂಡುಬರುವುದು. ಇದು ಅಲ್ಲಿನ ಲ್ಯಾನ್ಸೆಟ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಆ ಎಡಿಟಿವ್ಸ್ ಇರುವ ಎಲ್ಲಾ ಉತ್ಪನ್ನಗಳಲ್ಲಿ ಇಂದು ಅಮೆರಿಕಾದಲ್ಲಿ ಎಚ್ಚರಿಕೆ ನೀಡುವ ಲೇಬಲ್ ಇದೆ-” ಮಕ್ಕಳ ಚಟವಟಿಕೆ ಮತ್ತು ಗಮನ ನೀಡುವ ಶಕ್ತಿಯ ಮೇಲೆ ದುಷ್ಪರಿಣಾಮ ಬೀರಬಹುದು” !
ಆಹಾರಗಳಿಗೆ ಸೇರಿಸುವಂತಹ ಎಮಲ್ಸಿಪಯರ್ ಬ್ರೆಡ್‌ನಲ್ಲಿ ಇದೆ. ಬೇರೆ ತಿನಿಸುಗಳಲ್ಲೂ ಯಥೇಚ್ಛವಾಗಿ ಇವೆ. ಮಿಶ್ರವಾಗದ ಕೊಬ್ಬು ಮತ್ತು ನೀರನ್ನು ಮಿಶ್ರವಾಗುವಂತೆ ಮಾಡುವುದೇ ಇದರ ಕೆಲಸ. ಇವುಗಳಲ್ಲಿ ಸಾಮಾನ್ಯವಾದವುಗಳೆಂದರೆ ಲೆಸಿಥಿನ್. ಮೊಟ್ಟೆ, ಸೋಯಾಬೀನ್ ಅಥವಾ ಇತರ ಮೂಲಗಳಿಂದ ಪಡೆಯಬಹುದಾದದ್ದು. ಇದನ್ನು ನೈಸರ್ಗಿಕವೆಂದು ಕರೆದಿದ್ದಾರೆ. ಆದರೆ, ಪ್ರಾಕೃತಿಕವಾಗಿ ಸಿಗುವ ರಾಸಾಯನಿಕಗಳನ್ನು ಅಸಹಜವಾಗಿ ಮಿಶ್ರಣಮಾಡಿ, ರಾಸಾಯನಿಕವಾಗಿ
ಮಾರ್ಪಾಡು ಮಾಡಿ ಇದನ್ನು ಬಳಸಲಾಗುತ್ತದೆ. ಪಾಲಿಸಾರ್ಬೇಟ್ 80 , ಕಾರ್ಬಾಕ್ಸಿಮಿಥೈಲ್-ಸೆಲ್ಯುಲೋಸ್ ಇತ್ಯಾದಿ. “ಡಾಟೆಮ್”(ಡೈಅಸಿಟಿಲ್ ಟಾರ್ಟಾರಿಕ್ ಆ್ಯಸಿಡ್ ಎಸ್ಟರ್ ಆಫ್ ಮೋನೋ ಆ್ಯಂಡ್ ಡೈಗ್ಲಿಸರೈಡ್ಸ್, ಇದಕ್ಕೆ ಇ472ಇ ಎಂಬ ಹೆಸರೂ ಇದೆ) ಎನ್ನುವ ರಾಸಾಯನಿಕವನ್ನು ಪ್ರಾಣಿ ಅಥವಾ ಸಸ್ಯಜನ್ಯ ಕೊಬ್ಬುಗಳಿಂದ ತಯಾರಿಸಬಹುದು. ಅದು ನೈಸರ್ಗಿಕವಾಗಿ ಲಭ್ಯವಿಲ್ಲ. ಆದರೆ, ನೈಸರ್ಗಿಕದಂತೆ ಅದರ ಅಣುಗಳ ರಚನೆ ಇದೆ. ಈ ಸಾಮ್ಯತೆಯೇ ಮಾರಕ!
“ಡೂಪಾಂಟ್” ಎನ್ನುವ ಅಮೆರಿಕಾದ ಕೆಮಿಕಲ್ ಕಂಪನಿ ನಾನಾಬಗೆಯ ಎಮಲ್ಸಿಫಯರ್‌ಗಳನ್ನು ತಯಾರುಮಾಡುತ್ತದೆ. ಕಡಿಮೆ ಕೊಬ್ಬಿನಂಶ ಇರುವ ಆಹಾರಗಳಿಗೆ ಹೆಚ್ಚಿನ ನುಣುಪು ತರಲು ಬಳಸುವ ಇದನ್ನು, ಚೂಯಿಂಗ್ ಗಮ್ ಮತ್ತು ಪಿ.ವಿ.ಸಿ. ತಯಾರಿಕೆಯಲ್ಲಿ ಹೆಚ್ಚು ಬಳಸಿತ್ತಾರೆ. ಇನ್ನೊಂದು ಪ್ರಸಿದ್ಧವಾದ ಎಮಲ್ಸಿಫಯರ್ ಪರ್‌ಫ್ಲೊರೋಓಕ್ಟಾನೊಯಿಕ್ ಆ್ಯಸಿಡ್. ಇದನ್ನು ಸೇವಿಸಿದವರ ಶರೀರದಲ್ಲಿ ಇದು ನಿರಂತರ ಸಂಗ್ರಹವಾಗುತ್ತಾ ಹೋಗುತ್ತದೆ. ಹೆಚ್ಚಿದ ಕೊಲೆಸ್ಟರಾಲ್, ಹೆಚ್ಚಿದ ಲಿವರ್ ಕಿಣ್ವಗಳ ಪ್ರಮಾಣ, ಲಸಿಕೆಗಳಿಗೆ ಕಡಿಮೆ ರಕ್ಷಣೆ, ಹುಟ್ಟುವ ಮಗುವಿನ ಅಂಗ ವೈಕಲ್ಯ, ಗರ್ಭಿಣಿಯರಲ್ಲಿ ಉಂಟಾಗುವ ಅಧಿಕ ರಕ್ತದೊತ್ತಡ ಮತ್ತು ವೃಷಣ, ಕಿಡ್ನಿಯ ಕ್ಯಾನ್ಸರ್‌ಗೆ ಕಾರಣವಾಗಿದೆ. ಇದನ್ನು ನೇರವಾಗಿ ಸಂಸ್ಕರಿಸಿದ ಆಹಾರ ತಯಾರಿಯಲ್ಲಿ ಬಳಸದಿದ್ದರೂ, ಕೈಗಾರಿಕೋತ್ಪನ್ನಗಳ ಮೂಲಕ ಇದು ನಮ್ಮ ದೇಹ ಸೇರುವುದು. ನಮ್ಮ ಕರುಳಿನ ಉಪಕಾರಿಯಾದ ಸೂಕ್ಷ್ಮಾಣು ಸಮೂಹದ ಮೇಲೆ ಇದು ಧಾಳಿ ಮಾಡುವುದರಿಂದ ಹಾನಿಕಾರಕವಾಗಿದೆ. ಭೂಮಿಯ ಯಾವುದೇ ಜಾಗದಲ್ಲಿರುವುದಕ್ಕಿಂತ ಹೆಚ್ಚು ಬ್ಯಾಕ್ಟೀರಿಯಾ ಇರುವ ಜಾಗವೆಂದರೆ ಮಾನವನ ಕರುಳು. ಇದರಲ್ಲಿ 500 ರಿಂದ 1000 ಬಗೆಯ ಬ್ಯಾಕ್ಟೀರಿಯಾಗಳು ವಾಸವಾಗಿದೆ.
ನಮ್ಮ ಕರುಳಿನಲ್ಲಿರುವ ಸೂಕ್ಷ್ಮಾಣುಗಳು ವಿಟಾಮಿನ್‌ಗಳನ್ನು ತಯಾರು ಮಾಡುತ್ತವೆ. ಜೀರ್ಣವಾಗದ ಆಹಾರವನ್ನು ಹೃದಯ ಮತ್ತು ಮೆದುಳಿನ ಸ್ಥಿತಿಯನ್ನು ಕಾಪಾಡುವ ಕಣಗಳನ್ನಾಗಿ ಪರಿವರ್ತಿಸುತ್ತವೆ. ಈ ಕಾರಣಕ್ಕೆ ನಾರಿನಂಶ ಆಹಾರದಲ್ಲಿ ಅತ್ಯಗತ್ಯ. ಅದನ್ನು ಜೀರ್ಣಮಾಡುವ ಕಿಣ್ವ ನಮ್ಮಲ್ಲಿ ಇಲ್ಲ ನಿಜ. ಆದರೆ ನಮ್ಮ ಕರುಳಿನಲ್ಲಿರುವ ಬ್ಯಾಕ್ಟೀರಿಯಾಗಳು ನಾರಿನಂಶವನ್ನು ತಮ್ಮ ಶಕ್ತಿಗಾಗಿ ಬಳಸಿಕೊಳ್ಳುತ್ತವೆ. ಆಗ ಅದರ ತ್ಯಾಜ್ಯವಾಗಿ ಶಾರ್ಟ್ ಚೈನ್ ಮೇದೋ ಅಮ್ಲಗಳು ಉತ್ಪತ್ತಿಯಾಗುತ್ತವೆ. ಇವುಗಳು ನಮ್ಮ ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುತ್ತವೆ, ರೋಗನಿರೋಧಕ ವ್ಯವಸ್ಥೆಯನ್ನು ಸರಾಗಗೊಳಿಸುತ್ತದೆ; ಹೃದಯ ಹಾಗೂ ಮೆದುಳಿಗೆ ಶಕ್ತಿ ನೀಡುವ ಇಂಧನವಾಗಿಯೂ ಕೆಲಸ ಮಾಡುತ್ತದೆ. ಅಂದರೆ, ಒಂದು ಮಟ್ಟಿಗೆ ನಾವು ಬ್ಯಾಕ್ಟೀರಿಯಾಗಳ ತ್ಯಾಜ್ಯಗಳಿಂದ ಬದುಕುತ್ತಿದ್ದೇವೆ!
ನಮ್ಮ ಮತ್ತು ಈ ಸೂಕ್ಷ್ಮಾಣುಗಳ ಸಂಬಂಧವು ಕಡ್ಡಾಯವಾಗಿ ಗಡಿರೇಖೆಯನ್ನು ಉಲ್ಲಂಘಿಸಬಾರದು. ಕರುಳಿನ ಸೂಕ್ಷ್ಮಾಣುಗಳು ಕರುಳಿನಲ್ಲೇ ಇರಬೇಕು. ಇಷ್ಟೊಂದು ಸ್ನೇಹಮಯಿಯಾದ ಬ್ಯಾಕ್ಟೀರಿಯಾಗಳು ತಪ್ಪಾದ ಜಾಗದಲ್ಲಿದ್ದರೆ ಅವುಗಳು ಶತ್ರುಗಳಾಗುತ್ತವೆ. ಹೆಚ್ಚಿನ ಮೂತ್ರಕೋಶದ ಹಾಗೂ ಮೂತ್ರನಾಳದ ಸೋಂಕು ಕರುಳಿನ ಮಲದಲ್ಲಿನ ಬ್ಯಾಕ್ಟೀರಿಯಾಗಳಿಂದ ಉಂಟಾಗುತ್ತವೆ! ಯಾವಾಗ ಕರುಳಿನ ಗೋಡೆಗಳಿಗೆ ಹಾನಿಕಾರಕ ಆಹಾರ, ಆ್ಯಂಟಿಬಯೋಟಿಕ್‌ಗಳಿಂದ ಘಾಸಿಯಾಗುತ್ತದೆಯೋ, ಬ್ಯಾಕ್ಟೀರಿಗಳ ಸಮೂಹದಲ್ಲಿ ಬದಲಾವಣೆಗಳಾಗುತ್ತವೆ. ಹೊಸತಳಿಯ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತವೆ. ಅವುಗಳೊಂದಿಗೆ ಯಾವುದೇ ಒಪ್ಪಂದಕ್ಕೆ ನಾವು ಸಹಿ ಹಾಕಿರುವುದಿಲ್ಲ! ಈ ತರದ ಪರಿಸ್ಥಿತಿಗಳಿಂದ ಕರುಳಿನ ಉರಿಯೂತ ತರುವ ಕಾಯಿಲೆಗಳು (ಅಲ್ಸರೇಟಿವ್ ಕೊಲೈಟಿಸ್), ಶಿಶುಗಳಲ್ಲಿ ಬರುವ ನೆಕ್ರೋಟೈಸಿಂಗ್ ಎಂಟರೋಕೊಲೈಟಿಸ್ (ಕರುಳು ಸಂಪೂರ್ಣವಾಗಿ ಸತ್ತು ಹೋಗುವ ಸ್ಥಿತಿ), ತೀವ್ರ ಉರಿಯೂತ ತರುವ ಕಾಯಿಲೆಗಳಾದ ರುಮಾಟಾಯಿಡ್ ಆರ್ಥೈಟಿಸ್, ಡಯಾಬೀಟಿಸ್, ಅಲರ್ಜಿ ಕಾಯಿಲೆಗಳಾದ ಅಸ್ತಮಾ, ಚರ್ಮದಕಾಯಿಲೆಗಳು, ಬೊಜ್ಜು, ಕ್ಯಾನ್ಸರ್ ಹಾಗೂ ಮಾನಸಿಕ ಕಾಯಿಲೆಗಳು ಸಹಿತ ಕಾಣಿಸಿಕೊಳ್ಳತ್ತವೆ.
ಕೃತಕ ರಾಸಾಯನಿಕಗಳಿಂದ ಕೂಡಿದ ಆಹಾರ ಸೇವನೆಯಿಂದ ಕರುಳು ಬ್ಯಾಕ್ಟೀರಿಯಾಗಳು ರಕ್ತಕ್ಕೆ ಸೋರುವ ಮಾರ್ಗವಾಗಿ ಬಿಡುತ್ತದೆ. ಕರುಳಿನ ಗೋಡೆಗಳ ಸಮಗ್ರತೆಯನ್ನು ಮುರಿಯುವುದರಲ್ಲಿ ಪ್ರಸಿದ್ಧವಾದದ್ದು ಎರಡು. ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್ ಮತ್ತು ಪಾಲಿಸಾರ್ಬೇಟ್ 80 (ಇ433). ಪಾಲಿಸಾರ್ಬೇಟ್-80 ಹೆಚ್ಚಿನ ಐಸ್ ಕ್ರೀಮ್, ಟೂತ್‌ಪೇಸ್ಟ್, ಚರ್ಮದ ತೇವಾಂಶ ಉಳಿಸುವ ಕ್ರೀಮುಗಳು, ಶಾಂಪೂಗಳಲ್ಲಿ ಬಳಕೆಯಾಗುತ್ತದೆ. ಕಾರ್ಬಾಕ್ಸಿಮಿಥೈಲ್ ಸೆಲ್ಯುಲೋಸ್ (ಇ466) ದಪ್ಪವಾದ, ನುಣ್ಣನೆಯ ಸಂಸ್ಕರಿತ ಆಹಾರಗಳಲ್ಲಿ ಒಳಗೊಂಡಿರುತ್ತದೆ. ಕೆಲವು ಪ್ರಸಿದ್ಧ ಬ್ರಾಂಡ್‌ಗಳ ಫ್ಲೇರ‍್ಡ್ಮಿಲ್ಕ್, ಕುಕ್ಕಿಗಳು, ಮಿಲ್ಕ್ಶೇಕ್‌ಗಳಲ್ಲೂ ಇದು ಒಳಗೊಂಡಿದೆ. ಎಮಲ್ಸಿಫಯರ್‌ಗಳು ಹೆಲಿಕೋಬ್ಯಾಕ್ಟರ್ ಪೈಲೋರಿ ಎಂಬ ಕ್ಯಾನ್ಸರ್ ಮತ್ತು ಅಲ್ಸರ್‌ಗೆ ಕಾರಣವಾದ ಬ್ಯಾಕ್ಟೀರಿಯಾಗಳ ವರ್ಧನೆಗೆ ಪುಷ್ಟಿ ನೀಡುತ್ತವೆ. ಸಕ್ಕರೆ ಅಂಶವನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಕುಗ್ಗಿಸಿ ಡಯಾಬಿಟಿಸ್‌ಗೆ ಕಾರಣವಾಗುತ್ತವೆ.
“ನೇಚರ್” ಎಂಬ ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟವಾದಂತೆ_ “ಆಹಾರದಲ್ಲಿನ ಎಮಲ್ಸಿಫಯರ್‌ಗಳು ಈ ಶತಮಾನದ ಕರುಳಿನ ಉರಿಯೂತದ ಕಾಯಿಲೆಗಳು, ಮೆಟಾಬಾಲಿಕ್ ಕಾಯಿಲೆಗಳು, ಹಾಗೂ ಇತರ ದೀರ್ಘಕಾಲೀನ ಇನ್‌ಫ್ಲಾಮ್ಮೇಟರಿ ಕಾಯಿಲೆಗಳಿಗೆ ಕಾರಣವಾಗಿವೆ”. ಮಾಲ್ಟೋಡೆಕ್ಸ್ಟ್ರಿನ್‌ಗಳು ದೇಹದ ಪೊರೆಗಳಿಗೆ ಹಾನಿಯುಂಟು ಮಾಡಿ, ಕರುಳಿನ ಉರಿಯೂತಕೆ ಕಾರಣ ಹಾಗೂ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತವೆ. ರೋಗಕ್ಕೆ ಕಾರಣವಾದ ಸಾಲ್ಮೋನೆಲ್ಲಾ ಹಾಗೂ ಇ.ಕೊಲೈ ಬ್ಯಾಕ್ಟೀರಿಯಾಗಳು ಕರುಳಿನ ಮ್ಯೂಕಸ್ ಪೊರೆಯನ್ನು ಭೇದಿಸುತ್ತವೆ.
ಕ್ಯಾಂಥಾನ್ ಗಮ್ ಮಕ್ಕಳ ರೋಗನಿರೋಧಕ ವ್ಯವಸ್ಥೆಯ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಹೊಸತಳಿಯ ಮಾರಕ ಬ್ಯಾಕ್ಟೀರಿಯಾಗಳಿಗೆ ಇದು ಆಹಾರ. ಗ್ಲಿಸರಾಲ್ ಸ್ಟಿಯರೇಟ್, ಸಾರ್ಬಿಟಾನ್ ಮೋನೋಸ್ಟಿಯರೇಟ್, ಕರ‍್ರಾಜೀನನ್ ಇತ್ಯಾದಿ ಸಾಮಾನ್ಯವಾಗಿ ಆಹಾರೋದ್ಯಮದಲ್ಲಿ ಬಳಕೆಯಾಗುವ ಎಮಲ್ಸಿಫರ‍್ಗಳು. ಇವುಗಳೆಲ್ಲವೂ ನಮ್ಮ ಕರುಳಿನ ಉಪಕಾರ ಮಾಡುವ ಬ್ಯಾಕ್ಟೀರಿಯಾಗಳ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಮಾನವ ಅಧ್ಯಯನಗಳಿಂದ ಸಾಬೀತಾಗಿವೆ. ಇಷ್ಟೆಲ್ಲ ಮಾರಕವಾಗಿದ್ದರೂ ಕೂಡಾ, ಇವು ಹೇಗೆ ನಮ್ಮ ಆಹಾರದಲ್ಲಿ ಪ್ರಥಮಸ್ಥಾನದಲ್ಲಿದೆ ಎಂಬುದೇ ಯಕ್ಷಪ್ರಶ್ನೆ! ಗೋಬಿಮಂಚೂರಿ, ಮೀನಿನ ಖಾದ್ಯಗಳಿಗೆ ಕೃತಕ ಬಣ್ಣ ಹಾಕುವುದನ್ನು ಸರಕಾರ ನಿಷೇಧಿಸುವುದಕ್ಕೆ ತೀರ್ಮಾನಿಸಿದೆ. ಆದರೆ ಉಳಿದ ಖಾದ್ಯಗಳಿಗೆ ಹಾಕುವ ಮಾರಕ ರಾಸಾಯನಿಕಗಳ ಬಗ್ಗೆ ಜಾಣ ಕುರುಡು ಪ್ರದರ್ಶನ ಏಕೆ?

. . . . .

ಆಯುರ್ವೇದ ಧನ್ವಂತರಿ,
ಡಾ.ರಾಘವೇಂದ್ರ ಪ್ರಸಾದ್ ಬಂಗಾರಡ್ಕ. ಬಿ.ಎ.ಎಂ.ಎಸ್.,ಎಂ.ಎಸ್.(ಆಯು)
ಆಡಳಿತ ನಿರ್ದೇಶಕರು, ಖ್ಯಾತ ಆಯುರ್ವೇದ ತಜ್ಞವೈದ್ಯರು
ಪ್ರಸಾದಿನೀ ಆಯುರ್ನಿಕೇತನ ಆಯುರ್ವೇದ ಆಸ್ಪತ್ರೆ, ನರಿಮೊಗರು, ಪುತ್ತೂರು.
ಮೊಬೈಲ್: 9740545979

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!