ಸುಳ್ಯ: ಇತಿಹಾಸ ಪ್ರಸಿದ್ಧ ಮಂಡೆಕೋಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಮುಹೂರ್ತ ಕೂಡಿ ಬಂದಿದ್ದು ಇಂದಿನಿಂದ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ವಿಧಿ ವಿಧಾನಗಳು ಆರಂಭಗೊಳ್ಳಲಿವೆ.
ಕಳೆದ ಎರಡೂವರೆ ತಿಂಗಳುಗಳಿಂದ ಊರ ಜನತೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕಾಗಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಕೊನೆಗೂ ಆ ಧಾರ್ಮಿಕ ಕಾರ್ಯಕ್ರಮದ ಆರಂಭಿಕ ವಿಧಾನಗಳು ಇಂದಿನಿಂದ ಪ್ರಾರಂಭಗೊಳ್ಳಲಿದೆ. ವೇದಮೂರ್ತಿ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಹಾಗೂ ವೇದಮೂರ್ತಿ ಕುಂಟಾರು ರವೀಶ ತಂತ್ರಿಗಳವರ ನೇತ್ರತ್ವದಲ್ಲಿ ಈ ಬ್ರಹ್ಮಕಲಶೋತ್ಸವದ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.
ಇಂದು ಸಂಜೆ 4.30 ಕ್ಕೆ ಪೂರ್ಣಕುಭ ಸ್ವಾಗತದೊಂದಿಗೆ ಕ್ಷೇತ್ರದ ತಂತ್ರಿಗಳನ್ನು ಬರಮಾಡಿಕೊಳ್ಳಲಾಗುವುದು. ಸಂಜೆ 6.30 ರಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಅಂಕುರಾರೋಪಣ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾದಿಗಳಿಂದ ದೇಗುಲಕ್ಕೆ ಹಸಿರುವಾಣಿ ಸಮರ್ಪಣೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನಿಮಿತ್ತ ಭಕ್ತಾದಿಗಳಿಂದ ಹಸಿರುವಾಣಿ ಸಮರ್ಪಣಾ ಕಾರ್ಯಕ್ರಮ ಎಪ್ರಿಲ್ 27 ರ ಶನಿವಾರ ನಡೆಯಲಿದೆ. ಆ ದಿನ ಬೆಳಿಗ್ಗೆ 11 ಕ್ಕೆ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಬಳಿಯಿಂದ ಹಸಿರುವಾಣಿ ಮೆರವಣಿಗೆ ನಡೆಯಲಿದ್ದು ಮೆರವಣಿಗೆಯಲ್ಲಿ ಊರ ಜನತೆ ಸಾಂಪ್ರದಾಯಿಕ ದಿರಿಸಿನೊಂದಿಗ ಭಾಗವಹಿಸಿ ತಮ್ಮ ಭಕ್ತ್ಯಾನುಸಾರ ಹಸಿರು ಕಾಣಿಕೆಯನ್ನು ದೇಗುಲಕ್ಕೆ ಸಮರ್ಪಿಸಲಿದ್ದಾರೆ.
ಎಪ್ರಿಲ್ 27 ರ ಭಾನುವಾರ ಬೆಳಿಗ್ಗೆ 6 ಕ್ಕೆ ದೇಗುಲದಲ್ಲಿ ಗಣಪತಿ ಹೋಮ, ಪ್ರಾಯಶ್ಚಿತ ಹೋಮ, ಬಿಂಬ ಶುದ್ಧಿ ನಡೆಯಲಿದೆ. ಭಕ್ತ ಸಮೂಹದಲ್ಲಿ ಹರಿ ನಾಮಸ್ಮರಣೆ ಜಾಗೃತಗೊಳಿಸಲು ದೇಗುಲದ ವತಿಯಿಂದ ಆಯೋಜಿಸಲಾದ ಕೋಟಿ ಲೇಖನ ಯಜ್ಞ ಅಭಿಯಾನದ ಸಮಾರೋಪವೂ ಆ ದಿನ ನಡೆಯಲಿದ್ದು ಭಕ್ತರು ತಮ್ಮ ಪುಸ್ತಕದಲ್ಲಿ ದಾಖಲಿಸಿದ ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರಗಳ ಮಂಗಲೋತ್ಸವ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರೀ ಕೃಷ್ಣ ಭಜನಾ ಮಂದಿರ ಮೇನಾಲ ಹಾಗೂ ಶ್ರೀ ಪಂಚಲಿಂಗೇಶ್ವರ ಭಜನಾ ಸಂಘ ಮಲ್ಲಾವರ ಆದೂರಿನ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಮಧ್ಯಾಹ್ನ 12 ಕ್ಕೆ ಅಂಕುರ ಪೂಜೆ ಹಾಗೂ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರ ಹಾಗೂ ಅಡೂರಿನ ಶ್ರೀ ಮಹಾಲಿಂಗೇಶ್ವರ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 5 ರಿಂದ ಶಾಲಾ ಮಕ್ಕಳಿಂದ ಹಾಗೂ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಲಿದೆ.
ರಾತ್ರಿ 7 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ರಾಜ್ಯದ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಉದ್ಘಾಟಿಸಲಿದ್ದಾರೆ. ಆದಿಚುಂಚನಗಿರಿ ಶಾಖಾಮಠ ಮಂಗಳೂರಿನ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಖ್ಯಾತ ವಾಗ್ಮಿ ಕುಮಾರಿ ಶ್ರೀದೇವಿ ಪುತ್ತೂರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅಲ್ಲದೆ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ರಮಾನಾಥ ರೈ, ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯರಾದ ಭೋಜೇ ಗೌಡ, ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್ ವಹಿಸಲಿದ್ದಾರೆ.
ರಾತ್ರಿ 9 ರಿಂದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ಸಂಗೀತ ಗಾನ ಸಂಭ್ರಮ ನಡೆಯಲಿದೆ.
ಎಪ್ರಿಲ್ 28 ರ ಭಾನುವಾರ ಬೆಳಿಗ್ಗೆ 6 ಕ್ಕೆ ಗಣಪತಿ ಹೋಮ, ಶಾಂತಿ ಹೋಮ, ದಹನ ಪ್ರಾಯಶ್ಚಿತ ತ್ರಿಕಾಲ ಪೂಜೆ ನಡೆಯಲಿದೆ. 8 ಗಂಟೆಗೆ ಅಡೂರು, ದೇಲಂಪಾಡಿಯ ಗೀತಾ ಜ್ಞಾನ ಯಜ್ಞ ಸಮಿತಿ ಸದಸ್ಯರಿಂದ ಭಗವದ್ ಗೀತಾ ಪಾರಾಯಣ ನಡೆಯಲಿದೆ. ಬೆಳಿಗ್ಗೆ 10 ರಿಂದ ಪೇರಾಲು ಶ್ರೀ ರಾಮ ಭಜನಾ ಮಂದಿರ ಹಾಗೂ ಜಾಲ್ಸೂರು ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅಪರಾಹ್ನ 3 ಗಂಟೆಯ ನಂತರ ಆಲೆಟ್ಟಿಯ ಶ್ರೀ ಸದಾಶಿವ ಭಜನಾ ಸಂಘ ಹಾಗೂ ಮಾವಿನಕಟ್ಟೆಯ ಶ್ರೀ ಅಯ್ಯಪ್ಪ ಭಜನಾ ಮಂದಿರದ ವತಿಯಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಬೆಳ್ತಂಗಡಿಯ ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ರಾಮಕೃಷ್ಣ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜಾ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ ವಹಿಸಲಿದ್ದಾರೆ.
ರಾತ್ರಿ 8.30 ರಿಂದ ನೃತ್ಯ ವಿದುಷಿ ಕು. ಅಪೂರ್ವ ಪಾವೂರು ಮತ್ತು ಬಳಗದವರಿಂದ ನೃತ್ಯ ವೈವಿಧ್ಯ ನಡೆಯಲಿದೆ.
ದಿನಾಂಕ ಎಪ್ರಿಲ್ 29 ರ ಸೋಮವಾರ ಬೆಳಿಗ್ಗೆ 6 ರಿಂದ ಗಣಪತಿ ಹೋಮ, ತತ್ವಕಲಶಾಭಿಷೇಕ, ಅನುಜ್ಞಾಕಲಶಾಭಿಷೇಕ ಹಾಗೂ ತ್ರಿಕಾಲ ಪೂಜೆ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಕಲ್ಲಡ್ಕ-ಪೆರಾಜೆಯ ಶ್ರೀ ರಾಮ ಭಜನಾ ಸಂಘ ಹಾಗೂ ಮುಳ್ಯದ ಶ್ರೀ ಮಹಾಗಣಪತಿ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸಂಜೆ 3 ಗಂಟೆಯ ಬಳಿಕ ದೊಡ್ಡೇರಿ ಶ್ರೀ ವನದುರ್ಗಾ ಭಜನಾ ಮಂದಿರ ಹಾಗೂ ಮುರೂರಿನ ಶ್ರೀ ಕೃಷ್ಣ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಕ್ಕೆ ನಡೆಯುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಲಿದ್ದಾರೆ. ಒಡಿಯೂರಿನ ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅಖಿಲ ಭಾರತ ಕುಟುಂಬ ಪ್ರಬೋಧನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಅಶೋಕ್ ಕುಮಾರ್ ರೈ, ಉಮಾನಾಥ ಕೋಟ್ಯಾನ್, ಮಂಗಳೂರು ಕಂಬಳ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಬೃಜೇಶ್ ಚೌಟ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸದಾನಂದ ಮಾವಜಿ ವಹಿಸಲಿದ್ದಾರೆ.
ಗ್ರಂಥಾಲಯದ ಪುಟಾಣಿಗಳಿಂದ ಯಕ್ಷಗಾನ
ಕಳೆದ ಕೆಲ ತಿಂಗಳುಗಳಿಂದ ಊರಿನ ಪುಟಾಣಿ ಮಕ್ಕಳು ಯಕ್ಷಗಾನ ನಾಟ್ಯ ಕಲಿಯುತ್ತಿದ್ದು ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ವೇದಿಕೆಯಲ್ಲಿ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡುವ ಉತ್ಸಾಹದಲ್ಲಿದ್ದಾರೆ. ಯಕ್ಷಗಾನ ಗುರುಗಳಾದ ಯಕ್ಷ ಸಾಮ್ರಾಟ ಯಕ್ಷನಿಧಿ ಯಕ್ಷರಸ ರಾಗಾಂಬುನಿಧಿಯೋಗೀಶ್ ಶರ್ಮ ಅಳದಂಗಡಿ ಅವರು ಪುಟಾಣಿ ಮಕ್ಕಳನ್ನು ಯಕ್ಷಗಾನಕ್ಕಾಗಿ ಅಣಿಗೊಳಿಸಿದ್ದು ರಾತ್ರಿ ಎಪ್ರಿಲ್ 29 ರ ರಾತ್ರಿ 8.30 ಕ್ಕೆ ‘ ಏಕಾದಶಿ ದೇವಿ ಮಹಾತ್ಮೆ’ ಎಂಬ ಪ್ರಸಂಗವನ್ನು ಆಡಿ ತೋರಿಸಲಿದ್ದಾರೆ. ಬಳಿಕ ಮಂಗಳಾ ದೇವಿ ಮೇಳದ ಕಲಾವಿದರಿಂದ ‘ಸಾರ್ಲಪಟ್ಟೊದ ಸತ್ಯ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.
ಎಪ್ರಿಲ್ 30 ರ ಬೆಳಿಗ್ಗೆ 6 ಗಂಟೆಗೆ ಗಣಪತಿ ಹೋಮ, ತ್ರಿಕಾಲ ಪೂಜೆ, ಸಂಹಾರ ತತ್ವ ಹೋಮ, ಶಯ್ಯಾ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವೈದಿಕ ಕಾರ್ಯಕ್ರಮಗಳು ನಡೆಯಲಿವೆ. 10 ಗಂಟೆಯ ಬಳಿಕ ಗುರುನಗರ-ಕನ್ಯಾನದ ಶ್ರೀ ಗುರುರಾಘವೇಂದ್ರ ಭಜನಾ ಮಂದಿರ ಹಾಗೂ ಅಜ್ಜಾವರದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1 ರ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3 ಗಂಟೆಯ ಬಳಿಕ ಸುಳ್ಯ ಮಹಿಳಾ ಪರಿಷತ್ ಹಾಗೂ ಅಂಜನಾದ್ರಿ-ಜಾಲ್ಸೂರಿನ ಶ್ರೀ ಪ್ರಸನ್ನಾಂಜನೇಯ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.
ಸಂಜೆ 7 ಗಂಟೆಗೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವ ಎಸ್ ಅಂಗಾರ ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ. ಎಡನೀರಿನ ಜಗದ್ಗುರು ಶಂಕರಾಚಾರ್ಯ ಪೀಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಕುಂಟಾರಿನ ಬ್ರಹ್ಮಶ್ರೀ ರವೀಶ ತಂತ್ರಿ ಅವರು ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಸೇವಾ ಪ್ರಮುಖ್ ನ.ಸೀತಾರಾಮ, ಶಾಸಕ ರಾಜೇಶ್ ನಾಯಕ್, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ.
ರಾತ್ರಿ 8.30 ರಿಂದ ಮಂಜೇಶ್ವರದ ಶಾರದಾ ಆರ್ಟ್ಸ್ ತಂಡದ ಐಸಿರಿ ಕಲಾವಿದರಿಂದವ ‘ಕಲ್ಜಿಗದ ಮಾಯ್ಕಾರೆ ಪಂಜುರ್ಲಿ’ ಎಂಬ ನಾಟಕ ಪ್ರದರ್ಶನ ನಡೆಯಲಿದೆ.
ದಿನಾಂಕ 1/5/2024 ರಂದು ಬೆಳಿಗ್ಗೆ 5.30 ರಿಂದ 108 ತೆಂಗಿನಕಾಯಿಯ ಗಣಪತಿ ಹೋಮ, ಪ್ರತಿಷ್ಠಾ ಪಾಣಿ ಕಾರ್ಯಕ್ರಮ ನಡೆಯಲಿದೆ. ನಂತರ 10.18 ರ ಮಿಥುನ ಲಗ್ನದ ಸುಮುಹೂರ್ತದಲ್ಲಿ ಶ್ರೀ ದೇವರ ಪುನರ್ ಪ್ರತಿಷ್ಠೆ ಮತ್ತು ದುರ್ಗಾಂಬಿಕೆ ದೇವಿ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ, ಪ್ರತಿಷ್ಠಾ ಬಲಿ, ಮಹಾಪೂಜೆ, ಮಹಾ ಮಂತ್ರಾಕ್ಷತೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಕಾರ್ಯಕ್ರಮ ಪ್ರಯುಕ್ತ ಶ್ರೀ ಉಳ್ಳಾಕುಲು ಮೂಲಸ್ಥಾನ ಕಳೇರಿಯಿಂದ ಭಂಡಾರ ತರುವ ಕಾರ್ಯಕ್ರಮ ಅಪರಾಹ್ನ 4 ಕ್ಕೆ ನಡೆಯಲಿದೆ. ಸಂಜೆ 5.30 ರಿಂದ ಸತ್ಯನಾರಾಯಣ ಪೂಜೆ ನಡೆದು ನಂತರ ಭೂತಬಲಿ ಉತ್ಸವ, ಬಲಿಕಟ್ಟೆ ಪೂಜೆ, ವಸಂತೋತ್ಸವ, ಬೆಡಿ ಉತ್ಸವ ಹಾಗೂ ನೃತ್ಯ ಬಲಿ ಉತ್ಸವ ನಡೆಯಲಿದೆ.
ಮೇ 2 ರ ಗುರುವಾರ ಪೂರ್ವಾಹ್ನ 8 ಕ್ಕೆ ದೇವರ ದರ್ಶನಬಲಿ ಉತ್ಸವ ನಡೆಯುತ್ತದೆ. ಬಳಿಕ ರಾಜಾಂಗಣ ಪ್ರಸಾದ ಹಾಗೂ ಮಂತ್ರಾಕ್ಷತೆ ನಡೆಯಲಿದೆ. ಸಂಜೆ 5 ಗಂಟೆಗೆ ಮಂಡೆಕೋಲಿನ ಅಯ್ಯಪ್ಪ ಸ್ವಾಮಿ ಭಜನಾ ಮಂದಿರ ಹಾಗೂ ಶ್ರೀ ಮಹಾವಿಷ್ಣು ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8 ಕ್ಕೆ ದುರ್ಗಾಪೂಜೆ, ರಂಗಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಉಳ್ಳಾಕುಲು ನೇಮೋತ್ಸವ, ಅಡ್ಡಣಪೆಟ್ಟು
ಮೇ 3 ರ ಶುಕ್ರವಾರ ಬೆಳಿಗ್ಗೆ ಗಂಟೆ 9 ಕ್ಕೆ ಉಳ್ಳಾಕುಲು ನೇಮೋತ್ಸವ ನಡೆಯಲಿದ್ದು ಧಾರ್ಮಿಕ ಮಹತ್ವದ ಅಡ್ಡಣಪೆಟ್ಟು ಕಾರ್ಯಕ್ರಮವೂ ನಡೆಯಲಿದೆ. ಮಧ್ಯಾಹ್ನ 12.30 ರಿಂದ ಉದ್ರಾಂಡಿ ಹಾಗೂ ಉಪದೈವಗಳ ಕೋಲ ನಡೆದು ನಂತರ ಅನ್ನಸಂತರ್ಪಣೆ ನಡೆಯಲಿದೆ.
ಸಂಜೆ 4 ಕ್ಕೆ ಕಣೆಮರಡ್ಕ ವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರ ತಂದ ಬಳಿಕ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯಲಿದೆ.