ಮಂಗಳೂರು:
ನರೇಂದ್ರ ಮೋದಿಯವರ ವಿಕಸಿತ ಭಾರತದ ಸಂಕಲ್ಪದ ಜೊತೆ ದ.ಕ.ಜಿಲ್ಲೆಯನ್ನು ವಿಕಸಿತ ಜಿಲ್ಲೆಯಾಗಿ ಬದಲಾವಣೆಯನ್ನು ಮಾಡುವ ಕನಸು ಕಂಡಿರುವ ನನಗೆ ಜಿಲ್ಲೆಯ ಜನತೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ಲೋಕಸಭಾ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಅವರು ಹೇಳಿದರು.
ಅವರು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ವತಿಯಿಂದ ಬಿಸಿರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆದ ಪ್ರಬುದ್ದರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಂಟ್ವಾಳ ಕ್ಷೇತ್ರದಲ್ಲಿ ಮತದಾರರನ್ನು ಬಿಜೆಪಿಯವರನ್ನಾಗಿ ಮಾರ್ಪಾಡು ಮಾಡುವ ಶಕ್ತಿ ಪ್ರಬುಧ್ದರಿಗೆ ಇದೆ ಎಂಬ ವಿಶ್ವಾಸವಿದ್ದು, ಚುನಾವಣೆಯಲ್ಲಿ ಬದಲಾವಣೆಗೆ ಪ್ರಬುದ್ಧರ ಪಾತ್ರ ಮಹತ್ತರವಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ನಾನು ಬದ್ದನಿದ್ದು, ಇದು ನನ್ನ ಅಜೆಂಡಾವಾಗಿದೆ ಎಂದು ತಿಳಿಸಿದರು.
ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸುವ ಸಂಘಟನೆ ಮತ್ತು ವ್ಯಕ್ತಿಗಳನ್ನು ಮಟ್ಟ ಹಾಕಲು ಕಾನೂನಡಿಯಲ್ಲಿ ವ್ಯವಸ್ಥೆ ಮಾಡುತ್ತೇನೆ. ಪ್ರವೀಣ್ ನೆಟ್ಟಾರು ಹತ್ಯೆಗೆ ಕಾರಣೀಕರ್ತರಾದ ವ್ಯಕ್ತಿಗಳನ್ನು ಹಾಗೂ ಪಿಎಫ್ ಐ ಸಂಘಟನೆಯನ್ನು ಬ್ಯಾನ್ ಮಾಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.
ರಾಷ್ಟ್ರದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ತರವಾದ ಚುನಾವಣೆಯಾಗಿದ್ದು, ಮೋದಿಯವರ ಆಡಳಿತದ ಅವಧಿಯಲ್ಲಿ ಆಗಿರುವ ಉತ್ತಮ ಯೋಜನೆಗಳನ್ನು ಜನರಿಗೆ ತಿಳಿಸಿ, ಜನಾಭಿಪ್ರಾಯ ಮೂಡಿಸುವಲ್ಲಿ ಸುಸಂಸ್ಕೃತ ಸಮಾಜದ ಜನರ ದೊಡ್ಡ ಪಾತ್ರವಿದೆ. ದೇಶದ ಆಡಳಿತ ವ್ಯವಸ್ಥೆಯಲ್ಲಿ, ಬದಲಾವಣೆಯ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು, ನೀತಿ ನಿಯಮಗಳ ರೂಪಿಸುವಲ್ಲಿ ಯುವಸಮುದಾಯದ ಪಾಲುಗೊಳ್ಳುವಿಕೆಗೆ ಮೋದಿಯವರ ಆಡಳಿತದ ಮೂಲಕ ಸಾಧ್ಯವಾಯಿತು ಎಂದು ತಿಳಿಸಿದರು. ದೇಶದ ನಾಗರಿಕತೆ, ಪರಂಪರೆಯನ್ನು ಮುಂದಿಟ್ಟುಕೊಂಡು, ಯಾರನ್ನು ತುಷ್ಟೀಕರಣ ಮಾಡದೆ ಆಡಳಿತ ಮಾಡಿದ್ದಲ್ಲದೆ, ರಾಜಕೀಯದಲ್ಲಿ ಹೊಸ ಭಾಷ್ಯವನ್ನು ಬರೆದವರು ನರೇಂದ್ರ ಮೋದಿಯವರು ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಲ್ಲಿ ನಡೆದಿರುವ ಮಹತ್ತರವಾದ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಕಾರಣವಾಗಿದ್ದು,ಜಗತ್ತೇ ಮೆಚ್ಚುಗೆ ಪಡೆದಿದೆ. ಈ ವಿಚಾರ ಭಾರತದ ಪ್ರತಿಯೊಬ್ಬ ಪ್ರಜೆಗೂ ತಿಳಿದಿರುವ ವಿಚಾರವಾಗಿದೆ. ಮುಂದಿನ ಅವಧಿಯಲ್ಲಿ ಬಹಳಷ್ಟು ದೊಡ್ಡ ಯೋಜನೆಗಳನ್ನು ಜಾರಿಮಾಡಲು 400 ಕ್ಕೂ ಅಧಿಕ ಸ್ಥಾನಗಳ ಅಗತ್ಯವಿದ್ದು, ಮೋದಿಯವರ ಕಂಡಿರುವ ಕನಸನ್ನು ಕೈಗೂಡಲು, ಪ್ರತಿಯೊಬ್ಬರು ಬಿಜೆಪಿಗೆ ಮತನೀಡಿ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣಬಂಟ್ವಾಳ, ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಚುನಾವಣಾ ಪ್ರಭಾರಿಗಳಾದ ಜಗದೀಶ್ ಶೇಣವ, ಪೂಜಾ ಪೈ ಜಿಲ್ಲಾ ಕಾರ್ಯದರ್ಶಿ, ನಿರ್ವಹಣಾ ಸಮಿತಿ ಸಂಚಾಲಕ ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.
- Saturday
- November 23rd, 2024